ಅಧಿಕಾರಿಗಳಿಲ್ಲದೆ ಸಭೆ ಯಾಕೆ? ಗ್ರಾಮಸ್ಥರ ಅಸಮಾಧಾನ

Kdb_Village-Meet
Published on

ಕಡಬ: ಇಲಾಖಾಧಿಕಾರಿಗಳು ಸಭೆಗೆ ಗೈರು ಹಾಜರಿಯಾದಲ್ಲಿ ಗ್ರಾಮಸಭೆ ನಡೆಸುವ ಅವಶ್ಯಕತೆ ಇದೆಯೇ? ಎಂದು ಪೆರಾಬೆ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದರು.

ಗ್ರಾ.ಪಂ ಅಧ್ಯಕ್ಷೆ ಸಂಧ್ಯಾ ಕೆ. ಅಧ್ಯಕ್ಷತೆಯಲ್ಲಿ ಗ್ರಾ.ಪಂ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸಭೆಯಲ್ಲಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಿರಿಯ ಮೇಲ್ವಿಚಾರಕಿ ವಾಣಿಶ್ರೀ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.

ಸಭೆಯ ಆರಂಭದಲ್ಲಿ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಗೈರು ಹಾಜರಿ ಬಗ್ಗೆ ಪ್ರಶ್ನಿಸಿದ ಗ್ರಾಮಸ್ಥ ಜನಾರ್ದನ ಬಿ.ಎಲ್., ತೋಟಗಾರಿಕೆ ಅತೀ ಅಗತ್ಯ ಇಲಾಖೆ. ಅವರೇ ಗೈರು ಹಾಜರಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ರಮೇಶ್ ರೈ, ಹರೀಶ್ ಬಾಣಬೆಟ್ಟು ಹಾಗೂ ಇತರ ಗ್ರಾಮಸ್ಥರೂ ಬೆಂಬಲಿಸಿ ಅಧಿಕಾರಿಗಳು ಬಾರದಿದ್ದಲ್ಲಿ ಗ್ರಾಮಸಭೆ ಯಾಕೆ ನಡೆಸಬೇಕು? ಎಂದು ಪ್ರಶ್ನಿಸಿದರು.

ಪ್ರತಿಕ್ರಿಯಿಸಿದ ಪಿಡಿಒ ಶಾಲಿನಿ ಕೆ.ಬಿ., ಎಲ್ಲ ಇಲಾಖೆಯವರಿಗೆ ಗ್ರಾಮಸಭೆಯ ನೋಟಿಸ್ ಕಳಿಸಿಕೊಡಲಾಗಿದೆ. ಗೈರು ಹಾಜರಿಯಾಗಿರುವ ಇಲಾಖೆಯ ಬಗ್ಗೆ ಮೇಲಾಧಿಕಾರಿಗಳಿಗೆ ಹಾಗೂ ತಾ.ಪಂ ಇಒ ಅವರಿಗೆ ಪತ್ರ ಬರೆಯುತ್ತೇವೆ. ಮುಂದಿನ ಗ್ರಾಮಸಭೆಗೆ ಕಡ್ಡಾಯವಾಗಿ ಬರುವಂತೆ ಸೂಚಿಸುವುದಾಗಿ ಹೇಳಿದರು. ಬಳಿಕ ತೋಟಗಾರಿಕೆ ಇಲಾಖೆಯ ಅಧಿಕಾರಿ ಆಗಮಿಸಿದರು.

ವಿವಿಧ ಇಲಾಖಾಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು. ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ಮೋಹನದಾಸ್ ರೈ, ಸುಶೀಲ, ಸಿ.ಎಂ.ಫಯಾಜ್, ಕಾವೇರಿ, ಮೇನ್ಸಿ ಸಾಜನ್, ಸದಾನಂದ, ಲೀಲಾವತಿ, ಚಂದ್ರಶೇಖರ ರೈ, ಕುಮಾರ ಬಿ.ಕೆ, ಮಮತಾ, ರಾಜ ಪಿ.ಜೆ, ಕೃಷ್ಣ ವೈ, ಮೋಹಿನಿ ಉಪಸ್ಥಿತರಿದ್ದರು. ಪಿಡಿಒ ಶಾಲಿನಿ ಕೆ.ಬಿ ಸ್ವಾಗತಿಸಿ ವರದಿ ವಾಚಿಸಿದರು. ಸಿಬ್ಬಂದಿ ಪದ್ಮಕುಮಾರಿ, ಉಮೇಶ್ ಉದ್ಯೋಗ ಖಾತ್ರಿ ಯೋಜನೆಯಡಿ ನಡೆದ ಕಾಮಗಾರಿಗಳ ವಿವರ ವಾಚಿಸಿದರು.

ರಸ್ತೆ ದುರಸ್ತಿಗೆ ಆಗ್ರಹ

ಚಾಮೆತ್ತಡ್ಕ ರಸ್ತೆ ಕೆಟ್ಟು ಹೋಗಿದೆ. ಈ ರಸ್ತೆಯಲ್ಲಿ ಎಂಡೋಪೀಡಿತರು, ಶಾಲಾಮಕ್ಕಳು, ಕೂಲಿಕಾರ್ಮಿಕರೂ ದಿನಾ ಓಡಾಡುತ್ತಾರೆ. ಮನವಿ ಮಾಡಿದರೂ ದುರಸ್ತಿಗೆ ಕ್ರಮ ಕೈಗೊಂಡಿಲ್ಲ ಎಂದು ಆ ಭಾಗದ ಗ್ರಾಮಸ್ಥರು ದೂರಿದರು. ಕುಂತೂರು ಶಾಲೆ ಪಕ್ಕ ರಸ್ತೆ ಕೆಟ್ಟುಹೋಗಿದ್ದು ತುರ್ತು ದುರಸ್ತಿ ಮಾಡಬೇಕೆಂದು ಹರೀಶ್ ಬಾಣಬೆಟ್ಟು ಒತ್ತಾಯಿಸಿದರು. ಸುರುಳಿ-ಕೆಮ್ಮಿಂಜೆ ರಸ್ತೆಯ ಬದಿಯಲ್ಲಿಯೇ ವಿದ್ಯುತ್ ಕಂಬವಿದೆ. ಇದರಿಂದ ರಸ್ತೆ ವಿಸ್ತರಣೆ, ಚರಂಡಿಗೆ ಸ್ಥಳವಿಲ್ಲ. ಪಕ್ಕದ ಜಾಗದಲ್ಲಿ ಕಂಬ ಹಾಕಬೇಕೆಂದು ಗ್ರಾಮಸ್ಥ ರಮೇಶ್ ರೈ ಸುರುಳಿ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net