ಗಾಲ್ವಾನ್ ಸಂಘರ್ಷಕ್ಕೆ ಚೀನಾದಲ್ಲಿ ಆದೇಶ ನೀಡಿದವರು ಯಾರು?

Galwan valley
Published on

ವಾಷಿಂಗ್ಟನ್​: ಗಾಲ್ವಾನ್ ನದಿ ಕಣಿವೆ ಪ್ರದೇಶದಲ್ಲಿ ಕಳೆದ ವಾರ ಭಾರತದ ಸೇನೆ ಮೇಲೆ ಧಾಳಿ ನಡೆಸುವುದಕ್ಕೆ ಚೀನಾದ ಹಿರಿಯ ಅಧಿಕಾರಿ ಆದೇಶ ನೀಡಿದ್ದರು. ಇದರ ಪರಿಣಾಮ ಎರಡು ಸೇನೆಗಳ ಹಲವು ಯೋಧರು ಪ್ರಾಣ ಕಳೆದುಕೊಳ್ಳಬೇಕಾಗಿ ಬಂತು. ಅಷ್ಟೇ ಅಲ್ಲ, ಉಭಯ ರಾಷ್ಟ್ರಗಳ ನಡುವೆ ಭಾರಿ ಉದ್ವಿಗ್ನ ಪರಿಸ್ಥಿತಿ ಉಂಟಾಗಲು ಕಾರಣವಾಯಿತು ಎಂದು ಅಮೆರಿಕದ ಗುಪ್ತಚರ ವರದಿಯೊಂದು ಹೇಳಿದೆ.

ಅಮೆರಿಕದ ಗುಪ್ತಚರ ವರದಿ ಪ್ರಕಾರ, ಚೀನಾದ ವೆಸ್ಟರ್ನ್ ಥಿಯೆಟರ್ ಕಮಾಂಡ್​ನ ಮುಖ್ಯಸ್ಥ ಜನರಲ್ ಝವೋ ಝೋಂಗ್​ಕಿ ಈ ಆದೇಶ ನೀಡಿದ್ದರು. ಪೀಪಲ್ಸ್ ಲಿಬರೇಷನ್ ಆರ್ಮಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕೆಲವೇ ಕೆಲವು ಹಿರಿಯ ಸಮರ ಯೋಧರ ಪೈಕಿ ಝವೋ ಒಬ್ಬರು. ಭಾರತದ ಗಡಿ ಭಾಗ ಮತ್ತು ನೈಋತ್ಯ ಚೀನಾದ ಗಡಿ ಭಾಗದ ಕಾರ್ಯಾಚರಣೆಯ ಹೊಣೆಗಾರಿಕೆ ಹೊತ್ತುಕೊಂಡ ವ್ಯಕ್ತಿ ಝವೊ. ಈ ಹಿಂದೆಯೂ ಭಾರತದ ಜತೆಗಿನ ಗಡಿ ಬಿಕ್ಕಟ್ಟಿನ ಸಂದರ್ಭದಲ್ಲಿ ಅವುಗಳನ್ನು ನಿಭಾಯಿಸಿದ, ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ಭವಿಷ್ಯದಲ್ಲಿ ಚೀನಾಕ್ಕೆ ಯಾವುದೇ ಬೆದರಿಕೆ ಭಾರತದಿಂದಲೋ ಅಥವಾ ಅಮೆರಿಕದಿಂದಲೋ ಬರಬಾರದು. ಅದಕ್ಕೆ ತಕ್ಕ ಪಾಠ ಕಲಿಸಬೇಕು ಎಂದು ಚೀನಾ ಸರ್ಕಾರ ನಿರ್ಧರಿಸಿದ ಪರಿಣಾಮವೇ ಕಳೆದ ವಾರದ ದಾಳಿ ಆಗಿತ್ತು. ಚೀನಾದ ದಾಳಿ ಮತ್ತು ಅದರ ನಂತರದ ಬೆಳವಣಿಗೆಗಳ ಒಟ್ಟು ವಿಶ್ಲೇಷಣೆ ನಡೆಸಿರುವ ವರದಿ, ಅದು ಭಾರತವನ್ನು ಎಲ್ಲದಕ್ಕೂ ಉತ್ತರದಾಯಿಯನ್ನಾಗಿಸುವ ಪ್ರಯತ್ನ ನಡೆಸಿದೆ. ಅದು ಈಗಾಗಲೇ ತನ್ನದೆಂದು ವಾದಿಸ ಹೊರಟಿರುವ ಗಡಿ ವಿಚಾರ, ಅಮೆರಿಕಕ್ಕೆ ಹತ್ತಿರವಾಗದಂತೆ ಎಚ್ಚರಿಸುವುದು ಕೂಡ ಅದರ ಉದ್ದೇಶವಾಗಿತ್ತು.

ಆದರೆ, ಭೌಗೋಳಿಕ ಗಡಿಯ ಸಂಘರ್ಷಕ್ಕೆ ಹೊರತು ಪಡಿಸಿ ನೋಡಿದರೆ, ಇದಕ್ಕೂ ಮೊದಲು 5ಜಿ ನೆಟ್​ವರ್ಕ್ ಮೂಲಸೌಕರ್ಯ ಸೃಷ್ಟಿಸಲು ಚೀನಾದ ಹುವೇಯಿ ಕಂಪನಿ ನೆರವು ಪಡೆಯದಂತೆ ಭಾರತದ ಮೇಲೆ ಅಮೆರಿಕ ಸಾಕಷ್ಟು ಒತ್ತಡ ಹೇರಿತ್ತು. ಇದೀಗ ಚೀನಾದ ದಾಳಿ ಬೆನ್ನಿಗೆ ಭಾರತದಲ್ಲಿ ಅದರ ವಾಣಿಜ್ಯ ಚಟುವಟಿಕೆಗೆ ಹೊಡೆತ ನೀಡುವ ಪ್ರತಿರೋಧ ವ್ಯಕ್ತವಾಗಿದೆ. ಚೀನಾದ ಸೋಷಿಯಲ್ ಮೀಡಿಯಾ ಆ್ಯಪ್ ಟಿಕ್​ಟಾಕ್​ ಡಿಲೀಟ್ ಮಾಡಿ ಅಭಿಯಾನ ಶುರುವಾಯಿತು. ಬಾಯ್ಕಾಟ್ ಚೀನಾ ಅಭಿಯಾನ ಬೆನ್ನಿಗಿದೆ. ಚೀನಾಕ್ಕೆ ಈ ಬೆಳವಣಿಗೆ ಬೇಕಾಗಿರಲಿಲ್ಲ. ಹೀಗಾಗಿ ಅದರ ಆಲೋಚನೆ ತಿರುಗುಬಾಣವಾಗುವ ಲಕ್ಷಣಗಳು ಗೋಚರಿಸಿವೆ.

ಗಾಲ್ವಾನ್ ಕಣಿವೆ ಪ್ರದೇಶದ ದಾಳಿ ವಿಚಾರದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ ಪಾತ್ರ ಎಷ್ಟಿತ್ತು ಎಂಬುದು ಸ್ಪಷ್ಟವಾಗಿಲ್ಲ. ಆದಾಗ್ಯೂ, ಸೇನೆಯ ಪ್ರತಿ ಚಟುವಟಿಕೆಯ ಮಾಹಿತಿಯೂ ಜಿನ್​ಪಿಂಗ್ ಅವರಿಗೆ ಇರುತ್ತದೆ. ಈ ದಾಳಿ ವಿಚಾರವೂ ಅವರಿಗೆ ಮೊದಲೇ ತಿಳಿದಿತ್ತು ಎಂದು ಚೀನಾ ಸೇನೆಯ ಆಪ್ತ ಮೂಲಗಳು ಬಹಿರಂಗಪಡಿಸಿವೆ. ಇದಕ್ಕೆ ಪೂರಕವಾಗಿ ದಾಳಿಗೆ ಚೀನಾ ಸೇನೆ ಮೇ ತಿಂಗಳಲ್ಲೇ ಸಿದ್ಧತೆ ನಡೆಸಿತ್ತು ಎಂಬುದನ್ನು ಖಾಸಗಿ ಜಿಯೋ ಇಂಟೆಲಿಜೆನ್ಸ್ ಸಂಸ್ಥೆ ಹಾವ್ಕೇ 360 ಇತ್ತೀಚೆಗೆ ಪ್ರಕಟಿಸಿದ ವರದಿ ಬಹಿರಂಗಪಡಿಸಿದೆ. ಮೇ ತಿಂಗಳ ಉಪಗ್ರಹ ಚಿತ್ರದ ಪ್ರಕಾರ ಗಾಲ್ವಾನ್ ನದಿ ಕಣಿವೆ ಪ್ರದೇಶದಲ್ಲಿ ಚೀನಾ ಸೇನೆ ಯೋಧರು ಯುದ್ಧೋಪಕರಣಗಳನ್ನು ಹೊತ್ತು ಸಾಗುತ್ತಿರುವುದು ಕಾಣಿಸಿದೆ ಎಂಬ ಅಂಶವನ್ನೂ ವರದಿ ಉಲ್ಲೇಖಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net