ಎಂಟರಂತಿದ್ದ ಸೊಂಟ ಹೀಗೇಕಾಯಿತು? ಇದು ಬೊಜ್ಜಿನ ಕಥೆ... ಹಾಲಾಯಿತು ಹಾಲಾಹಲ!

Sonta
Published on

‘ಹಿಂದೆ ಮಹಿಳೆಯರ ಸೊಂಟ 8ರಂತೆ ಇರುತ್ತಿತ್ತು, ಈಗ ವಿದೇಶಿ ಹಸುಗಳ ಹಾಲು ಕುಡಿದು ಬ್ಯಾರಲ್​ಗಳಂತಾಗಿದೆ’ ಎಂದು ಕಳೆದ ವಾರ ತಮಿಳುನಾಡಿನ ಚುನಾವಣಾ ಪ್ರಚಾರದಲ್ಲಿ ಡಿಎಂಕೆ ಅಭ್ಯರ್ಥಿ ದಿಂಡಿಗುಲ್ ಲಿಯೋನಿ ಹೇಳಿ ಭಾರಿ ವಿವಾದಕ್ಕೆ ಒಳಗಾದರು. ರಾಜಕೀಯ ಏನೇ ಇರಲಿ, ವಾಸ್ತವದಲ್ಲಿ ಇದು ನಿಜವೆ? ವೈಜ್ಞಾನಿಕ ಸಂಶೋಧನೆ ಹಾಗೂ ತಜ್ಞರು ಹೇಳುವುದೇನು? ಇಲ್ಲಿದೆ ನೋಡಿ ಸತ್ಯಾಂಶ.

 |ಸುಚೇತನಾ ನಾಯ್ಕ

ಕಳೆದ ವಾರ ತಮಿಳುನಾಡಿನ ಡಿಎಂಕೆ ಅಭ್ಯರ್ಥಿ ದಿಂಡಿಗುಲ್ ಲಿಯೋನಿ ಚುನಾವಣಾ ಪ್ರಚಾರದ ಸಮಯದಲ್ಲಿ ಮಹಿಳೆಯರ ಕುರಿತು ಹೇಳಿಕೆ ನೀಡಿ ಮಹಿಳಾವಾದಿಗಳು ಸೇರಿದಂತೆ ಬಹುತೇಕರ ಕೆಂಗಣ್ಣಿಗೆ ಗುರಿಯಾದರು. ಅಷ್ಟಕ್ಕೂ ಅವರು ಹೇಳಿದ್ದು ಏನೆಂದರೆ, ‘‘ಮಹಿಳೆಯರು ಈಗ ವಿದೇಶೀ ಹಸುಗಳ ಹಾಲು ಕುಡಿಯುತ್ತಿದ್ದಾರೆ. ಅವರು ಹೆಚ್ಚು ತೂಕ ಗಳಿಸಿರುವುದಕ್ಕೆ ಇದೇ ಕಾರಣ. ಹಿಂದಿನ ಕಾಲದಲ್ಲಿ ಮಹಿಳೆಯ ಸೊಂಟ 8 ಅಂಕಿಯನ್ನು ಹೋಲುತ್ತಿತ್ತು. ಮಗುವನ್ನು ಎತ್ತಿಕೊಂಡರೆ ಅದು ಸೊಂಟದ ಮೇಲೆ ಹಾಗೇ ಕೂರುತ್ತಿತ್ತು. ಈಗ ಅವರು ಡ್ರಮ್ಮಿನಂತೆ ಆಗಿದ್ದಾರೆ. ಆದ್ದರಿಂದ ತಮ್ಮ ಮಕ್ಕಳನ್ನು ಸೊಂಟದ ಮೇಲೆ ಎತ್ತಿಕೊಳ್ಳಲಾಗುತ್ತಿಲ್ಲ’’ ಎಂದಿದ್ದರು. ಲಿಯೋನಿ ನೀಡಿದ ಈ ಹೇಳಿಕೆ, ಅದಕ್ಕಾಗಿ ಆಯ್ದುಕೊಂಡ ವೇದಿಕೆ, ಸಂದರ್ಭ ಎಲ್ಲವೂ ತಪ್ಪೇ. ಅವರು ಹೇಳಿದ ಧಾಟಿ ಕೂಡ ಅಪಹಾಸ್ಯ ಮಾಡುವಂತಿತ್ತು. ಮಹಿಳೆಯರನ್ನು ಮಾತ್ರ ಗುರಿಯಾಗಿಟ್ಟುಕೊಂಡು ಈ ಮಾತು ಹೇಳಿದ್ದು ಕೂಡ ಸರಿಯಲ್ಲ ಎನ್ನುವುದರಲ್ಲಿ ಎರಡು ಮಾತೇ ಇಲ್ಲ. ಆದರೆ...? ಆದರೆ... ಅವರಾಡಿದ ಮಾತಿನಲ್ಲಿ ಅಸತ್ಯವಾದುದು ಏನೂ ಇಲ್ಲ ಎಂಬುದು ಬಹುತೇಕರ ಅನಿಸಿಕೆ. ವಿದೇಶಿ ತಳಿಯ ಹಸು ಎಂದರೆ ಜೆರ್ಸಿ ತಳಿಯ ಹಸು. ಈಗ ಸಾಮಾನ್ಯವಾಗಿ ಎಲ್ಲರೂ ಕುಡಿಯುತ್ತಿರುವುದು ಅವುಗಳ ಹಾಲನ್ನೇ. ಆ ಹಾಲಿನಿಂದಲೇ ಅನೇಕ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ ಎನ್ನುತ್ತವೆ ಅಧ್ಯಯನ ವರದಿಗಳು. ಅದರಲ್ಲಿಯೂ ಮಹಿಳೆಯರಲ್ಲಿ ಬೊಜ್ಜು ಹೆಚ್ಚಾಗಲು, ಸೊಂಟದ ಸುತ್ತಲೂ ಬೊಜ್ಜು ತುಂಬಿಕೊಳ್ಳಲು ಇರುವ ಅನೇಕ ಕಾರಣಗಳಲ್ಲಿ ಈ ಹಾಲಿನ ಸೇವನೆಯೂ ಒಂದು ಕಾರಣ ಎಂದು ವೈದ್ಯಕೀಯ ಸಂಶೋಧನೆಗಳು ಸಾಬೀತು ಮಾಡಿವೆ.

ಹೀಗಾಗಲು ಕಾರಣವೇನು?

ದೇಸಿ ಹಸುಗಳು ಸಾಮಾನ್ಯವಾಗಿ ಒಂದೆರಡು ಲೀಟರ್ ಹಾಲು ಮಾತ್ರ ನೀಡುತ್ತವೆ. ಹಿಂದೆಲ್ಲಾ (ಈಗ ಕೆಲವೇ ಹಳ್ಳಿಗಳಲ್ಲಿ) ಪ್ರತಿ ಮನೆಯಲ್ಲಿಯೂ ಹತ್ತಾರು ದೇಸಿ ಹಸುಗಳನ್ನು ಸಾಕಿ ಅವುಗಳಿಂದ ಬಂದ ಹಾಲನ್ನು ಮಾರಾಟ ಮಾಡಿ ಸಂಸಾರವನ್ನು ಸರಿದೂಗಿಸುತ್ತಿದ್ದರು. ಆದರೆ ಯಾವಾಗ ಹಾಲಿನ ಉದ್ಯಮ ಬೃಹದಾಕಾರವಾಗಿ ಬೆಳೆಯತೊಡಗಿತೋ ಆಗಲೇ ಹುಟ್ಟಿಕೊಂಡಿದ್ದು, ಹಸುಗಳ ಕುಲಾಂತರ ತಳಿ. ಆ ತಳಿಗಳೇ ಹೆಚ್ಚು ಹೆಚ್ಚು ಹಾಲು ನೀಡತೊಡಗಿವೆ. ಕೋಳಿಗಳು ಬಲುಬೇಗನೇ ದಷ್ಟಪುಷ್ಟವಾಗಿ ಮಾಂಸ ನೀಡಲಿ ಎನ್ನುವ ಕಾರಣಕ್ಕೆ ಅವುಗಳಿಗೆ ಚುಚ್ಚುಮದ್ದು ನೀಡಿ ಹೇಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತೆ ಮಾಡಲಾಗುತ್ತಿದೆಯೋ ಅದೇ ರೀತಿ ಹಸುಗಳ ಹಾಲಿನ ಪ್ರಮಾಣವನ್ನು ಹೆಚ್ಚಿಸಲು ಸೆ್ಟೆರಾಯಿಡ್ ಅಂಶವುಳ್ಳ ಚುಚ್ಚುಮದ್ದುಗಳನ್ನು ಹಸುವಿಗೆ ಕೊಡಲು ಆರಂಭಿಸಿದರು. ಇದರ ಪರಿಣಾಮವಾಗಿ 20-25 ಲೀಟರ್ ಹಾಲು ಕೊಡುವ ಹಸುಗಳು ಹುಟ್ಟಿಕೊಂಡವು. ಹೀಗೆ ಪ್ರಕೃತಿಗೆ ವಿರುದ್ಧವಾಗಿ ಇಂಜೆಕ್ಷನ್ ಮೂಲಕ ಹಾಲಿನ ಪ್ರಮಾಣ ಹೆಚ್ಚು ಮಾಡಲಾಗಿದೆ. ಹಸುಗಳಿಗೆ ನೀಡುವ ಸ್ಟೆರಾಯಿಡ್​ನ ಸೂಕ್ಷ್ಮ ಕಣಗಳು ಹಾಲನ್ನು ಸೇರತೊಡಗಿವೆ. ಇದೇ ಕಾರಣಕ್ಕೆ ಇದನ್ನು ಕುಡಿಯುವವರ ಮೇಲೆ ಗಂಭೀರ ಸ್ವರೂಪದ ಅಡ್ಡ ಪರಿಣಾಮಗಳು ಆಗತೊಡಗಿವೆ. ಇದು ಮಹಿಳೆ- ಪುರುಷರು, ಮಕ್ಕಳು- ವಯೋವೃದ್ಧರು ಎನ್ನುವ ಭೇದವಿಲ್ಲದೇ ಎಲ್ಲರ ಮೇಲೂ ಗಂಭೀರ ಪ್ರಭಾವ ಬೀರುತ್ತಿರುವುದು ನಿಜವಾದರೂ ಮಹಿಳೆಯರ ಸೊಂಟದ ಸುತ್ತಲೂ ಶೇಖರಣೆಯಾಗುತ್ತಿರುವ ಬೊಜ್ಜಿಗೆ ಕೂಡ ಇದೇ ಕಾರಣವಾಗಿದೆ. ಹಾಗಿದ್ದ ಮೇಲೆ ಥಳಕು ಬಳುಕಿನ ಸೊಂಟವೆಲ್ಲಿ? ಮಗುವನ್ನು ಎತ್ತಿಕೊಂಡು ಹೋಗಲು, ಕೊಡಗಳನ್ನು ಸೊಂಟದ ಮೇಲೆ ಇಟ್ಟುಕೊಂಡು ನಡೆಯಲು ಹಿಂದಿನವರಂತೆ ಇಂದಿನ ಬಹುತೇಕ ಮಹಿಳೆಯರಿಗೆಲ್ಲಿ ಸಾಧ್ಯವಾದೀತು?

ಎಳವೆಯಲ್ಲಿಯೇ ಋತುಮತಿ...

ಇಂದು ಬಹುತೇಕ ಬಾಲಕಿಯರು 7-8 ವರ್ಷಗಳಲ್ಲಿಯೇ ಋತುಮತಿಯಾಗುತ್ತಿದ್ದಾರೆ. ಅದಕ್ಕೆ ಇರುವ ಕಾರಣಗಳಲ್ಲಿ ಜೆರ್ಸಿ ತಳಿಯ ಹಾಲಿನ ಸೇವನೆ ಕೂಡ ಒಂದು ಎನ್ನುತ್ತಾರೆ ತಜ್ಞ ವೈದ್ಯರು. ಅಮ್ಮನ ಎದೆಹಾಲಿನಷ್ಟು ಅಮೃತ ಮತ್ತೊಂದಿಲ್ಲ. ಆದರೆ ಮಗು ಅಮ್ಮನ ಎದೆಹಾಲನ್ನು ಬಿಟ್ಟ ತಕ್ಷಣ ಅದಕ್ಕೆ ಯಾವುದೇ ಕಾರಣಕ್ಕೂ ಹಸುವಿನ ಹಾಲನ್ನು ಕೊಡಲೇಬೇಡಿ. ಅದರ ಬದಲು ತಾಯಿಹಾಲಿನಷ್ಟೇ ಅಮೃತವಾಗಿರುವ ಕಾಯಿಹಾಲನ್ನು ಕೊಡಿ, ಅದನ್ನು ಬಿಟ್ಟರೆ ರಾಗಿಹಾಲು ಕೊಡಬಹುದು ಎನ್ನುತ್ತಾರೆ ಖ್ಯಾತ ವೈದ್ಯರಾಗಿರುವ ಖಾದರ್.

ಮುಟ್ಟಿನ ಅವಧಿ ಏರುಪೇರು

ಬಾಲಕಿಯರು ಯೌವನಾವಸ್ಥೆಗೆ ಬರುತ್ತಿದ್ದಂತೆಯೇ ಪಿಸಿಓಡಿ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳಲು ವಿದೇಶಿ ತಳಿಗಳ ಹಸುಗಳ ಹಾಲಿನ ಪ್ರತಿದಿನದ ಸೇವನೆ ಕಾರಣ ಎನ್ನುತ್ತಾರೆ ವೈದ್ಯರು. ಜತೆಗೆ ಮಹಿಳೆಯರ ಮುಟ್ಟಾಗುವ ಅವಧಿಯೂ ಏರುಪೇರಾಗುತ್ತದೆ. ಇದು ಹೆಣ್ಣುಮಕ್ಕಳ ಸಮಸ್ಯೆಯಾದರೆ ಗಂಡು ಮಕ್ಕಳಿಗೆ ವಿರ್ಯಾಣು ಕೊರತೆ ಉಂಟಾಗುತ್ತದೆ. ಇದರಿಂದ ಗಂಡು- ಹೆಣ್ಣುಗಳಲ್ಲಿ ಸಂತಾನೋತ್ಪತ್ತಿಯ ಮೇಲೆ ದುಷ್ಪರಿಣಾಮ ಬೀರುವ ಸ್ಥಿತಿ ನಿಮಾಣವಾಗುತ್ತದೆ ಎಂದು ಖ್ಯಾತ ವೈದ್ಯರಾಗಿರುವ ಡಾ.ಬಿ.ಎಂ.ಹೆಗ್ಡೆ ಅಭಿಪ್ರಾಯ ಪಟ್ಟಿದ್ದಾರೆ.

ಹಂದಿಯ ವಂಶವಾಹಿ ಬಳಕೆ!

ಆಧುನಿಕ ಡೈರಿಯಲ್ಲಿ ಹಸುಗಳು ಹೆಚ್ಚೆಚ್ಚು ಹಾಲು ಕೊಡುವ ನಿಟ್ಟಿನಲ್ಲಿ ಹಂದಿಯ ವಂಶವಾಹಿಗಳನ್ನು ಬಳಸಲಾಗುತ್ತದೆ ಎಂದು ಕೂಡ ಕೆಲವು ಅಧ್ಯಯನಗಳು ಹೇಳಿವೆ. ಏಕೆಂದರೆ ಹಂದಿ ತನ್ನ ದೇಹದ ತೂಕಕ್ಕೆ ಹೋಲಿಸಿದರೆ ಗರಿಷ್ಠ ಹಾಲನ್ನು ಉತ್ಪಾದಿಸುತ್ತದೆ. ಅದಕ್ಕಾಗಿಯೇ ಜೆರ್ಸಿ ಸೇರಿದಂತೆ ಕೆಲವು ತಳಿಗಳ ಹಸುಗಳು ಹೆಚ್ಚೆಚ್ಚು ಹಾಲನ್ನು ನೀಡಲು ಅವುಗಳಿಗೆ ಹಂದಿಯ ವಂಶವಾಹಿಗಳನ್ನು ಇಂಜೆಕ್ಟ್ ಮಾಡುತ್ತಿರುವುದಾಗಿ ಹೇಳಲಾಗುತ್ತಿದೆ. ಇದೇ ಕಾರಣಕ್ಕೆ ಸಾಮಾನ್ಯ ದೇಸಿ ಹಸುಗಳಿಗೆ ಹೋಲಿಸಿದರೆ ಜೆರ್ಸಿ ಹಾಗೂ ಕೆಲವು ತಳಿಗಳ ಹಸುಗಳು ನೋಡಲು ಹಂದಿಯಂತೆಯೇ ಇದ್ದು, ಚುರುಕಾಗಿಯೂ ಇರುವುದಿಲ್ಲ. ರಸ್ತೆಯ ಮಧ್ಯೆ ನಿಂತರೆ ಹಾರ್ನ್ ಮಾಡಿ ನೋಡಿ, ಅವುಗಳಿಗೆ ತಿಳಿಯುವುದೇ ಇಲ್ಲ! ಇಂಥ ಹಸುಗಳ ಹಾಲು ಕುಡಿದರೆ ಅವುಗಳಂತೆಯೇ ಬೊಜ್ಜು ಬರುವುದು ಒಂದೆಡೆಯಾದರೆ ಇನ್ನೊಂದೆಡೆ ಚುರುಕುತನವೂ ಇರುವುದಿಲ್ಲ.

ಜೆರ್ಸಿ ಹಸು ಸಾಕಬೇಡಿ!

ಜೆರ್ಸಿ ತಳಿಯ ಹಸುಗಳ ಹಾಲಿನ ಕೆನೆ ಹೆಸರುವಾಸಿಯಾಗಿದ್ದರೂ, ಇವುಗಳ ಹಾಲು ವಿಷಪೂರಿತ ಎಂದು 2018ರಲ್ಲಿಯೇ ಉತ್ತರ ಪ್ರದೇಶದ ಬಿಜ್ನೋರ್​ನ ಪಶು ಸಂಗೋಪನಾ ಇಲಾಖೆ ಹೇಳಿತ್ತು. ಆಟಿಸಂ, ಮಧುಮೇಹ, ಸ್ಕಿಜೋಫ್ರೇನಿಯಾದಂಥ ಸಮಸ್ಯೆಗಳಿಗೆ ಇವು ಕಾರಣವಾಗುವ ಹಿನ್ನೆಲೆಯಲ್ಲಿ ರೈತರು ಈ ತಳಿಯ ಹಸು ಸಾಕಬೇಡಿ, ಎಚ್ಚರದಿಂದ ಇರಿ ಎಂದು ಇಲಾಖೆ ಆದೇಶ ಹೊರಡಿಸಿತ್ತು.

ಮೂಳೆ ಸವೆತಕ್ಕಿದು ದಾರಿ

ಜೆರ್ಸಿ ಸೇರಿದಂತೆ ಕೆಲವು ತಳಿಗಳ ಹಸುಗಳಿಂದ ಮೂಳೆ ಸವೆತ ಕಾಣಿಸಿಕೊಳ್ಳುತ್ತದೆ, ಅದರಲ್ಲಿಯೂ ಮಹಿಳೆಯರಿಗೆ ಸ್ವಲ್ಪ ವಯಸ್ಸಾಗುತ್ತಿದ್ದಂತೆಯೇ ಮೂಳೆಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳಲು ಇದೂ ಒಂದು ಕಾರಣ ಎಂದು ಲಂಡನ್​ನ ಜರ್ನಲ್ ಆಫ್ ಎಂಡೋಕ್ರಿನಾಲಜಿಯಲ್ಲಿ ಉಲ್ಲೇಖವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net