

ಹೈದರಾಬಾದ್: ಟಾಲಿವುಡ್ನಲ್ಲಿ ಮಿಂಚು ಹರಿಸುತ್ತಿರುವ ಕನ್ನಡ ಚಿತ್ರರಂಗದ ದಂತದ ಗೊಂಬೆ ನಭಾ ನಟೇಶ್ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ. ವಜ್ರಕಾಯ ಮತ್ತು ಲೀ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇದಾದ ಬಳಿಕ ನಭಾ ತೆಲುಗಿಗೆ ಹಾರಿದರು. ಟಾಲಿವುಡ್ನಲ್ಲಿ ರಾಮ್ ಪೋತಿನೇನಿ ಅಭಿನಯದ ಹಾಗೂ ಪೂರಿ ಜಗನ್ನಾಥ್ ನಿರ್ದೇಶನದ ಸ್ಮಾರ್ಟ್ ಶಂಕರ್ ಸಿನಿಮಾ ಮೂಲಕ ನಭಾ ಒಳ್ಳೆಯ ಹೆಸರು ಪಡೆದರು. ಈ ಚಿತ್ರದಲ್ಲಿ ನಭಾ ನಟನೆ ಅಪಾರ ಜನಪ್ರಿಯತೆ ತಂದು ಕೊಟ್ಟಿತು.
ಸ್ಮಾರ್ಟ್ ಶಂಕರ್ ಸಿನಿಮಾ ಯಶಸ್ಸಿನ ಬಳಿಕ ಸಾಲು ಸಾಲು ಸಿನಿಮಾ ಆಫರ್ಗಳು ಬಂದವು. ಡಿಸ್ಕೋರಾಜ, ಸೋಲೋ ಬ್ರತುಕೆ ಸೋ ಬೆಟರ್, ಅಲ್ಲುಡು ಅದುರ್ಸ್, ಅಧುಗು, ಮೇಸ್ಟ್ರು ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ಕೆಲಸ ಮಾಡುತ್ತಿರುವಾಗಲೇ ಅಪಘಾತಕ್ಕೀಡಾಗಿ ಸಿನಿಮಾದಿಂದ ದೂರವಾಗಿದ್ದರು. ಭುಜದ ಗಾಯದಿಂದಾಗಿ ಅವರು ಸ್ವಲ್ಪ ವಿಶ್ರಾಂತಿ ಪಡೆದರು.
ಸುಮಾರು ಮೂರು ವರ್ಷಗಳ ಗ್ಯಾಪ್ ನಂತರ ಮತ್ತೆ ಡಾರ್ಲಿಂಗ್ ಚಿತ್ರದ ಮೂಲಕ ಬರುತ್ತಿದ್ದಾರೆ. ಪ್ರಿಯದರ್ಶಿ ಮತ್ತು ನಭಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಡಾರ್ಲಿಂಗ್ ಸಿನಿಮಾ ಅಶ್ವಿನಿರಾಮ್ ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಎಂಟರ್ಟೈನರ್ ಆಗಿದೆ. ಪ್ರೈಮ್ಶೋ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಕೆ ನಿರಂಜನ್ ರೆಡ್ಡಿ ಮತ್ತು ಶ್ರೀಮತಿ ಚೈತನ್ಯ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಇದು ಹನುಮಾನ್ ನಂತರ ಅವರ ಮುಂಬರುವ ಚಿತ್ರವಾಗಿದೆ. ಜುಲೈ 19 ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ನಭಾ, ಅಪಘಾತ ನಡೆದಾಗ ತಮ್ಮ ಮಾನಸಿಕ ಸ್ಥಿತಿ ಹೇಗಿತ್ತು ಎಂಬುದನ್ನು ವಿವರಿಸಿದರು.
ಎರಡು ವರ್ಷಗಳ ಹಿಂದೆ ನನಗೆ ಅಪಘಾತವಾಗಿತ್ತು. ಆ ನಂತರ ಸಿನಿಮಾ ಮಾಡಲಿಲ್ಲ. ಚೇತರಿಸಿಕೊಂಡ ನಂತರ ನಾನು ಸಿನಿಮಾ ಮಾಡಲು ಬಯಸಿದಾಗ, ನನಗೆ ಈ ಆಫರ್ ಸಿಕ್ಕಿತು. ಆದರೆ, ಅಪಘಾತದ ನಂತರ ನಾನು ಒಂದು ರೀತಿಯ ಮನಸ್ಥಿತಿಗೆ ಹೋದೆ. ಆಪರೇಷನ್ ಆದ ಹತ್ತು ದಿನಗಳ ನಂತರ ಶೂಟಿಂಗ್ನಲ್ಲಿ ಭಾಗವಹಿಸಿದ್ದೆ. ಇದು ಮತ್ತೆ ನನ್ನ ಆರೋಗ್ಯದ ಮೇಲೆ ಪರಿಣಾಮ ಬೀರಿತು. ನಂತರ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಲಾಯಿತು. ನನ್ನ ದೇಹಕ್ಕೆ ಖಂಡಿತವಾಗಿಯೂ ವಿಶ್ರಾಂತಿ ಬೇಕು. ಆರೋಗ್ಯವಾಗಿದ್ದರೆ ಮಾತ್ರ ಏನು ಬೇಕಾದರೂ ಮಾಡಬಹುದು ಎಂದು ಫಿಕ್ಸ್ ಆಗಿದ್ದೇನೆ. ಅದಕ್ಕೇ ಸ್ವಲ್ಪ ಗ್ಯಾಪ್ ತೆಗೆದುಕೊಂಡು ಆರೋಗ್ಯದ ಕಡೆ ಗಮನ ಕೊಟ್ಟೆ. ಅದಾದ ನಂತರ ‘ಡಾರ್ಲಿಂಗ್’ ಸಿನಿಮಾ ಆಫರ್ ಬಂತು ಎಂದು ಹೇಳಿದರು.
ಸ್ಮಾರ್ಟ್ ಶಂಕರ್ ನಂತಹ ಕಮರ್ಷಿಯಲ್ ಸಿನಿಮಾದ ನಂತರ ‘ಡಾರ್ಲಿಂಗ್’ ಸಿನಿಮಾ ಮಾಡುತ್ತಿರುವುದು ಏಕೆ ಎಂದು ಹಲವರು ಕೇಳಿದ್ದರು. ಆದರೆ ಪ್ರೇಕ್ಷಕರಿಗೆ ಗೊತ್ತು. ಈಗ ಹೊಸ ಹೊಸ ವಿಷಯವೂ ಕೂಡ ಕಮರ್ಷಿಯಲ್ ಆಗಿದೆ. ನಿರ್ದೇಶಕ ಅಶ್ವಿನ್ ನನ್ನನ್ನು ಸಂಪರ್ಕಿಸಿದ ಪಾತ್ರ ನೋಡಿಯೇ ಈ ಚಿತ್ರಕ್ಕೆ ಒಪ್ಪಿಕೊಂಡೆ. ನನ್ನ ಪಾತ್ರ ತುಂಬಾ ವಿಭಿನ್ನವಾಗಿದೆ ಎಂದು ಹೇಳಿದರು. (ಏಜೆನ್ಸೀಸ್)