

BBK 12: ಕನ್ನಡ ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 12 ಶುರುವಾಗಿ ಇಂದಿಗೆ ಒಂದು ವಾರ ಕಳೆದಿದೆ. ಎಂದಿನಂತೆ ಕಾರ್ಯಕ್ರಮವನ್ನು ನಟ, ನಿರೂಪಕ ಸುದೀಪ್ ಅವರೇ ನಡೆಸಿಕೊಡುತ್ತಿದ್ದು, ಈ ಬಾರಿ ಮನೆಯೊಳಗೆ ಎಂಟ್ರಿಕೊಟ್ಟಿರುವ 19 ಸ್ಪರ್ಧಿಗಳಿಗೆ ಮೊದಲ ವಾರದ ಕಿಚ್ಚನ ಪಂಚಾಯಿತಿಯ ಆರಂಭದಲ್ಲೇ ಬಿಸಿ ಮುಟ್ಟಿಸಿದ್ದಾರೆ.
ಸುದೀಪ್ ಅವರ ನಿರೂಪಣಾ ಶೈಲಿ, ಅವರ ಖಡಕ್ ನುಡಿ, ಸ್ಪರ್ಧಿಗಳಿಗೆ ತಿಳಿ ಹೇಳುವ ಪರಿ ನೋಡುಗರನ್ನು ವಾರಾಂತ್ಯದಲ್ಲಿ ಬರುವ ಕಥೆ ಕಿಚ್ಚನ ಜೊತೆ ಸಂಚಿಕೆಗೆ ಕಾತರದಿಂದ ಕಾಯುವಂತೆ ಮಾಡಿದೆ. ಇನ್ನು ಸೀಸನ್ 12ರ ಮೊದಲ ವಾರದ ಪಂಚಾಯಿತಿ ಕಟ್ಟೆಯಲ್ಲಿ ಯಾರಿಗೆಲ್ಲ ಸುದೀಪ್ ಕ್ಲಾಸ್ ತೆಗೆದುಕೊಳ್ಳುತ್ತಾರೆ? ಯಾರಿಗೆ ತಮ್ಮ ಖಡಕ್ ಮಾತಿನಿಂದ ಬಿಸಿ ಮುಟ್ಟಿಸುತ್ತಾರೆ ಮತ್ತು ಈ ವಾರ ಯಾರಿಗೆ ಗೇಟ್ಪಾಸ್ ಅನ್ನೋದನ್ನು ಹೇಳ್ತಾರೆ? ಎಂಬ ಪ್ರಶ್ನೆ ವೀಕ್ಷಕರು ಹಾಗೂ ಅಭಿಮಾನಿಗಳಲ್ಲಿ ಕೌತುಕ ಕೆರಳಿಸಿರುತ್ತದೆ.
ಮೊದಲ ವಾರದಲ್ಲಿ ಜಂಟಿ ಮತ್ತು ಒಂಟಿಗಳ ಪೈಕಿ ಕೆಲವರು ಗಮನ ಸೆಳೆದರೆ, ಉಳಿದವರು ಕಾಣಿಸಿದಂತೆ ಮರೆಯಾಗಿದ್ದು, ನೋಡುಗರ ಗಮನಕ್ಕೆ ಬಂದಿವೆ. ಅಂತೆಯೇ ನಾಮಿನೇಷನ್ ತೂಗುಗತ್ತಿಯಲ್ಲಿರುವ ಮೂರು ಜಂಟಿ ಜೋಡಿ ಮತ್ತು ಇಬ್ಬರು ಒಂಟಿಗಳಲ್ಲಿ ಯಾರು ಈ ಮೊದಲ ವಾರ ಮನೆಯಿಂದ ಹೊರಬಂದರು ಮತ್ತು ಮನೆ ಮಂದಿ ಮಾಡಿದ ಎಡವಟ್ಟುಗಳೇನು ಎಂಬುದನ್ನು ಸುದೀಪ್ ಇಂದಿನ ವಾರಾಂತ್ಯದ ಮೊದಲ ಸಂಚಿಕೆಯಲ್ಲಿ ತಿಳಿ ಹೇಳಿದ್ದು, ಎಲ್ಲರಿಗೂ ಖಡಕ್ ಎಚ್ಚರಿಕೆಯನ್ನೇ ಕೊಟ್ಟಿದ್ದಾರೆ. ಇಷ್ಟಲ್ಲದೇ, ವಾರದ ಮೊದಲ ಕಿಚ್ಚನ ಚಪ್ಪಾಳೆಯನ್ನು ಮನೆ ಮಂದಿಗೆ ಕೊಡದೆ, ಕರುನಾಡಿನ ಫೋಟೋಗೆ ಕೊಟ್ಟಿರುವುದು ವಿಶೇಷ ಎನಿಸಿಕೊಂಡಿದೆ.
ಈ ಬಾರಿಯ ಬಿಗ್ ಬಾಸ್ ಸಾಕಷ್ಟು ಟ್ವಿಸ್ಟ್ಗಳಿಂದ ಕೂಡಿರುವ ಹಿನ್ನೆಲೆ ಮನೆಗೆ ಎಂಟ್ರಿಕೊಟ್ಟ ಎರಡನೇ ದಿನಕ್ಕೆ ಎಲಿಮಿನೇಟ್ ಆದ ರಕ್ಷಿತಾ ಇನ್ನೂ ಮನೆಯಿಂದ ಹೊರಹೋಗಿಲ್ಲ ಎಂಬ ಮಾತುಗಳು ಕೇಳಿಬಂದಿವೆ. ಈಗಾಗಲೇ ಈ ಕುರಿತು ಕಲರ್ಸ್ ಕನ್ನಡ ತಮ್ಮ ಅಧಿಕೃತ ಜಾಲತಾಣದ ಖಾತೆಯಲ್ಲಿ ಎಲಿಮಿನೇಟ್ ಆಗಿದ್ದಾರೆ ಎಂದು ಫೋಟೋ ಸಮೇತ ಸ್ಪಷ್ಟಪಡಿಸಿದೆ. ಆದರೆ, ರಕ್ಷಿತಾ ಮಾತ್ರ ಇಲ್ಲಿಯವರೆಗೆ ಹೊರಬಂದಿರುವ ಯಾವ ಸೂಚನೆಗಳು ಲಭಿಸಿಲ್ಲ. ಹೀಗಾಗಿ, ಹಲವರು ಇದೊಂದು ಪ್ರ್ಯಾಂಕ್ ಆಗಿರಬಹುದು. ಈ ವಾರದ ಕಿಚ್ಚನ ಪಂಚಾಯಿತಿಯಲ್ಲಿ ಅವರು ರೀ-ಎಂಟ್ರಿ ಕೊಡಬಹುದು ಎಂದು ಅಭಿಪ್ರಾಯಿಸಿದ್ದರು. ಅಂತೆಯೇ, ರಕ್ಷಿತಾ ವೇದಿಕೆಗೆ ಬಂದಿದ್ದು, ಮನೆಗೆ ಮರಳಲು ಸುದೀಪ್ ಅವರಿಂದ ಒಪ್ಪಿಗೆ ಪಡೆದಿದ್ದಾರೆ! ಆದರೆ, ಇದೂ ಸಹ ಟ್ವಿಸ್ಟ್ ಆಗಿದೆಯೇ? ಎಂಬುದನ್ನು ಸಂಚಿಕೆ ನೋಡಿಯೇ ತಿಳಿಯಬೇಕಿದೆ.