

ಮುಂಬೈ: ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಟೆಸ್ಟ್ ತಂಡದ ಆಯ್ಕೆಯ ವೇಳೆ ಅಜಿಂಕ್ಯ ರಹಾನೆ ಅವರನ್ನು ಉಪನಾಯಕ ಪಟ್ಟದಿಂದ ವಜಾಗೊಳಿಸಿ ರೋಹಿತ್ ಶರ್ಮಗೆ ಈ ಜವಾಬ್ದಾರಿ ವಹಿಸಲಾಗಿತ್ತು. ಇದೀಗ ರೋಹಿತ್ ಶರ್ಮ ಗಾಯದಿಂದಾಗಿ ಗೈರಾಗಿದ್ದು, ತಂಡದ ಹಂಗಾಮಿ ಉಪನಾಯಕ ಯಾರಾಗುವರು ಎಂಬ ಕುತೂಹಲವೂ ಎದ್ದಿದೆ.
ರಹಾನೆ ಅವರನ್ನೇ ಮತ್ತೆ ಉಪನಾಯಕ ಮಾಡಲಾಗುವುದೇ ಅಥವಾ ಟಿ20 ತಂಡದ ಉಪನಾಯಕ ಕೆಎಲ್ ರಾಹುಲ್ ಅಥವಾ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್‌ಗೆ ಜವಾಬ್ದಾರಿ ವಹಿಸಲಾಗುವುದೇ ಅಥವಾ ಆಸೀಸ್ ತಂಡ ಬೌಲರ್‌ಗೆ ನಾಯಕತ್ವ (ಪ್ಯಾಟ್ ಕಮ್ಮಿನ್ಸ್) ನೀಡಿ ಆಶಸ್ ಸರಣಿಯಲ್ಲಿ ಯಶ ಕಂಡಂತೆ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್‌ಗೆ ಹುದ್ದೆ ನೀಡಲಾಗುವುದೇ ಎಂಬ ಪ್ರಶ್ನೆಗಳು ಎದ್ದಿವೆ.
ರೋಹಿತ್ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಆಡುವುದಿಲ್ಲ ಎಂದು ಬಿಸಿಸಿಐ ಅಧಿಕೃತ ಪ್ರಕಟಣೆ ಹೊರಡಿಸಿದ್ದು, ಪ್ರಿಯಾಂಕ್ ಪಾಂಚಾಲ್‌ರನ್ನು ಬದಲಿ ಆಟಗಾರನಾಗಿ ಹೆಸರಿಸಿದೆ. ಆದರೆ ರೋಹಿತ್ ಗೈರಲ್ಲಿ ತಂಡದ ಉಪನಾಯಕ ಯಾರಾಗುತ್ತಾರೆ ಎಂದು ಸ್ಪಷ್ಟಪಡಿಸಿಲ್ಲ.
ಏಕದಿನ ಸರಣಿಗೆ ರೋಹಿತ್ ಫಿಟ್?
ದಕ್ಷಿಣ ಆಫ್ರಿಕಾದಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿ ಬೆನ್ನಲ್ಲೇ ಜನವರಿ 19ರಿಂದ 3 ಪಂದ್ಯಗಳ ಏಕದಿನ ಸರಣಿ ನಡೆಯಲಿದ್ದು, ಇದಕ್ಕೆ ಈಗಾಗಲೆ ರೋಹಿತ್ ಶರ್ಮ ಅವರನ್ನು ಹೊಸ ನಾಯಕರನ್ನಾಗಿ ನೇಮಿಸಲಾಗಿದೆ. ಟೆಸ್ಟ್ ಸರಣಿಯಿಂದ ಹೊರಬಿದ್ದಿರುವ ರೋಹಿತ್ ಏಕದಿನ ಸರಣಿಯಲ್ಲಿ ತಂಡ ಮುನ್ನಡೆಸಲು ಫಿಟ್ ಆಗುವರೇ ಎಂಬುದು ಸ್ಪಷ್ಟವಾಗಿಲ್ಲ. ಪ್ರವಾಸಕ್ಕೆ ಏಕದಿನ ತಂಡವೂ ಇದುವರೆಗೆ ಪ್ರಕಟಗೊಂಡಿಲ್ಲ. ಇದೀಗ ರೋಹಿತ್ ಫಿಟ್ನೆಸ್ ಗೊಂದಲ ನಿವಾರಣೆಯಾಗುವವರೆಗೆ ಏಕದಿನ ತಂಡ ಪ್ರಕಟವೂ ಅನುಮಾನವೆನಿಸಿದೆ.