

ಬೆಂಗಳೂರು: ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿ ಮಧ್ಯಂತರ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್ (Darshan) ಬೆನ್ನು ನೋವಿನ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ರಾಜಾತಿಥ್ಯ ಪಡೆದ ಆರೋಪದ ಮೇಲೆ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಗೊಂಡಿದ್ದ ನಟ ದರ್ಶನ್ (Darshan) ಆ ಬಳಿಕ ತೀವ್ರ ಬೆನ್ನು ನೋವಿನಿಂದ ಬಳಲಿದ್ದು, ನಡೆದಾಡಲು ಸಾಧ್ಯವಾಗದೆ ಪರದಾಡಿದ್ದರು. ಇದೀಗ ನಟ ದರ್ಶನ್ (Darshan) ಜೈಲಿನಿಂದ ಬಿಡುಗಡೆಯಾದ ಮೂರನೇ ದಿನಕ್ಕೆ ಆಸ್ಪತ್ರೆಗೆ ದಾಖಲಾಗಿದ್ದು, ವೈದ್ಯರು ಅವರಿಗೆ ಚಿಕಿತ್ಸೆ ಆರಂಭಿಸಿದ್ದಾರೆ.
ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ನಟ ದರ್ಶನ್ (Darshan) ದಾಖಲಾಗಿದ್ದು, ಇವರನ್ನು ವಿಶೇಷ ರೂಮ್ನಲ್ಲಿ ಇರಿಸಲಾಗಿದೆ. ಅಲ್ಲದೇ ಇವರನ್ನು ಭೇಟಿ ಮಾಡಲು ಬರೀ ಏಳು ಜನಕ್ಕೆ ಅವಕಾಶ ನೀಡಲಾಗಿದ್ದು, ಬೇರೆ ಯಾರಿಗೂ ಅವಕಾಶವಿಲ್ಲ ಎಂದು ಹೇಳಲಾಗಿದೆ. ಈ ವಿಷಯವನ್ನು ದರ್ಶನ್ (Darshan) ಕುಟುಂಬದವರೇ ಆಸ್ಪತ್ರೆಯವರಿಗೆ ಸ್ಪಷ್ಟಪಡಿಸಿದ್ದಾರೆ ಎಂದು ವರದಿಯಾಗಿದೆ. ಅದರಂತೆ ದರ್ಶನ್ (Darshan) ಪತ್ನಿ ವಿಜಯಲಕ್ಷ್ಮೀ, ತಾಯಿ ಮೀನಾ, ಸಹೋದರ ದಿನಕರ್, ಪುತ್ರ ವಿನೀಶ್, ನಟ ಧನ್ವೀರ್ ಹಾಗೂ ವಕೀಲರನ್ನು ಬಿಟ್ಟರೆ ನಟ ದರ್ಶನ್ರನ್ನು ಭೇಟಿ ಮಾಡಲು ಬೇರೆ ಯಾರಿಗೂ ಅವಕಾಶವಿಲ್ಲ.
ಸದ್ಯ ತಿಳಿದು ಬಂದಿರುವ ಮಾಹಿತಿ ಪ್ರಕಾರ ನಟ ದರ್ಶನ್ಗೆ (Darshan) ಹೆಚ್ಚಿನ ವಿಶ್ರಾಂತಿಯ ಅಗತ್ಯವಿದ್ದು, ಹೆಚ್ಚಿನ ಜನ ಅವರನ್ನು ಭೇಟಿ ಮಾಡಲು ಬಂದರೆ ಆಸ್ಪತ್ರೆಯಲ್ಲಿರುವ ಇತರ ರೋಗಿಗಳಿಗೆ ಹಾಗೂ ವೈದ್ಯಕೀಯ ಸಿಬ್ಬಂದಿಗೆ ತೊಂದರೆಯಾಗುತ್ತದೆ. ಭದ್ರತೆ ಸಮಸ್ಯೆ ಉಂಟಾಗಬಹುದೆಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದ್ದು, ವೈದ್ಯರು ತಪಾಸಣೆಯನ್ನು ಆರಂಭಿಸಿದ್ದಾರೆ.
ದರ್ಶನ್ (Darshan) ಆರೋಗ್ಯದ ಕುರಿತು ಕೆಂಗೇರಿ ಬಿಜಿಎಸ್ ಆಸ್ಪತ್ರೆಯೆ ವೈದ್ಯ ನವೀನ್ ಅಪ್ಪಾಜಿಗೌಡ (Naveen AppajiGowda) ಮಾತನಾಡಿ, ದರ್ಶನ್ (Darshan) ಇಂದು (ನವೆಂಬರ್ 01) 3.30ರ ಸುಮಾರಿಗೆ ಬಂದು ಅಡ್ಮಿಟ್ ಆಗಿದ್ದಾರೆ. ನಾವು ತಪಾಸಣೆ ಮಾಡಿದ್ದೇನೆ. ಕಾಲು ನೋವು ಇದೆ. ಅದರಿಂದ ಬೆನ್ನು ನೋವು ಕೂಡ ಇದೆ. ಎಡಗಡೆ ಕಾಲಿನಲ್ಲಿ ವೀಕ್ನೆಸ್ ಇದೆ. ಆ ಕಾಲು ಆಡುವುದು ಸ್ವಲ್ಪ ಕಮ್ಮಿ ಆಗಿದೆ. ಹೆಚ್ಚಿನ ತಪಾಸಣೆ ಮಾಡಿ, ಯಾವ ರೀತಿ ಚಿಕಿತ್ಸೆ ಬೇಕು ಎಂಬುದನ್ನು ನಿರ್ಧರಿಸುತ್ತೇವೆ. ಪೂರ್ತಿ ತಪಾಸಣೆ (Tests) ಆದ ನಂತರ ಏನಾಗಿದೆ ಎಂಬುದು ನಮಗೆ ಗೊತ್ತಾಗುತ್ತದೆ.
ಎಂಆರ್ಐ, ಎಕ್ಸ್ರೇ ಮತ್ತು ರಕ್ತದ ಪರೀಕ್ಷೆ ಮಾಡಬೇಕಾಗುತ್ತದೆ. 48 ಗಂಟೆ ಬಳಿಕ ಒಟ್ಟಾರೆ ರಿಪೋರ್ಟ್ ಸಿಗಲಿದೆ. ತಪಾಸಣೆಗೆ 24 ಗಂಟೆಗಳ ಕಾಲಬೇಕು ಎಂದು ಹೇಳಿದ್ದಾರೆ. ಒಂದು ವಾರದ ಹಿಂದೆ ಮಾಡಿದ ಎಂಆರ್ಐ ಫಿಲ್ಮ್ ನಮಗೆ ಲಭ್ಯವಾಗಿಲ್ಲ. ಆದ್ದರಿಂದ ಇನ್ನೊಮ್ಮೆ ಎಂಆರ್ಐ ಮಾಡಬೇಕಾಗುತ್ತದೆ. ಸದ್ಯಕ್ಕೆ ಅವರಿಗೆ ತುಂಬ ನೋವು (Pain) ಇದೆ. ಶಸ್ತ್ರಚಿಕಿತ್ಸೆಯ (Operation) ಅಗತ್ಯ ಇದೆಯೋ ಇಲ್ಲವೋ ಎಂಬುದು ಈಗಲೇ ಹೇಳೋಕೆ ಆಗಲ್ಲ. 24ರಿಂದ 48 ಗಂಟೆಯ ಒಳಗೆ ಎಲ್ಲ ರಿಪೋರ್ಟ್ಗಳು ಸಿಗುತ್ತವೆ. ತುಂಬಾ ನೋವು ಇರುವುದರಿಂದ ಔಷಧಿ ನೀಡಲು ಆರಂಭಿಸಿದ್ದೇವೆ ಎಂದು ಬಿಜಿಎಸ್ ಆಸ್ಪತ್ರೆಯ ವೈದ್ಯ ನವೀನ್ ಅಪ್ಪಾಜಿಗೌಡ (Naveen AppajiGowda) ತಿಳಿಸಿದ್ದರು.