ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಯಿಂದ ರೋಹಿತ್ ಶರ್ಮ ಔಟ್

rohit web
Published on

ಮುಂಬೈ: ಭಾರತ ಟೆಸ್ಟ್ ತಂಡದ ಉಪನಾಯಕ ಹಾಗೂ ಆರಂಭಿಕ ಬ್ಯಾಟರ್ ರೋಹಿತ್ ಶರ್ಮ ಗಾಯದಿಂದಾಗಿ ದಕ್ಷಿಣ ಆಫ್ರಿಕಾ ಪ್ರವಾಸದ ಟೆಸ್ಟ್ ಸರಣಿಯಿಂದ ಹೊರಬಿದ್ದಿದ್ದಾರೆ. ಪ್ರವಾಸಕ್ಕೆ ಪೂರ್ವಭಾವಿಯಾಗಿ ಮುಂಬೈನಲ್ಲಿ ಅಭ್ಯಾಸ ಅವಧಿಯಲ್ಲಿ ಪಾಲ್ಗೊಂಡಿದ್ದ ವೇಳೆ ರೋಹಿತ್ ಎಡಗಾಲು ಮಂಡಿರಜ್ಜು ನೋವಿಗೆ ಒಳಗಾಗಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ. ರೋಹಿತ್ ಅಲಭ್ಯತೆಯಿಂದ ಸವಾಲಿನ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ದೊಡ್ಡ ಹಿನ್ನಡೆ ಎದುರಿಸಿದೆ.

ಭಾನುವಾರ ಟೀಮ್ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ಹಾಗೂ ಕನ್ನಡಿಗ ರಾಘವೇಂದ್ರ ಅವರ ಎಸೆತಗಳನ್ನು ಎದುರಿಸುವ ವೇಳೆ ರೋಹಿತ್ ಕೈಗೆ ಗಾಯವಾಗಿತ್ತು. ಆದರೆ ಕೈಗೆ ಆದ ಗಾಯ ಗಂಭೀರವಾದುದಲ್ಲ. ಹಳೆಯ ಮಂಡಿರಜ್ಜು ಸಮಸ್ಯೆ ಮರುಕಳಿಸಿದ್ದೇ ರೋಹಿತ್ ಪ್ರವಾಸದಿಂದ ಹೊರಬೀಳಲು ಕಾರಣವಾಗಿದೆ. ಅವರು ಪೂರ್ಣ ಫಿಟ್ ಆಗಲು ಕೆಲಸಮಯ ಬೇಕಾಗಬಹುದು ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೋಹಿತ್ ಗೈರಿನಲ್ಲಿ ಕೆಎಲ್ ರಾಹುಲ್ ಜತೆಗೆ ಮತ್ತೋರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ಇನಿಂಗ್ಸ್ ಆರಂಭಿಸುವ ಅವಕಾಶ ಪಡೆಯುವ ನಿರೀಕ್ಷೆ ಇದೆ. 3 ಪಂದ್ಯಗಳ ಟೆಸ್ಟ್ ಸರಣಿಗೆ ಡಿ.26ರಂದು ಸೆಂಚುರಿಯನ್‌ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದೊಂದಿಗೆ ಚಾಲನೆ ಸಿಗಲಿದೆ.

ಗಾಯಾಳು ರೋಹಿತ್ ಶರ್ಮ ಸ್ಥಾನವನ್ನು ತುಂಬಲು ಗುಜರಾತ್ ಬ್ಯಾಟರ್ ಪ್ರಿಯಾಂಕ್ ಪಾಂಚಾಲ್ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದ್ದು, ಮುಂಬೈನಲ್ಲಿ ತಂಡದ ಬಯೋ-ಬಬಲ್ ಕೂಡ ಪ್ರವೇಶಿಸಿದ್ದಾರೆ. ಇತ್ತೀಚೆಗಿನ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆ ಭಾರತ ಎ ತಂಡದ ನಾಯಕರಾಗಿದ್ದ ಪ್ರಿಯಾಂಕ್, ಪಂದ್ಯವೊಂದರಲ್ಲಿ 96 ರನ್ ಸಿಡಿಸಿ ಗಮನಸೆಳೆದಿದ್ದರು. 100ಕ್ಕೂ ಅಧಿಕ ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ 31 ವರ್ಷದ ಪ್ರಿಯಾಂಕ್ 24 ಶತಕಗಳ ಸಹಿತ 7 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ.

ಪರಿಷ್ಕೃತ ಟೆಸ್ಟ್ ತಂಡ: ಕೊಹ್ಲಿ (ನಾಯಕ), ಕೆಎಲ್ ರಾಹುಲ್, ಮಯಾಂಕ್, ಪೂಜಾರ, ರಹಾನೆ, ಪ್ರಿಯಾಂಕ್ ಪಾಂಚಾಲ್, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಪಂತ್, ಸಾಹ, ಅಶ್ವಿನ್, ಜಯಂತ್ ಯಾದವ್, ಇಶಾಂತ್, ಶಮಿ, ಉಮೇಶ್ ಯಾದವ್, ಬುಮ್ರಾ, ಶಾರ್ದೂಲ್, ಸಿರಾಜ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net