

ನವದೆಹಲಿ: ನಕಲಿ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಉದ್ಯಮಿಯೊಬ್ಬರಿಂದ 80 ಲಕ್ಷ ರೂಪಾಯಿ ಹಣ ಸುಲಿಗೆ ಮಾಡಿರುವ ಆರೋಪದಲ್ಲಿ ಗುರುಗ್ರಾಮ ಪೊಲೀಸರಿಂದ ಬಂಧನವಾಗಿರುವ ದೆಹಲಿ ಮೂಲದ ಮಹಿಳಾ ಯೂಟ್ಯೂಬರ್, ಇದೀಗ ಉದ್ಯಮಿ ವಿರುದ್ಧವೇ ಬಾಣ ತಿರುಗಿಸಿದ್ದಾಳೆ. ನನ್ನನ್ನು ಒಲಿಸಿಕೊಳ್ಳಲು ಉದ್ಯಮಿ ಪ್ರಯತ್ನಿಸುತ್ತಿದ್ದರು ಎಂದು ಹೇಳಿದ್ದಾಳೆ.
ನಮ್ರಾ ಖಾದಿರ್ (22) ಬಂಧಿತ ಆರೋಪಿ. 21 ಉದ್ಯಮಿ ದಿನೇಶ್ ಯಾದವ್ ಎಂಬುವರನ್ನು ಹನಿಟ್ರ್ಯಾಪ್ ಮಾಡಿ, ನಕಲಿ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ 80 ಲಕ್ಷ ರೂಪಾಯಿ ಹಣ ಸುಲಿಗೆ ಮಾಡಿರುವ ಆರೋಪ ಆಕೆಯ ಮೇಲಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಈ ನಮ್ರಾ ಸಾಮಾನ್ಯ ಮಹಿಳೆಯೇನಲ್ಲ. ಸೋಶಿಯಲ್ ಮೀಡಿಯಾ ಸೆಲೆಬ್ರಿಟಿಯು ಹೌದು. ಯೂಟ್ಯೂಬ್ನಲ್ಲಿ 6 ಲಕ್ಷ ಸಬ್ಸ್ಕ್ರೈಬರ್ಸ್ ಹೊಂದಿರುವ ಈಕೆ ಇನ್ಸ್ಟಾಗ್ರಾಂನಲ್ಲಿ 2 ಲಕ್ಷ ಅನುಯಾಯಿಗಳು ಹೊಂದಿದ್ದಾಳೆ. ತನ್ನ ಮಾದಕ ವಿಡಿಯೋಗಳಿಂದಲೇ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾಳೆ. ಆಕೆಯ ಇನ್ಸ್ಟಾಗ್ರಾಂ ಖಾತೆಯನ್ನು ನೋಡಿದರೆ ಸಾಕಷ್ಟು ಬೋಲ್ಡ್ ವಿಡಿಯೋಗಳೇ ಕಾಣುತ್ತವೆ.
ವಿರಾಟ್ ಬೆನಿವಾಲ್ ಎಂಬಾತನೊಂದಿಗೆ ಮದುವೆ ಆಗಿದ್ದ ನಮ್ರಾ, ಗುರುಂಗಾವ್ನಲ್ಲಿ ವಾಸವಿದ್ದಳು. ದಂಪತಿ ಆಗಾಗ ಫನ್ನಿ ರೀಲ್ಸ್ಗಳನ್ನು ಮಾಡಿ ಜಾಲತಾಣ ವೇದಿಕೆಯಲ್ಲಿ ಹರಿಬಿಡುತ್ತಿದ್ದರು. ನಮ್ರಾಳ ಸೌಂದರ್ಯವನ್ನು ನೋಡಿ ಸಂತ್ರಸ್ತ ಉದ್ಯಮಿ ದಿನೇಶ್ ಯಾದವ್ ಕೂಡ ಮರುಳಾಗಿದ್ದ.
ಬಾದ್ಶಪುರ್ ನಿವಾಸಿಯಾಗಿರುವ ಸಂತ್ರಸ್ತ ಉದ್ಯಮಿ ಯಾದವ್ ಕಳೆದ ಆಗಸ್ಟ್ ತಿಂಗಳಲ್ಲೇ ದೂರು ನೀಡಿದ್ದರು. ಆದರೆ, ಆರೋಪಿ ಮಧ್ಯಂತರ ಜಾಮೀನಿಗಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದಳು. ಜಾಮೀನು ಅರ್ಜಿ ರದ್ದುಗೊಂಡ ಬಳಿಕ ನವೆಂಬರ್ 26ರಂದು ಸೆಕ್ಟರ್ 50 ಠಾಣಾ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಖಾಸಗಿ ಜಾಹಿರಾತು ಸಂಸ್ಥೆ ನಡೆಸುವ ಯಾದವ್ ಅವರು ನೀಡಿರುವ ದೂರಿನ ಪ್ರಕಾರ ಕೆಲವು ತಿಂಗಳುಗಳ ಹಿಂದೆ ಖಾದಿರ್ ಮತ್ತು ಆಕೆಯ ಪತಿ ಮನೀಶ್ ಪರಿಚಯವಾಯಿತಂತೆ. ಕಂಪನಿಯ ಜಾಹಿರಾತಿಗಾಗಿ ಖಾದಿರ್ಗೆ ಯಾದವ್ 2 ಲಕ್ಷ ರೂ. ಹಣ ನೀಡಿದ್ದರಂತೆ. ಇದಾದ ಬಳಿಕ ತನ್ನನ್ನು ಇಷ್ಟಪಡುತ್ತಿರುವುದಾಗಿ ಮತ್ತು ಮದುವೆ ಆಗಲು ಬಯಸಿರುವುದಾಗಿ ಖಾದಿರ್, ಯಾದವ್ ಬಳಿ ಹೇಳಿಕೊಂಡಳಂತೆ.
ಆಗಸ್ಟ್ನಲ್ಲಿ ಖಾದಿರ್ ಮತ್ತು ಮನೀಶ್ ಜೊತೆ ಕ್ಲಬ್ ಒಂದಕ್ಕೆ ತೆರಳಿದೆ. ಅಲ್ಲದೆ, ಒಂದು ರಾತ್ರಿಗೆ ರೂಮ್ ಬುಕ್ ಮಾಡಿದೆವು. ಆದರೆ, ಮಾರನೇ ದಿನ ನಕಲಿ ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿದಳು. ಬಳಿಕ ನನ್ನಿಂದ 80 ಲಕ್ಷ ರೂ. ಹಣ ಮತ್ತು ಇತರೆ ಉಡುಗೊರೆಗಳನ್ನು ಪಡೆದಿದ್ದಾಳಂತೆ.
ಸಂತ್ರಸ್ತನ ತಂದೆಯ ಬ್ಯಾಂಕ್ ಖಾತೆಯಿಂದಲೂ 5 ಲಕ್ಷ ರೂ. ಹಣ ವಿತ್ಡ್ರಾ ಆದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ಹಣ ಡ್ರಾ ಆದ ಬಗ್ಗೆ ತಂದೆ ಮಗನನ್ನು ಪ್ರಶ್ನೆ ಮಾಡಿದಾಗ, ಆತ ನಡೆದಿದ್ದೆಲ್ಲವನ್ನು ತಂದೆಯ ಮುಂದೆ ವಿವರಿಸಿದ್ದಾನೆ. ಬಳಿಕ ತಂದೆಯೇ ಮಗನನ್ನು ಕರೆದುಕೊಂಡು ಹೋಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದಾಗ ಇಡೀ ಪ್ರಕರಣ ಬಯಲಿಗೆ ಬಂದಿದೆ.
ಸೋಮವಾರ ದೆಹಲಿಯಲ್ಲಿ ಆರೋಪಿಯನ್ನು ಬಂಧಿಸಿರುವ ಪೊಲೀಸರು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಹಾಜರುಪಡಿಸಿ, ನಾಲ್ಕು ದಿನಗಳ ಕಾಲ ತಮ್ಮ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಆರೋಪಿ ಖಾದಿರ್, ಪತಿ ಮನೀಶ್ ಅಲಿಯಾಸ್ ವಿರಾಟ್ ಬೆನಿವಾಲ್ ಕೂಡ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ಪೊಲೀಸರ ಮುಂದೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ಹಣ ಸೇರಿದಂತೆ ಇತರೆ ವಸ್ತುಗಳನ್ನು ಆಕೆಯಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶೀಘ್ರದಲ್ಲೇ ಆಕೆಯ ಪತಿಯನ್ನು ಬಂಧಿಸುವುದಾಗಿ ಸೆಕ್ಟರ್ 50 ಪೊಲೀಸ್ ಠಾಣೆಯ ಎಸ್ಎಚ್ಒ ರಾಜೇಶ್ ಕುಮಾರ್ ತಿಳಿಸಿದ್ದಾರೆ.
ಉದ್ಯಮಿ ವಿರುದ್ಧವೇ ಗಂಭೀರ ಆರೋಪ
ತನ್ನ ಮೇಲಿನ ಆರೋಪವನ್ನು ಅಲ್ಲಗೆಳೆದಿರುವ ನಮ್ರಾ, ಮೊದಲನೆಯದು ದಿನೇಶ್ ನನಗೆ 80 ಲಕ್ಷ ರೂಪಾಯಿ ಕೊಟ್ಟಿಲ್ಲ ಮತ್ತು ಅವನು ಕೊಟ್ಟ ಹಣವನ್ನು ಅವನು ತನ್ನ ಕೆಲಸಕ್ಕಾಗಿ ಕೊಟ್ಟಿದ್ದಾರೆ. ಹೋಟೆಲ್ಗೆ ಸಂಬಂಧಪಟ್ಟಂತೆ, 2021ರ ಡಿಸೆಂಬರ್ 2 ರಂದು ಶಾಲಿಮಾರ್ ಬಾಗ್ನಲ್ಲಿರುವ ನನ್ನ ಮನೆಯಿಂದ ನನ್ನನ್ನು ಕರೆದುಕೊಂಡು ಹೋಗಲು ದಿನೇಶ್ ಬಂದರು. ಗುರುಗ್ರಾಮ್ನಲ್ಲಿ ಪಾರ್ಟಿಗೆ ಹೋದೆವು. ಈ ಪಾರ್ಟಿ ನನ್ನ ಯೂಟ್ಯೂಬರ್ ಸ್ನೇಹಿತರೊಬ್ಬರ ಫ್ಲಾಟ್ನಲ್ಲಿ ನಡೆಯಿತು. ದಿನೇಶ್ ಬಗ್ಗೆ ಅಷ್ಟೇನು ಪರಿಚಯ ಇರಲಿಲ್ಲ, ಆದರೆ, ಗೆಳೆಯರ ಸಲಹೆ ಮೇರೆಗೆ ದಿನೇಶ್ ಮತ್ತು ನನ್ನ ಪತಿ ವಿರಾಟ್ ಜೊತೆ ಅಂದು ಪಾರ್ಟಿಗೆ ಹೋಗಿದ್ದೆ. ಆದರೆ, ದಿನೇಶ್ ನನ್ನನ್ನು ಮೆಚ್ಚಿಸಲು ಪ್ರಯತ್ನಿಸುತ್ತಿದ್ದ. ದುಬಾರಿ ಬೆಲೆಯ ಚಾಕೋಲೇಟ್ಗಳನ್ನು ಕೊಡುತ್ತಿದ್ದರು ಎಂದು ಆರೋಪ ಮಾಡಿದ್ದಾಳೆ. (ಏಜೆನ್ಸೀಸ್)