ಸಿವಿಲ್ ನ್ಯಾಯಾಧೀಶೆಯಾಗಲು ಸಿದ್ಧತೆ ನಡೆಸುತ್ತಿದ್ದ ಯುವತಿ ರೈಲಿನಿಂದ ದಿಢೀರ್​ ನಾಪತ್ತೆ! ಯಾರು ಈ ಅರ್ಚನಾ? Missing Woman

Missing Woman
Published on

Missing Woman : ಮಧ್ಯಪ್ರದೇಶದಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ. ಅದೇನೆಂದರೆ, ಸಿವಿಲ್ ನ್ಯಾಯಾಧೀಶೆಯಾಗಲು ಸಿದ್ಧತೆ ನಡೆಸುತ್ತಿದ್ದ ಯುವತಿ ರೈಲಿನಿಂದ ಹಠಾತ್ತನೆ ನಾಪತ್ತೆಯಾಗಿದ್ದು, ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ರೈಲ್ವೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡು ಅವರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಳೆದ ಮೂರು ದಿನಗಳಿಂದ ಆಕೆ ಪತ್ತೆಯಾಗದ ಕಾರಣ ಕುಟುಂಬ ಸದಸ್ಯರು ಆತಂಕಗೊಂಡಿದ್ದಾರೆ.

ವಿವರಗಳಿಗೆ ಹೋಗುವುದಾದರೆ, ಮಧ್ಯಪ್ರದೇಶದ ಅರ್ಚನಾ ತಿವಾರಿ (28) ಸಿವಿಲ್ ನ್ಯಾಯಾಧೀಶೆಯಾಗುವ ಆಸೆಯೊಂದಿಗೆ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದಾರೆ. ಆಗಸ್ಟ್ 7ರಂದು ತಮ್ಮ ಮನೆಗೆ ಹೋಗಲು ಇಂದೋರ್-ಬಿಲಾಸ್ಪುರ್ ನರ್ಮದಾ ಎಕ್ಸ್‌ಪ್ರೆಸ್ ಏರಿದರು. ಈ ವೇಳೆ ಅವರು ರೈಲಿನ ಬಿ -3 ಕೋಚ್‌ನಲ್ಲಿ ಕುಳಿತರು. ಇತ್ತ ಕುಟುಂಬ ಸದಸ್ಯರು ಅರ್ಚನಾ ಅವರು ಇಳಿಯಬೇಕಾದ ಕಟ್ನಿ ನಿಲ್ದಾಣದಲ್ಲಿ ಆಕೆಗಾಗಿ ಕಾಯುತ್ತಾ ಕುಳಿತಿದ್ದರು. ರೈಲು ಬಂದರೂ, ಅರ್ಚನಾ ಮಾತ್ರ ರೈಲಿನಿಂದ ಇಳಿಯಲಿಲ್ಲ. ಬಳಿಕ ಅವರ ಕುಟುಂಬ ಸದಸ್ಯರು ರೈಲನ್ನೇರಿ ಆಕೆಗಾಗಿ ಹುಡುಕಾಟ ನಡೆಸುವಾಗ ರೈಲು ನಿಲ್ದಾಣದಿಂದ ರೈಲು ಹೊರಟುಹೋಯಿತು.

ಬಳಿಕ ಕುಟುಂಬ ಸದಸ್ಯರು ರೈಲ್ವೆ ಅಧಿಕಾರಿಗಳನ್ನು ಸಂಪರ್ಕಿಸಿದರು. ಅಲ್ಲದೆ, ರೈಲು ಹತ್ತಿರದ ಉಮಾರಿಯಾ ನಿಲ್ದಾಣದಲ್ಲಿ ನಿಂತ ತಕ್ಷಣ, ಅಲ್ಲಿಯೂ ಕುಟುಂಬ ಸದಸ್ಯರು ಆಕೆಗಾಗಿ ಹುಡುಕಾಡಿದರು. ಆದರೆ ಆಕೆ ಮಾತ್ರ ಪತ್ತೆಯಾಗಲಿಲ್ಲ. ಆದಾಗ್ಯೂ, ಕೋಚ್‌ನಲ್ಲಿ ಅರ್ಚನಾಳ ಬ್ಯಾಗ್ ಪತ್ತೆಯಾಗಿದೆ. ಆತಂಕಗೊಂಡ ಕುಟುಂಬ ಸದಸ್ಯರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು. ಆ ದಿನ ಬೆಳಗ್ಗೆ 10.15 ರ ಸುಮಾರಿಗೆ ಅರ್ಚನಾಳೊಂದಿಗೆ ಕೊನೆಯ ಬಾರಿಗೆ ಮಾತನಾಡಿದ್ದೆವು ಎಂದು ಅವರ ಕುಟುಂಬ ಸದಸ್ಯರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಕರೆ ಮಾಡಿದ ಸಮಯದಲ್ಲಿ ರೈಲು ಭೋಪಾಲ್ ಬಳಿ ಇತ್ತು. ಇದಾದ ನಂತರ, ಅರ್ಚನಾಳ ಫೋನ್ ಸ್ವಿಚ್ ಆಫ್ ಆಗಿದೆ ಎಂದುಮ ಕುಟುಂಬಸ್ಥರು ಹೇಳಿದ್ದಾರೆ.

ಇದಾದ ನಂತರ, ಕಟ್ನಿ ರೈಲ್ವೆ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ ಅನಿಲ್ ಮರಾವಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಅರ್ಚನಾ ಭೋಪಾಲ್‌ನ ರಾಣಿ ಕಮಲಪತಿ ನಿಲ್ದಾಣದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿರುವುದು ಕಂಡುಬಂದಿದೆ. ಅಲ್ಲಿಂದ ಆಕೆ ಎಲ್ಲೂ ಕಾಣಿಸಿಕೊಂಡಿಲ್ಲ. ಸದ್ಯ ನಾಪತ್ತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನೆಯ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. ಮೂರು ದಿನಗಳಿಂದ ಮಗಳು ಕಾಣೆಯಾಗಿರುವುದರಿಂದ ಪಾಲಕರು ತುಂಬಾ ಚಿಂತಿತರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net