ಮುಂಬೈ: 17ನೇ ಆವೃತ್ತಿಯ ಐಪಿಎಲ್ನಲ್ಲಿ (IPL) ಕ್ಯಾಪ್ಟನ್ಸಿ ವಿಚಾರವಾಗಿ ಹೆಚ್ಚು ಸದ್ದು ಮಾಡಿದ್ದ ಮುಂಬೈ ಇಂಡಿಯನ್ಸ್ (Mumbai Indians) ಹಾರ್ದಿಕ್ ನಾಯಕತ್ವದಲ್ಲಿ ಹೀನಾಯ ಪ್ರದರ್ಶನ ನೀಡುವ ಮೂಲಕ ವ್ಯಾಪಕ ಟೀಕೆಗೆ ಗುರಿಯಾಗಿತ್ತು. 18ನೇ ಆವೃತ್ತಿಯಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಲು ಸಜ್ಜಾಗಿರುವ ಮುಂಬೈ ಇಂಡಿಯನ್ಸ್ ಈಗಾಗಲೇ ಆಟಗಾರರ ರಿಟೇನ್ (Retain) ಪಟ್ಟಿಯನ್ನು ಸಿದ್ದಪಡಿಸಿಕೊಂಡಿದ್ದು, ಮೆಗಾ ಹರಾಜಿಗೂ (Mega Auction) ಮುನ್ನ ಮತ್ತೊಂದು ವಿಚಾರವಾಗಿ ಸದ್ದು ಮಾಡುತ್ತಿದೆ.
ಮುಂಬೈ ಇಂಡಿಯನ್ಸ್ (Mumbai Indians) ಫ್ರಾಂಚೈಸಿಯು ಕಳೆದ ಸೀಸನ್ನಲ್ಲಿ ರೋಹಿತ್ ಶರ್ಮಾ (Rohit Sharma) ಅವರನ್ನು ನಾಯಕತ್ವದಿಂದ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ (Hardik Pandya) ಕ್ಯಾಪ್ಟನ್ ಪಟ್ಟ ನೀಡಿದ್ದರು. ಆದರೆ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ತಂಡವು ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಅಷ್ಟೇ ಅಲ್ಲದೆ ಕೇವಲ 4 ಮ್ಯಾಚ್ಗಳಲ್ಲಿ ಜಯ ಸಾಧಿಸಿ ಕೊನೆಯ ಸ್ಥಾನದೊಂದಿಗೆ ಐಪಿಎಲ್ ಅಭಿಯಾನ ಅಂತ್ಯಗೊಳಿಸಿತ್ತು. ಕಳಪೆ ಪ್ರದರ್ಶನದ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯರ ನಾಯಕತ್ವದ ಗುಣಗಳ ಬಗ್ಗೆ ಪ್ರಶ್ನೆಗಳೆದಿದ್ದವು. ಅದರಲ್ಲೂ ಮಾಜಿ ನಾಯಕ ರೋಹಿತ್ ಶರ್ಮಾ ಅವರನ್ನು ನಡೆಸಿಕೊಂಡ ಬಗ್ಗೆ ಅಪಸ್ವರಗಳು ಕೇಳಿ ಬಂದಿದ್ದವು. ಹೀಗಾಗಿಯೇ ಹಿಟ್ಮ್ಯಾನ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿದ್ದವು.
ರೋಹಿತ್ ಶರ್ಮ ಮುಂಬೈ ತಂಡದಲ್ಲೇ ಉಳಿಯಬೇಕಿದ್ದರೆ ನಾಯಕನ ಬದಲಾವಣೆ ಅವಶ್ಯವಾಗಿದ್ದು, ಈ ನಿಟ್ಟಿನಲ್ಲಿ ಸೂರ್ಯಕುಮಾರ್ ಯಾದವ್ಗೆ (Suryakumar Yadav) ಮಣೆ ಹಾಕಲು ಫ್ರಾಂಚೈಸಿ ಸಜ್ಜಾಗಿದೆ. ಈಗಾಗಲೇ ಚುಟುಕು ಮಾದರಿಯಲ್ಲಿ ಟೀಮ್ ಇಂಡಿಯಾದ ನಾಯಕರಾಗಿರುವ ಸೂರ್ಯಕುಮಾರ್ ಐಪಿಎಲ್ನಲ್ಲಿ ಕ್ಯಾಪ್ಟನ್ಸಿ ಅವಕಾಶವನ್ನು ಎದುರು ನೋಡುತ್ತಿದ್ದು, 2025ರಲ್ಲಿ ಹಾರ್ದಿಕ್ ಬದಲಿಗೆ ಸೂರ್ಯಕುಮಾರ್ಗೆ ನಾಯಕತ್ವ ನೀಡುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: Weather Forecast| ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಭಾರೀ ಮಳೆ; Yellow Alert ಘೋಷಣೆ
ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ (T20 Series) ಆರಂಭಕ್ಕೂ ಮುನ್ನ ಈ ಕುರಿತು ಮಾತನಾಡಿರುವ ಸೂರ್ಯಕುಮಾರ್ ಅಡ್ಡ ಗೋಡೆಯ ದೀಪವಿಟ್ಟಂತೆ ಉತ್ತರ ನೀಡಿದ್ದಾರೆ. ನಾನು ಟೀಮ್ ಇಂಡಿಯಾದ ನಾಯಕತ್ವವನ್ನು ಆನಂದಿಸುತ್ತಿದ್ದೇನೆ. ಮುಂಬೈ ಇಂಡಿಯನ್ಸ್ನಲ್ಲಿ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಆಡುವಾಗ ನಾನು ಸಹ ಸಲಹೆಗಳನ್ನು ನೀಡುತ್ತಿದ್ದೆ. ಅಲ್ಲದೆ ಶ್ರೀಲಂಕಾ (Srilanka) ಹಾಗೂ ದಕ್ಷಿಣ ಆಫ್ರಿಕಾ (South Africa) ಸರಣಿಗಳಲ್ಲೂ ನಾನು ಯಶಸ್ವಿಯಾಗಿ ಭಾರತ ತಂಡವನ್ನು(Team India) ಮುನ್ನಡೆಸಿದ್ದೇನೆ. ತಂಡವನ್ನು ಹೇಗೆ ಮುನ್ನಡೆಸಬೇಕು ಎಂಬುದನ್ನು ನಾನು ಇತರೆ ನಾಯಕರಿಂದ ಕಲಿತಿದ್ದೇನೆ. ಮುಂದೆ ನೋಡೋಣ, ಶೀಘ್ರದಲ್ಲೇ ನಿಮಗೆ ನಾಯಕ ಯಾರೆಂಬುದು ತಿಳಿಯಲಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ನಾಯಕನಾಗುವ ಆಸೆಯನ್ನು ಹೊರಹಾಕಿದ್ದಾರೆ.
17ನೇ ಆವೃತ್ತಿಯಲ್ಲಿ ನಾಯಕತ್ವದ ಬಿಕ್ಕಟ್ಟಿನಿಂದಾಗಿ ಹೆಚ್ಚು ಸುದ್ದಿಯಾಗಿದ್ದ ಮುಂಬೈ ಇಂಡಿಯನ್ಸ್ (Mumbai Indians) ತಂಡವು ಹೊಸ ನಾಯಕನಿಗೆ ಮಣೆ ಹಾಕಲಿದೆಯಾ ಅಥವಾ ಹಾರ್ದಿಕ್ಗೆ ಮತ್ತೊಂದು ಅವಕಾಶ ನೀಡಲಿದೆಯಾ ಎಂದು ಕಾದು ನೋಡಬೇಕಿದೆ. ಒಟ್ಟಿನಲ್ಲಿ ಪ್ರತಿಬಾರಿಯಂತೆ ಈ ಬಾರಿಯೂ ಮುಂಬೈ ಇಂಡಿಯನ್ಸ್ ಸದ್ದು ಮಾಡುವುದಂತು ಖಾತ್ರಿಯಾಗಿದೆ.