ವಿಶ್ವಕಪ್​ ಸೆಮೀಸ್​ ರೇಸ್: ಯಾರಿಗಿದೆ ಚಾನ್ಸ್​? ಹೀಗಿದೆ ಎಲ್ಲ ತಂಡಗಳ ಲೆಕ್ಕಾಚಾರ...

wc 2023 web
Published on

ಬೆಂಗಳೂರು: ಹಲವು ಏಕಪಕ್ಷೀಯ ಪಂದ್ಯಗಳಿಂದ ಕೂಡಿರುವ ಏಕದಿನ ವಿಶ್ವಕಪ್​ನಲ್ಲಿ ಸೆಮಿಫೈನಲ್​ ಹಂತಕ್ಕೇರುವ ಪೈಪೋಟಿಯೂ ಬಹುತೇಕ ಏಕಪಕ್ಷೀಯವಾಗಿ ಸಾಗುತ್ತಿದೆ. ಲೀಗ್​ ಹಂತದಲ್ಲಿ 31 ಪಂದ್ಯಗಳು ಮುಗಿದಿದ್ದು, ಇನ್ನು 14 ಪಂದ್ಯಗಳಷ್ಟೇ ಬಾಕಿ ಉಳಿದಿವೆ. ಇದುವರೆಗೆ ಯಾವ ತಂಡಕ್ಕೂ ಸೆಮೀಸ್​ ಸ್ಥಾನ ಖಚಿತವಾಗದಿದ್ದರೂ, ಇವೇ ನಾಲ್ಕು ತಂಡಗಳು ಉಪಾಂತ್ಯಕ್ಕೇರಬಹುದು ಎಂದು ಹೇಳಬಹುದಾದಷ್ಟು ಸ್ಪಷ್ಟ ಚಿತ್ರಣ ನಿರ್ಮಾಣವಾಗಿದೆ. ಸದ್ಯದ ಪ್ರಕಾರ ಆತಿಥೇಯ ಭಾರತ ಈಗಾಗಲೆ ಸೆಮೀಸ್​ಗೆ ಒಂದು ಕಾಲು ಇಟ್ಟಿದ್ದರೆ, ದಕ್ಷಿಣ ಆಫ್ರಿಕಾ ಕೂಡ ಬಹುತೇಕ ಸನಿಹದಲ್ಲಿದೆ. ಉಳಿದೆರಡು ಸ್ಥಾನಗಳಿಗೆ ಹಾಲಿ ರನ್ನರ್​ಅಪ್​ ನ್ಯೂಜಿಲೆಂಡ್​ ಮತ್ತು 5 ಬಾರಿಯ ಚಾಂಪಿಯನ್​ ಆಸ್ಟ್ರೆಲಿಯಾ ನೆಚ್ಚಿನ ತಂಡಗಳಾಗಿವೆ. ಆದರೆ ಉಳಿದ 6 ತಂಡಗಳ ಪೈಕಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ಬಾಂಗ್ಲಾ ಹೊರತಾಗಿ 4 ತಂಡಗಳಷ್ಟೇ ಇನ್ನೂ ರೇಸ್​ನಲ್ಲಿವೆ ಎನ್ನಬಹುದು. ಅಫ್ಘಾನಿಸ್ತಾನ ನಿಕಟ ಪೈಪೋಟಿ ಒಡ್ಡುವ ಅವಕಾಶ ಹೊಂದಿದ್ದರೆ, ಮಾಜಿ ಚಾಂಪಿಯನ್​ಗಳಾದ ಶ್ರೀಲಂಕಾ, ಪಾಕಿಸ್ತಾನ ಜತೆಗೆ ನೆದರ್ಲೆಂಡ್​ ಇನ್ನೂ ಅಲ್ಪ ಆಸೆ ಉಳಿಸಿಕೊಂಡಿವೆ.

ಭಾರತ:

ಆತಿಥೇಯ ಭಾರತ ಸತತ 6 ಜಯದೊಂದಿಗೆ ಸೆಮೀಸ್​ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿದ್ದರೂ, ಉಪಾಂತ್ಯ ಪ್ರವೇಶಕ್ಕೆ ಇನ್ನೂ ಅಧಿಕೃತ ಮುದ್ರೆ ಬಿದ್ದಿಲ್ಲ. ಯಾಕೆಂದರೆ ಲೆಕ್ಕಾಚಾರಗಳ ಪ್ರಕಾರ, ಉಳಿದ 3 ಪಂದ್ಯಗಳಲ್ಲಿ ಹೀನಾಯವಾಗಿ ಸೋತರೆ ಈಗಲೂ ಹೊರಬೀಳುವ ಅಪಾಯವಿದೆ! ಅಫ್ಘಾನಿಸ್ತಾನ ಸಹಿತ 5 ತಂಡಗಳು ಸದ್ಯ ತಲಾ 12 ಅಂಕ ಕಲೆಹಾಕುವ ಅವಕಾಶ ಹೊಂದಿವೆ. ಇದು ಸಾಧ್ಯವಾದರೆ ಉತ್ತಮ ರನ್​ರೇಟ್​ ಹೊಂದಿರುವ 4 ತಂಡಗಳಷ್ಟೇ ಸೆಮೀಸ್​ಗೇರಲಿವೆ. ಆದರೆ ಸದ್ಯ ಭಾರತದ ರನ್​ರೇಟ್​ ಉತ್ತಮವಾಗಿಯೇ ಇದೆ. ಯಾವುದಕ್ಕೂ ಇನ್ನೊಂದು ಪಂದ್ಯ ಗೆದ್ದರೆ, ಬೇರಾವ ಲೆಕ್ಕಾಚಾರವೂ ಇಲ್ಲದೆ ಸೆಮೀಸ್​ ಸ್ಥಾನ ಖಚಿತಪಡಿಸಿಕೊಳ್ಳಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಭಾರತ ಅಂಕಪಟ್ಟಿಯ ಅಗ್ರ ತಂಡವಾಗಿ ಉಪಾಂತ್ಯಕ್ಕೇರುವ ನಿರೀಕ್ಷೆ ಅಭಿಮಾನಿಗಳದ್ದಾಗಿದೆ.

ಬಾಕಿ ಪಂದ್ಯ: ನ. 2: ಶ್ರೀಲಂಕಾ (ಮುಂಬೈ), ನ. 5: ದಕ್ಷಿಣ ಆಫ್ರಿಕಾ (ಕೋಲ್ಕತ), ನ.12: ನೆದರ್ಲೆಂಡ್​ (ಬೆಂಗಳೂರು).

ದಕ್ಷಿಣ ಆಫ್ರಿಕಾ:

ಆರಂಭಿಕ 6 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿರುವ ದಕ್ಷಿಣ ಆಫ್ರಿಕಾದ ಸೆಮೀಸ್​ ಹಾದಿಯೂ ಸುಗಮವೆನಿಸಿದೆ. ಉಳಿದ 3ರಲ್ಲಿ 2ರಲ್ಲಿ ಗೆದ್ದರೆ ಸೆಮೀಸ್​ ಖಚಿತವೆನಿಸಲಿದೆ. ಬಲಿಷ್ಠ ರನ್​ರೇಟ್​ನಿಂದಾಗಿ 1ರಲ್ಲಿ ಗೆದ್ದರೂ ಸೆಮೀಸ್​ ತಪ್ಪುವ ಸಾಧ್ಯತೆ ಕ್ಷೀಣ. ಆದರೆ, ಮೊದಲು ಬ್ಯಾಟಿಂಗ್​ ಮಾಡಿದಾಗ ರನ್​ಪ್ರವಾಹ ಹರಿಸುವ ಹರಿಣಗಳು, ಚೇಸಿಂಗ್​ನಲ್ಲಿ ದೌರ್ಬಲ್ಯ ಹೊಂದಿರುವುದರಿಂದ ಉಳಿದ 3ರಲ್ಲೂ ಸೋತರೆ ಹೊರಬೀಳುವ ಅಪಾಯವೂ ಇದೆ.

ಬಾಕಿ ಪಂದ್ಯ: ನ. 1: ನ್ಯೂಜಿಲೆಂಡ್​ (ಪುಣೆ), ನ.5: ಭಾರತ (ಕೋಲ್ಕತ), ನ. 10: ಅಫ್ಘಾನಿಸ್ತಾನ (ಅಹಮದಾಬಾದ್​).

ನ್ಯೂಜಿಲೆಂಡ್​:

ಆರಂಭಿಕ 4 ಗೆಲುವುಗಳ ಬಳಿಕ ಸತತ 2 ಪಂದ್ಯ ಸೋತಿರುವ ಹಾಲಿ ರನ್ನರ್​ಅಪ್​ ಕಿವೀಸ್​ಗೆ ಸೆಮೀಸ್​ ಸ್ಥಾನ ಒಲಿಸಿಕೊಳ್ಳಲು ಉಳಿದ 3ರಲ್ಲಿ ಎರಡಾದರೂ ಗೆಲುವು ಬೇಕಾಗಿದೆ. ಉಳಿದ 3 ಪಂದ್ಯಗಳಲ್ಲಿ ಸೆಮೀಸ್​ ರೇಸ್​ನಲ್ಲಿರುವ ತಂಡಗಳನ್ನೇ ಎದುರಿಸಬೇಕಿರುವುದರಿಂದ, ಹಿಂದಿನ ಲಯಕ್ಕೆ ಮರಳದಿದ್ದರೆ ಅಪಾಯವಾಗಬಹುದು. ಪ್ರಮುಖವಾಗಿ ಪಾಕಿಸ್ತಾನ, ಶ್ರೀಲಂಕಾ ವಿರುದ್ಧ ಸೋಲದಂತೆ ಎಚ್ಚರಿಕೆ ವಹಿಸಬೇಕಿದೆ. ಉಳಿದ 3ರಲ್ಲಿ 1ರಲ್ಲಿ ಗೆದ್ದರೂ, ಆಫ್ಘನ್​ ಒಂದು ಪಂದ್ಯ ಸೋತರೆ, ಉತ್ತಮ ರನ್​ರೇಟ್​ನಿಂದಾಗಿ ಸೆಮೀಸ್​ ಆಸೆ ಇಡಬಹುದಾಗಿದೆ.

ಬಾಕಿ ಪಂದ್ಯ: ನ.1: ದಕ್ಷಿಣ ಆಫ್ರಿಕಾ (ಪುಣೆ), ನ.4: ಪಾಕಿಸ್ತಾನ (ಬೆಂಗಳೂರು), ನ. 9: ಶ್ರೀಲಂಕಾ (ಬೆಂಗಳೂರು).

ಆಸ್ಟ್ರೆಲಿಯಾ:

ಆರಂಭಿಕ 2 ಪಂದ್ಯಗಳ ಸೋಲಿನ ಬಳಿಕ ಸತತ 4 ಪಂದ್ಯ ಗೆದ್ದು ಬೀಗುತ್ತಿರುವ ಆಸೀಸ್​ಗೆ 6ನೇ ಬಾರಿ ಪ್ರಶಸ್ತಿ ಗೆಲ್ಲುವ ಆಸೆ ಜೀವಂತವಿಡಲು ಇನ್ನೂ 2 ಗೆಲುವು ಬೇಕಿದೆ. ಈ ಪೈಕಿ, ಸದ್ಯ ದುರ್ಬಲವಾಗಿರುವ ಬಾಂಗ್ಲಾ ವಿರುದ್ಧ ಆಡುವ ಅನುಕೂಲವಿದೆ. ಆದರೆ, ಇನ್ನೆರಡು ಪಂದ್ಯಗಳನ್ನು ಸಾಂಪ್ರದಾಯಕ ಎದುರಾಳಿ ಇಂಗ್ಲೆಂಡ್​ ಮತ್ತು ದೈತ್ಯಸಂಹಾರಿ ಅಫ್ಘಾನಿಸ್ತಾನ ಎದುರು ಆಡಬೇಕಿದೆ. ಹೀಗಾಗಿ ಈ 2ರಲ್ಲಿ ಕನಿಷ್ಠ ಒಂದರಲ್ಲಿ ಗೆದ್ದರೂ, ಸೆಮೀಸ್​ ಅವಕಾಶ ವೃದ್ಧಿಸಲಿದೆ. ಉಳಿದ 3ರಲ್ಲಿ 1ರಲ್ಲಿ ಮಾತ್ರ ಗೆದ್ದರೆ, ಉತ್ತಮ ರನ್​ರೇಟ್​ನಿಂದಷ್ಟೇ ಆಸೀಸ್​ ಸೆಮೀಸ್​ಗೇರಬಹುದು.

ಬಾಕಿ ಪಂದ್ಯ: ನ. 4: ಇಂಗ್ಲೆಂಡ್​ (ಅಹಮದಾಬಾದ್​), ನ. 7: ಅಫ್ಘಾನಿಸ್ತಾನ (ಮುಂಬೈ), ನ. 11: ಬಾಂಗ್ಲಾದೇಶ (ಪುಣೆ).

ಅಫ್ಘಾನಿಸ್ತಾನ

ಹಾಲಿ ಚಾಂಪಿಯನ್​ ಇಂಗ್ಲೆಂಡ್​, ಮಾಜಿ ಚಾಂಪಿಯನ್​ಗಳಾದ ಪಾಕಿಸ್ತಾನ, ಶ್ರೀಲಂಕಾಕ್ಕೆ ಆಘಾತ ನೀಡಿ ಗಮನಸೆಳೆದಿರುವ ಅಫ್ಘಾನಿಸ್ತಾನ, ಅಚ್ಚರಿಯ ತಂಡವಾಗಿ ಸೆಮೀಸ್​ಗೇರುವ ಅವಕಾಶ ಈಗಲೂ ಜೀವಂತವಾಗಿದೆ. ಸದ್ಯದ ಲೆಕ್ಕಾಚಾರ ಪ್ರಕಾರ, ಸೆಮೀಸ್​ ರೇಸ್​ನಲ್ಲಿರುವ 5ನೇ ತಂಡ ಇದುವೇ ಆಗಿದೆ. ಉಳಿದ 3ರಲ್ಲೂ ಗೆದ್ದರೆ ಆಫ್ಘನ್​ 12 ಅಂಕ ಕಲೆಹಾಕಲಿರುವುದರಿಂದ ಇತಿಹಾಸ ಸೃಷ್ಟಿಸುವ ಅವಕಾಶ ಹೆಚ್ಚಿದೆ. ಸ್ಪಿನ್ನರ್​ಗಳೆದುರು ದೌರ್ಬಲ್ಯ ಹೊಂದಿರುವ ತಂಡಗಳೇ ಮುಂದಿನ 3 ಎದುರಾಳಿಗಳಾಗಿರುವುದರಿಂದ, ಸದ್ಯಕ್ಕೆ ಯಾವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ.

ಬಾಕಿ ಪಂದ್ಯ: ನ.3: ನೆದರ್ಲೆಂಡ್​ (ಲಖನೌ), ನ.7: ಆಸ್ಟ್ರೆಲಿಯಾ (ಮುಂಬೈ), ನ.10: ದಕ್ಷಿಣ ಆಫ್ರಿಕಾ (ಅಹಮದಾಬಾದ್​).

ಪಾಕಿಸ್ತಾನ, ಶ್ರೀಲಂಕಾ, ನೆದರ್ಲೆಂಡ್​

ಲೆಕ್ಕಾಚಾರಗಳ ಪ್ರಕಾರ, ಪಾಕಿಸ್ತಾನ, ಶ್ರೀಲಂಕಾ, ನೆದರ್ಲೆಂಡ್​ಗೂ ಸೆಮೀಸ್​ ಅವಕಾಶವಿದೆ. ಆದರೆ ಇದು ತೀರ ವಿರಳ ಸಾಧ್ಯತೆಯಾಗಿದೆ. ಈ 3 ತಂಡಗಳು ಉಳಿದೆಲ್ಲ ಪಂದ್ಯಗಳಲ್ಲಿ ಗೆಲ್ಲಬೇಕು, ಇತರ ಪಂದ್ಯಗಳ ಫಲಿತಾಂಶ ವರದಾನವಾಗಬೇಕು ಮತ್ತು ರನ್​ರೇಟ್​ನಲ್ಲೂ ಮೇಲುಗೈ ಸಾಧಿಸಬೇಕು. ಈ ಪೈಕಿ ಒಂದರಲ್ಲಿ ಎಡವಿದರೂ ಗೇಟ್​ಪಾಸ್​ ಸಿಗಲಿದೆ. ಆಸೀಸ್​, ಕಿವೀಸ್​ ತಂಡಗಳು ಉಳಿದ 3ರಲ್ಲಿ ಒಂದರಲ್ಲಷ್ಟೇ ಗೆದ್ದರೆ, ದಕ್ಷಿಣ ಆಫ್ರಿಕಾ ಉಳಿದ ಮೂರೂ ಪಂದ್ಯ ಸೋತರೆ, ಆಫ್ಘನ್​ 1 ಪಂದ್ಯ ಸೋತರೆ, ಪಾಕ್​, ಲಂಕಾ, ನೆದರ್ಲೆಂಡ್​ ಉಳಿದ 3 ಪಂದ್ಯ ಗೆದ್ದರೆ ಆಗ 7 ತಂಡಗಳು ತಲಾ 10 ಅಂಕ ಕಲೆಹಾಕಲಿದ್ದು, ಈ ಪೈಕಿ ಉತ್ತಮ ರನ್​ರೇಟ್​ ಹೊಂದಿರುವ 3 ತಂಡಗಳು ಉಪಾಂತ್ಯಕ್ಕೇರುತ್ತವೆ.

ಪಾಕ್​ ಬಾಕಿ ಪಂದ್ಯ: ನ.4: ನ್ಯೂಜಿಲೆಂಡ್​ (ಬೆಂಗಳೂರು), ನ. 11: ಇಂಗ್ಲೆಂಡ್​ (ಕೋಲ್ಕತ).

ಶ್ರೀಲಂಕಾ ಬಾಕಿ ಪಂದ್ಯ: ನ.2: ಭಾರತ (ಮುಂಬೈ), ನ.6: ಬಾಂಗ್ಲಾದೇಶ (ನವದೆಹಲಿ), ನ.9: ನ್ಯೂಜಿಲೆಂಡ್​ (ಬೆಂಗಳೂರು).

ನೆದರ್ಲೆಂಡ್​ ಬಾಕಿ ಪಂದ್ಯ: ನ.3: ಅಫ್ಘಾನಿಸ್ತಾನ (ಲಖನೌ), ನ. 8: ಇಂಗ್ಲೆಂಡ್​ (ಪುಣೆ), ನ.12: ಭಾರತ (ಬೆಂಗಳೂರು).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net