

ನವದೆಹಲಿ: ಭಾರೀ ಕುತೂಹಲ ಕೆರಳಿಸಿದ್ದ ದೆಹಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ವಿಚಾರಕ್ಕೆ ಬಿಜೆಪಿ ಹೈಕಮಾಂಡ್ ತೆರೆ ಎಳೆದಿದ್ದು, ಹಿರಿಯ ನಾಯಕಿ ಶಾಲಿಮಾರ್ಭಾಗ್ ಕ್ಷೇತ್ರದ ಶಾಸಕಿ ರೇಖಾ ಗುಪ್ತಾರನ್ನು (Rekha Gupta) ನೂತನ ಸಿಎಂ ಆಗಿ ಆಯ್ಕೆ ಮಾಡಿದೆ. ಮೊದಲು ದೆಹಲಿಯ ಮುಖ್ಯಮಂತ್ರಿಯಾಗಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಗೆದ್ದ ಪರ್ವೇಶ್ ವರ್ಮಾರನ್ನು ಆಯ್ಕೆ ಮಾಡಲಾಗುವುದು ಎಂಬ ಸುದ್ದಿಗಳು ಹರಿದಾಡಿದ್ದವು. ಆದರೆ, ಕೊನೆಯ ಕ್ಷಣದಲ್ಲಿ ರೇಖಾ ಗುಪ್ತಾ ದೆಹಲಿಯ ಸಿಎಂ ಆಗಿ ಆಯ್ಕೆಯಾಗಿದ್ದು, ಪರ್ವೇಶ್ ವರ್ಮ ದೆಹಲಿಯ ಉಪಮುಖ್ಯಮಂತ್ರಿಯಾಗಲಿದ್ದಾರೆ.
ಇದೇ ಮೊದಲ ಬಾರಿಗೆ ದೆಹಲಿ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾಗಿರುವ ರೇಖಾ ಗುಪ್ತಾ (Rekha Gupta) ಅವರು ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದು, ಹಲವರಲ್ಲಿ ಅಚ್ದರಿ ಮೂಡಿಸಿದೆ. ಮೂಲತಃ ಬನಿಯಾ ಸಮುದಾಯದವರಾದ ರೇಖಾ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂದು ಬಿಜೆಪಿ ಹೈಕಮಾಂಡ್ ಆಸಕ್ತಿ ವಹಿಸಿತ್ತು ಎಂದು ಹೇಳಲಾಗಿದ್ದು, ಬನಿಯಾ ಸಮಯದಾಯದಿಂದ ಶಾಸಕರಾಗಿ ಆಯ್ಕೆಯಾದ ಪ್ರಭಾವಿ ನಾಯಕಿಗೆ ಮುಖ್ಯಮಂತ್ರಿ ಪಟ್ಟವನ್ನು ನೀಡಲಾಗಿದೆ.
ಮೂಲತಃ ಹರಿಯಾಣದವರಾದ ರೇಖಾ ಗುಪ್ತಾ (Rekha Gupta) ಅವರು ದೆಹಲಿಯಲ್ಲಿ ಹೆಚ್ಚು ಖ್ಯಾತಿ ಗಳಿಸಿದ್ಧಾರೆ. ದೆಹಲಿ ಘಟಕದ ಹಿರಿಯ ಬಿಜೆಪಿ ನಾಯಕರಲ್ಲಿ ಒಬ್ಬರಾದ ರೇಖಾ ಗುಪ್ತಾ ಆವರು ರಾಜಕೀಯ ಜೀವನ ಮತ್ತು ವಿದ್ಯಾರ್ಥಿ ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದಾರೆ. 50 ವರ್ಷದ ಅವರು ದೆಹಲಿ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ರಾಷ್ಟ್ರೀಯ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಫೆಬ್ರವರಿ 20ರಂದು ದೆಹಲಿ ರಾಮ್ಲೀಲಾ ಮೈದಾನದಲ್ಲಿ ನಡೆಯಲಿರುವ ಪ್ರಮಾಣವಚನ ಕಾರ್ಯಕ್ರಮದಲ್ಲಿ ರೇಖಾ ಗುಪ್ತಾ (Rekha Gupta) ಅವರೊಂದಿಗೆ ಒಟ್ಟು ಆರು ಮಂದಿ ಸಚಿವರಾಗಿ ಪದಗ್ರಹಣ ಮಾಡಲಿದ್ಧಾರೆ ಎಂದು ತಿಳಿದು ಬಂದಿದೆ. ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಎನ್‌ಡಿಎ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು, ಕೈಗಾರಿಕೋದ್ಯಮಿಗಳು, ಚಲನಚಿತ್ರ ತಾರೆಯರು, ಖ್ಯಾತ ಕ್ರೀಡಾಪಟುಗಳು, ಸಾಧು ಸಂತರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.