ಸುಶಾಂತ್​ ಕುಟುಂಬದವರು ರಿಯಾ ವಿರುದ್ಧ ತಿರುಗಿ ಬಿದ್ದಿದ್ದೇಕೆ?

Sushant Singh Rajaput - Final
Published on

ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರಿಗೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿರುವುದಾಗಿ ಸುಶಾಂತ್​ ಅವರ ತಂದೆ ಕೆ.ಕೆ. ಸಿಂಗ್​ ನಟಿ ರಿಯಾ ಚಕ್ರವರ್ತಿ ವಿರುದ್ಧ ದೂರು ದಾಖಲಿಸಿದ್ದಾರೆ. ಅಷ್ಟೇ ಅಲ್ಲ, ಸುಶಾಂತ್​ ಸಾವಿನ ಹಿಂದೆ ರಿಯಾ ಇರಬಹುದು ಎಂದು ಕೆ.ಕೆ. ಸಿಂಗ್​ ಎಂಟು ಅಂಶಗಳನ್ನು ಪಟ್ಟಿ ಸಹ ಮಾಡಿದ್ದಾರೆ.

ಇದಕ್ಕೆ ಪ್ರತಿಯಾಗಿ ರಿಯಾ ಸಹ ತಮ್ಮದೇ ರೀತಿಯಲ್ಲಿ ಫೈಟ್​ ಮಾಡುತ್ತಿರುವುದು ಗೊತ್ತಿರಬಹುದು. ಈ ಪ್ರಕರಣವನ್ನು ಮುಂಬೈ ಪೊಲೀಸರಿಂದ ಪಾಟ್ನಾ ಪೊಲೀಸರಿಗೆ ವರ್ಗಾಯಿಸಬಾರದು ಎಂದು ಅವರು ಈಗಾಗಲೇ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದಾರೆ.

ಎಲ್ಲಾ ಸರಿ, ಸುಶಾಂತ್ ಸಿಂಗ್​ ಅವರ ಕುಟುಂಬದವರು ರಿಯಾ ವಿರುದ್ಧ ತಿರುಗಿ ಬಿದ್ದಿದ್ದೇಕೆ ಮತ್ತು ಅವರ ವಿರುದ್ಧ ದೂರು ದಾಖಲಿಸಿರುವುದೇಕೆ ಎಂಬ ಪ್ರಶ್ನೆಯೊಂದು ಎಲ್ಲೆಡೆ ಕೇಳಿ ಬರುತ್ತಿದೆ. ಪ್ರಮುಖವಾಗಿ ಮುಂಬೈ ಪೊಲೀಸರೇ ಈ ವಿಷಯವಾಗಿ ಬಹಳ ತಲೆ ಕೆಡಿಸಿಕೊಂಡಿದ್ದಾರೆ.

ಈ ಹಿಂದೆ ಸುಶಾಂತ್​ ಸಾವಿನ ವಿಚಾರಣೆ ಶುರುವಾದಾಗ, ಮುಂಬೈ ಪೊಲೀಸರು ಮೊದಲು ವಿಚಾರಣೆ ಮಾಡಿದ್ದು ಅವರ ಕುಟುಂಬದವರನ್ನೇ. ಸುಶಾಂತ್​ ತಂದೆ ಕೆ.ಕೆ. ಸಿಂಗ್​, ಸಹೋದರಿ ಮುಂತಾದವರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆ ನಂತರವಷ್ಟೇ ಅವರೆಲ್ಲಾ ಪಾಟ್ನಾಗೆ ವಾಪಸ್ಸಾಗಿದ್ದರು.

ಮುಂಬೈ ಪೊಲೀಸರ ತಲೆ ಕೊರೆಯುತ್ತಿರುವ ವಿಷಯವೇನೆಂದರೆ, ಸುಶಾಂತ್​ ಕುಟುಂಬದವರನ್ನು ಕಳೆದ ತಿಂಗಳ ವಿಚಾರಣೆಗೆ ಒಳಪಡಿಸಿದಾಗ, ಯಾರೂ ಸಹ ರಿಯಾ ಬಗ್ಗೆ ಒಂದೇ ಒಂದು ಮಾತನ್ನು ಆಡಿರಲಿಲ್ಲವಂತೆ. ಆಕೆಯ ಬಗ್ಗೆ ಯಾವುದೇ ಸಂಶಯ ಹೊರಹಾಕಿರಲಿಲ್ಲವಂತೆ. ಆಗ ಸುಮ್ಮನಿದ್ದ ಅವರು, ಈ ಒಂದು ತಿಂಗಳ ನಂತರ ರಿಯಾ ವಿರುದ್ಧ ಯಾಕೆ ದೂರು ಸಲ್ಲಿಸಿದ್ದಾರೆ ಎಂಬುದು ಮುಂಬೈ ಪೊಲೀಸರಿಗೆ ಬಗೆಹರಿಯದ ಪ್ರಶ್ನೆಯಾಗಿ ಉಳಿದಿದೆ.

ಇಷ್ಟಕ್ಕೂ ಸುಶಾಂತ್​ ಕುಟುಂಬದವರಿಗೆ ರಿಯಾ ಕುರಿತು ಅಷ್ಟೊಂದು ಸಂಶಯವೇಕೆ ಮತ್ತು ಆಕೆಯ ವಿರುದ್ಧ ದೂರು ಕೊಟ್ಟಿದ್ದೇಕೆ ಎಂಬ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net