ಮುಂದಿನ ಮುಖ್ಯಮಂತ್ರಿ ಯಾರು?; ಇದೊಂದೇ ಪ್ರಶ್ನೆಗೆ ಯುವಕರ ಮಧ್ಯ ಮಾರಾಮಾರಿ, ಕೊಲೆ ಬೆದರಿಕೆ

Siddaramaiah H D Kumaraswamy
Published on

ಶಿವಮೊಗ್ಗ: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸನಿಹವಾಗುತ್ತಿದ್ದಂತೆ ಇತ್ತ ಯಾರು ಸಿಎಂ ಆಗುತ್ತಾರೆಂಬ ಚರ್ಚೆಗಳು ನಡೆಯುತ್ತಿವೆ. ಮುಂದಿನ ಚುನಾವಣೆ ಬಳಿಕ ಯಾರು ಸಿಎಂ ಆಗುತ್ತಾರೆ ಎಂಬ ವಿಚಾರಕ್ಕೆ ಭದ್ರಾವತಿ ಗ್ರಾಮಾಂತರದಲ್ಲಿ ಯುವಕನ ಮೇಲೆ ಐವರು ಹಲ್ಲೆ ನಡೆಸಿ ಕೊಲೆ ಬೆದರಿಕೆ ಹಾಕಿದ್ದಾರೆ.

ಭದ್ರಾವತಿ ತಾಲೂಕಿನ ಮಲ್ಲಿಗೇನಹಳ್ಳಿಯ ಆಕಾಶ್ ಎಂಬುವರ ಮೇಲೆ ಗೋಣಿಬೀಡು ಗ್ರಾಮದ ದಿನೇಶ, ಮಲ್ಲಿಗೇನಹಳ್ಳಿಯ ಯೋಗೇಶ ಸೇರಿದಂತೆ ಐವರು ಹಲ್ಲೆ ನಡೆಸಿದ್ದಾರೆ. ಆಕಾಶ್ ಕೆಲಸದ ನಿಮಿತ್ತ ಮಲ್ಲಿಗೇನಹಳ್ಳಿಯ ಕ್ಯಾಂಪ್‌ಗೆ ತೆರಳಿದ್ದರು. ಈ ವೇಳೆ ದಿನೇಶ್, ಯೋಗೇಶ್ ಮತ್ತಿತರರು ಸಿಎಂ ಯಾರಾಗುತ್ತಾರೆಂದು ಚರ್ಚೆ ನಡೆಸುತ್ತಿದ್ದರು.

ಈ ವೇಳೆ 2013ರಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದರು. 2023ರಲ್ಲೂ ಸಿದ್ದರಾಮಯ್ಯ ಅವರೇ ಸಿಎಂ ಆಗುವರು ಎಂದು ಆಕಾಶ್ ಹೇಳಿದ್ದರು. ಅದಕ್ಕೆ ಸಿಟ್ಟಿಗೆದ್ದ ದಿನೇಶ್ ಮತ್ತು ಯೋಗೇಶ್ ಮತ್ತಿತರರು ಎಚ್.ಡಿ.ಕುಮಾರಸ್ವಾಮಿ ಸಿಎಂ ಆಗುತ್ತಾರೆಂದು ಆಕಾಶ್‌ನನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net