

ನವದೆಹಲಿ: ಆತ್ಮನಿರ್ಭರ ಭಾರತ್ ರೋಜ್ಗಾರ್ ಯೋಜನೆ ಪ್ರಕಾರ, ಹೊಸ ಉದ್ಯೋಗಿಗಳ ಇಪಿಎಫ್ ಪಾಲನ್ನು ಎರಡು ವರ್ಷ ಕಾಲ ಕೇಂದ್ರ ಸರ್ಕಾರವೇ ಪಾವತಿಸಲಿದೆ. 2020ರ ಅಕ್ಟೋಬರ್ 1ರಂದು ಅಥವಾ ನಂತರದಿಂದ 2021ರ ಜೂನ್ 30 ಒಳಗೆ ಹೊಸ ಉದ್ಯೋಗಿಗಳ ಇಪಿಎಫ್ ಖಾತೆಗೆ ಇದು ನೇರವಾಗಿ ಜಮೆಯಾಗಲಿದೆ. ಹೊಸಬರಿಗೆ ಉದ್ಯೋಗ ನೀಡಿದ ಗರಿಷ್ಠ 1,000 ಉದ್ಯೋಗಿಗಳಿರುವ ಕಂಪನಿಗಳ ಹೊರೆ ಕಡಿಮೆ ಮಾಡಲು ಸರ್ಕಾರ ಈ ಹೊಸ ಯೋಜನೆ ಘೋಷಿಸಿದೆ.
ಸರ್ಕಾರ ನೀಡುವ ಸಹಾಯಧನ ಲೆಕ್ಕಾಚಾರ ಹೀಗಿರಲಿದೆ. ಉದ್ಯೋಗಿಯೊಬ್ಬ ತಿಂಗಳಿಗೆ 15,000 ರೂಪಾಯಿಗಿಂತ ಕಡಿಮೆ ವೇತನ ಪಡೆಯುತ್ತಿದ್ದು ಎಂಪ್ಲಾಯ್ಮೆಂಟ್ ಪ್ರಾವಿಡೆಂಟ್ ಫಂಡ್ ಆರ್ಗನೈಸೇಷನ್ (ಇಪಿಎಫ್ಒ) ನಲ್ಲಿ ನೊಂದಾಯಿತ ಕಂಪನಿಯಲ್ಲಿ ಕೆಲಸ ಮಾಡಿಲ್ಲದೆ ಹೋದರೆ ಅಥವಾ 2020ರ ಅಕ್ಟೋಬರ್ 1ರ ಮೊದಲು ಇಪಿಎಫ್ ಖಾತೆ ಹೊಂದಿರದೇ ಇದ್ದರೆ ಅಂಥವರು ಹೊಸದಾಗಿ 2020ರ ಅಕ್ಟೋಬರ್ 1 ಅಥವಾ ನಂತರ ಉದ್ಯೋಗ ಗಿಟ್ಟಿಸಿಕೊಂಡಿದ್ದರೆ ಈ ಯೋಜನೆಯ ಫಲಾನುಭವಿಗಳಾಗಿರುತ್ತಾರೆ.
ಅದೇ ರೀತಿ, ತಿಂಗಳಿಗೆ 15,000 ರೂಪಾಯಿಗಿಂತ ಕಡಿಮೆ ವೇತನ ಪಡೆಯುತ್ತಿದ್ದು ಇಪಿಎಫ್ನ ಯೂನಿವರ್ಸಲ್ ಅಕೌಂಟ್ ನಂಬರ್ ಹೊಂದಿರುವ ಉದ್ಯೋಗಿ 2020ರ ಮಾರ್ಚ್ 1ರಿಂದ ಸೆಪ್ಟೆಂಬರ್ 30ರ ಅವಧಿಯಲ್ಲಿ ಉದ್ಯೋಗ ಕಳೆದುಕೊಂಡಿದ್ದು, ಆ ಅವಧಿಯಲ್ಲಿ ಹೊಸ ಉದ್ಯೋಗಕ್ಕೆ ಸೇರ್ಪಡೆಗೊಳ್ಳದೇ ಹೋಗಿದ್ದರೆ ಅಂಥವರು ಈ ಯೋಜನೆಯ ಫಲಾನುಭವಿಗಳಾಗುತ್ತಾರೆ.
ಸರ್ಕಾರದ ಸಹಾಯಧನವನ್ನು ಇಪಿಎಫ್ಒ ಆಧಾರ್ ಜೋಡಣೆಯಾಗಿರುವ ಫಲಾನುಭವಿಗಳ ಖಾತೆಗೆ ನೇರವಾಗಿ ಅಂದರೆ ಇಲೆಕ್ಟ್ರಾನಿಕ್ ಪಾವತಿ ಮೂಲಕ ಜಮೆ ಮಾಡಲಿದೆ. ಇದಕ್ಕಾಗಿ ಇಪಿಎಫ್ಒ ತಂತ್ರಾಂಶ ಸಿದ್ಧಪಡಿಸಲಿದ್ದು, ಪಾರದರ್ಶಕ ಮತ್ತು ಬದ್ಧತೆಯೊಂದಿಗೆ ಇದನ್ನು ನೆರವೇರಿಸಲು ಈಗಾಗಲೇ ಕೆಲಸ ಆರಂಭಿಸಿದೆ ಎಂದು ಸರ್ಕಾರ ತಿಳಿಸಿದೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..