

Rohit Sharma: ಇದೇ ಅ.19ರಿಂದ ಆರಂಭಗೊಳ್ಳಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಮತ್ತು ಏಕದಿನ ಸರಣಿಗೆ ಟೀಮ್ ಇಂಡಿಯಾ ಪ್ರಕಟವಾಗಿದೆ. ಏಕದಿನ ಸರಣಿಗೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಕಮ್ಬ್ಯಾಕ್ ಅಭಿಮಾನಿಗಳಿಗೆ ಖುಷಿ ನೀಡಿದ್ದೇ ಆದರೂ ರೋಹಿತ್ರನ್ನು ನಾಯಕತ್ವದಿಂದ ಕೆಳಗಿಳಿಸಿರುವುದು ಸದ್ಯ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಟೆಸ್ಟ್ ಕ್ಯಾಪ್ಟನ್ ಶುಭಮನ್ ಗಿಲ್‌ಗೆ ಏಕದಿನ ತಂಡದ ನಾಯಕತ್ವ ನೀಡಿರುವ ಬಿಸಿಸಿಐ, ರೋಹಿತ್ ಹೊರಬೇಕಿದ್ದ ಜವಾಬ್ದಾರಿಗಳನ್ನು ಗಿಲ್‌ಗೆ ಹಸ್ತಾಂತರಿಸಿದೆ. ಈ ಕುರಿತು ಗೊಂದಲಗಳು ಮತ್ತು ವಿವಾದಗಳು ಭುಗಿಲೇಳಬಹುದು ಎಂಬ ನಿಟ್ಟಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್, ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಂಡೇ ಈ ನಿರ್ಧಾರ ಕೈಗೊಂಡೆವು ಎಂದಿದ್ದಾರೆ.
"ಏಕದಿನ ಸ್ವರೂಪಕ್ಕೆ ಹೊಂದಿಕೊಳ್ಳಲು ಗಿಲ್‌ಗೆ ನಾಯಕನಾಗಿ ಸ್ವಲ್ಪ ಸಮಯ ನೀಡುವುದು ನಮ್ಮ ಉದ್ದೇಶವಾಗಿದೆ. ನಾಯಕತ್ವ ಬದಲಾವಣೆಯ ಬಗ್ಗೆ ರೋಹಿತ್ ಅವರೊಂದಿಗೆ ಈಗಾಗಲೇ ಚರ್ಚಿಸಿಯೇ ಈ ನಿರ್ಧಾರ ಕೈಗೊಂಡಿದ್ದೇವೆ. ಇದೊಂದು ಕಷ್ಟಕರ ನಿರ್ಣಯವಾಗಿತ್ತು. ಇಂಗ್ಲೆಂಡ್‌ನಲ್ಲಿ ಗಿಲ್ ಒತ್ತಡದಲ್ಲಿ ಹೇಗೆ ಪ್ರದರ್ಶನ ನೀಡಿದ್ದಾರೆ ಎಂಬುದನ್ನು ನಾವು ನೋಡಿದ್ದೇವೆ. ಅವರಿನ್ನೂ ಚಿಕ್ಕವರು. ಅವರ ಮೇಲೆ ನಿರೀಕ್ಷೆಗಳಿವೆ. ಕೆಲವು ಸಮಯದಿಂದ ಏಕದಿನ ಪಂದ್ಯಗಳಲ್ಲಿ ಉಪನಾಯಕನಾಗಿ ಆಡಿದ್ದಾರೆ. ನಾವು ಹೆಚ್ಚು ಏಕದಿನ ಪಂದ್ಯಗಳನ್ನು ಆಡುವುದಿಲ್ಲ. ಹೀಗಾಗಿ, ಗಿಲ್‌ಗೆ ಅವಕಾಶದ ಅಗತ್ಯವಿದೆ. ಕ್ಯಾಪ್ಟನ್ ಬದಲಾವಣೆ ನಿರ್ಧಾರ ನಮ್ಮ ಹಾಗೂ ರೋಹಿತ್ ನಡುವೆ ಮಾತ್ರ" ಎಂದಿದ್ದಾರೆ.
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 2027ರಲ್ಲಿ ಮುಂದಿನ ಏಕದಿನ ವಿಶ್ವಕಪ್‌ನಲ್ಲಿ ಆಡಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ ಎಂದು ಅಜಿತ್ ಅಗರ್ಕರ್ ಬಹಿರಂಗಪಡಿಸಿದ್ದಾರೆ. 'ರೋ-ಕೊ' ಭವಿಷ್ಯದ ಬಗ್ಗೆ ಇರುವ ಊಹಾಪೋಹಗಳಿಗೆ ಉತ್ತರಿಸಿದ ಅವರು, ಪ್ರಸ್ತುತ ತಂಡವನ್ನು ಆಸ್ಟ್ರೇಲಿಯಾದಲ್ಲಿ ನಡೆಯುವ ಸರಣಿಗೆ ಮಾತ್ರ ಆಯ್ಕೆ ಮಾಡಲಾಗಿದೆ ಮತ್ತು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ 8 ತಿಂಗಳ ಕಾಲ ದೂರ ಉಳಿದಿರುವ ಕೊಹ್ಲಿ ಮತ್ತು ರೋಹಿತ್, ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದು ಹೇಳಿದ್ದಾರೆ,(ಏಜೆನ್ಸೀಸ್).