

ಬೆಂಗಳೂರು: ಹಾಲಿ ಏಕದಿನ ವಿಶ್ವಕಪ್ನಲ್ಲಿ ಅಗ್ರ 4 ಸ್ಥಾನ ಪಡೆಯುವ ತಂಡಗಳು ಸೆಮಿಫೈನಲ್ಗೇರಲಿವೆ ಮತ್ತು ಪ್ರಶಸ್ತಿ ಗೆಲ್ಲುವ ಅವಕಾಶ ಪಡೆಯಲಿವೆ. ಹಾಗೆಂದು ಇತರ ತಂಡಗಳು ನಿರಾಸೆ ಅನುಭವಿಸಬೇಕಾಗಿಲ್ಲ! 2025ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಆಸೆ ಜೀವಂತವಿಡಲು ಪ್ರಯತ್ನಿಸಬಹುದಾಗಿದೆ. ಯಾಕೆಂದರೆ, ಹಾಲಿ ವಿಶ್ವಕಪ್ ಅಂಕಪಟ್ಟಿಯಲ್ಲಿ ಅಗ್ರ 8ರೊಳಗಿನ ಸ್ಥಾನ ಪಡೆಯುವ ತಂಡಗಳಿಗೆ ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಲಭಿಸಲಿದೆ.
ಪಾಕಿಸ್ತಾನ 2025ರ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸಲಿದೆ. ಹೀಗಾಗಿ ಅದಕ್ಕೆ ನೇರ ಅರ್ಹತೆ ಸಿಗಲಿದೆ. ಇನ್ನುಳಿದಂತೆ ಪಾಕ್ ಸೇರಿ ವಿಶ್ವಕಪ್ ಅಂಕಪಟ್ಟಿಯ ಅಗ್ರ 8 ತಂಡಗಳು ಅಥವಾ ಪಾಕ್ ಅದಕ್ಕಿಂತ ಕೆಳಗಿನ ಸ್ಥಾನದಲ್ಲಿದ್ದರೆ ಅಗ್ರ 7 ತಂಡಗಳು ಚಾಂಪಿಯನ್ಸ್ ಟ್ರೋಫಿಗೆ ಅರ್ಹತೆ ಪಡೆಯಲಿವೆ. ಹೀಗಾಗಿ ಸದ್ಯ ಅಂಕಪಟ್ಟಿಯಲ್ಲಿ ಕೊನೇ 2 ಸ್ಥಾನದಲ್ಲಿರುವ ಬಾಂಗ್ಲಾದೇಶ, ಇಂಗ್ಲೆಂಡ್ಗೆ ಚಾಂಪಿಯನ್ಸ್ ಟ್ರೋಫಿ ಅರ್ಹತೆ ಕೈತಪ್ಪುವ ಭೀತಿ ಎದುರಾಗಿದೆ.
ಚಾಂಪಿಯನ್ಸ್ ಟ್ರೋಫಿ ಅರ್ಹತೆಗೆ ಐಸಿಸಿ ರೂಪಿಸಿರುವ ಈ ಮಾನದಂಡದಿಂದಾಗಿ, ಟೆಸ್ಟ್ ಮಾನ್ಯತೆ ಹೊಂದಿರುವ ವೆಸ್ಟ್ ಇಂಡೀಸ್, ಜಿಂಬಾಬ್ವೆ ಮತ್ತು ಐರ್ಲೆಂಡ್ ತಂಡಗಳಿಗೆ ಅರ್ಹತೆಯ ಅವಕಾಶ ಕೈತಪ್ಪಿದಂತಾಗಿದೆ. ಏಕದಿನ ಮಾದರಿಯ ಚಾಂಪಿಯನ್ಸ್ ಟ್ರೋಫಿ 2017ರಲ್ಲಿ ಕೊನೆಯದಾಗಿ ನಡೆದಿತ್ತು ಮತ್ತು ಐಸಿಸಿ ರ್ಯಾಂಕಿಂಗ್ ಆಧಾರದಲ್ಲಿ ಅಗ್ರ 8 ತಂಡಗಳಿಗೆ ಅರ್ಹತೆ ನೀಡಲಾಗಿತ್ತು.
2029ರಲ್ಲಿ ಮತ್ತೆ ಭಾರತದ ಆತಿಥ್ಯದಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಡೆಯಲಿದೆ. ಆಗ 2027ರ ಏಕದಿನ ವಿಶ್ವಕಪ್ನಲ್ಲಿ ಅಗ್ರ 8 ತಂಡಗಳಿಗೆ (ಆತಿಥೇಯ ಭಾರತ ಸೇರಿ) ಚಾಂಪಿಯನ್ಸ್ ಟ್ರೋಫಿ ಅರ್ಹತೆ ಲಭಿಸಲಿದೆ ಎಂದು ಐಸಿಸಿ ತಿಳಿಸಿದೆ. 2027ರ ಏಕದಿನ ವಿಶ್ವಕಪ್ನಲ್ಲಿ 14 ತಂಡಗಳು ಭಾಗವಹಿಸಲಿವೆ. ಹೀಗಾಗಿ ಆಗ ಸ್ಪರ್ಧೆ ಇನ್ನಷ್ಟು ನಿಕಟವಾಗಿರಲಿದೆ.
2027ರ ಏಕದಿನ ವಿಶ್ವಕಪ್ಗೆ ದಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾ ಆತಿಥ್ಯ ವಹಿಸಲಿದೆ. ಈ ಪೈಕಿ ಆತಿಥೇಯ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆಗೆ ವಿಶ್ವಕಪ್ಗೆ ನೇರಅರ್ಹತೆ ಲಭಿಸಲಿದ್ದರೆ, ನಮೀಬಿಯಾ ಅರ್ಹತಾ ಸುತ್ತಿನಲ್ಲಿ ಭಾಗವಹಿಸಿ ಅರ್ಹತೆಗೆ ಪ್ರಯತ್ನಿಸಬೇಕಿದೆ. ಉಳಿದಂತೆ, 2027ರ ಮಾರ್ಚ್ 31ರ ವೇಳೆಗೆ ಐಸಿಸಿ ಏಕದಿನ ರ್ಯಾಂಕಿಂಗ್ನಲ್ಲಿ ಅಗ್ರ 8ರೊಳಗಿರುವ (ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಹೊರತಾಗಿ) ತಂಡಗಳು ವಿಶ್ವಕಪ್ಗೆ ಅರ್ಹತೆ ಸಂಪಾದಿಸಲಿವೆ. ಉಳಿದ 4 ತಂಡಗಳನ್ನು ಅರ್ಹತಾ ಸುತ್ತಿನ ಮೂಲಕ ಆರಿಸಲಾಗುತ್ತದೆ.