ನವದೆಹಲಿ: ಟೀಮ್ ಇಂಡಿಯಾವನ್ನು ಯಶಸ್ವಿಯಾಗಿ ಮುನ್ನಡೆಸಿದ ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ಯಾರು ಅಧಿಕಾರ ವಹಿಸಿಕೊಳ್ಳುತ್ತಾರೆ ಎಂಬ ಕುತೂಹಲ ಕಳೆದ ಒಂದು ತಿಂಗಳಿಂದ ಎಲ್ಲರಲ್ಲೂ ಮನೆ ಮಾಡಿತ್ತು. ಅಭಿಮಾನಿಗಳ ಜೊತೆಗೆ, ಮಾಜಿ ಕ್ರಿಕೆಟಿಗರು ಮತ್ತು ಕ್ರೀಡಾ ತಜ್ಞರು ಕೂಡ ಈ ವಿಷಯದ ಬಗ್ಗೆ ತುಂಬಾ ಆಸಕ್ತಿ ತೋರಿಸಿದ್ದರು. ಕೊನೆಗೂ ಕುತೂಹಲಕ್ಕೆ ತೆರೆಬಿದ್ದಿದ್ದು, ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ದಿಗ್ಗಜ ಆಟಗಾರ ಗೌತಮ್ ಗಂಭೀರ್ ಅವರನ್ನು ಬಿಸಿಸಿಐ ನೇಮಕ ಮಾಡಿದೆ.
ಈ ತಿಂಗಳ ಕೊನೆಯಲ್ಲಿ ಶ್ರೀಲಂಕಾ ವಿರುದ್ಧ ಆರಂಭವಾಗುವ ಸರಣಿಯಲ್ಲಿ ಗಂಭೀರ್ ಮುಖ್ಯ ಕೋಚ್ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ಇದಾದ ಬಳಿಕ 2025ರಲ್ಲಿ ಚಾಂಪಿಯನ್ಸ್ ಟ್ರೋಪಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್, 2026ರಲ್ಲಿ ಟಿ20 ವಿಶ್ವಕಪ್, 2027ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಾಗೂ ಏಕದಿನ ವಿಶ್ವಕಪ್ಗೆ ತಂಡವನ್ನು ಸಜ್ಜುಗೊಳಿಸಬೇಕಿದೆ. ಈ ನಿಟ್ಟಿನಲ್ಲಿ ಕೆಲವೊಂದು ಬದಲಾವಣೆಗಳತ್ತ ಗಂಭೀರ್ ಗಮನಹರಿಸಿದ್ದು, ಟೀಮ್ ಇಂಡಿಯಾದಲ್ಲಿ ಹೊಸ ಅಧ್ಯಾಯ ಆರಂಭಿಸಲು ಗೌತಿ ಮುಂದಾಗಿದ್ದಾರೆ.
ಪ್ರಸ್ತುತ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್, ಬೌಲಿಂಗ್ ಕೋಚ್ ಪರಾಸ್ ಮಂಬ್ರೆ ಮತ್ತು ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ಅವರ ಅವಧಿಯು ಸಹ ಮುಕ್ತಾಯವಾಗಿದ್ದು, ಅವರ ಸ್ಥಾನಕ್ಕೆ ಬದಲಿ ಕೋಚ್ಗಳನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ಗಂಭೀರ್ ಗಮನಹರಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾದಲ್ಲಿ ಹೊಸ ಅಧ್ಯಾಯ ಆರಂಭಿಸಲು ಗೌತಿ ಮುಂದಾಗಿದ್ದಾರೆ. ಆದರೆ, ಇದಕ್ಕೆ ಅಪಸ್ವರ ತೆಗೆದಿರುವ ಟೀಮ್ ಇಂಡಿಯಾ ಮಾಜಿ ಆಟಗಾರ ಜತಿನ್ ಪರಾಂಜಪೆ ಗೌತಮ್ ಗಂಭೀರ್ ವಿರುದ್ಧ ಕಿಡಿಕಾರಿದ್ದಾರೆ.
ಇದನ್ನೂ ಓದಿ: ಅನಂತ್ ಅಂಬಾನಿ ಮದುವೆಯಲ್ಲಿ ನಟ ಯಶ್ ಭಾಗಿ; ಗಮನ ಸೆಳೆಯುತ್ತಿದೆ ರಾಕಿ ಭಾಯ್ ಹೊಸ ಲುಕ್
ಈ ಕುರಿತು ಮಾತನಾಡಿದ ಜತಿನ್ ಪರಾಂಜಪೆ, ಫುಟ್ಬಾಲ್ನಲ್ಲಿ ಈ ರೀತಿ ಮಾಡಲಾಗುತ್ತದೆ. ಈ ಅಭ್ಯಾಸವನ್ನು ಕ್ರಿಕೆಟ್ಗೆ ತರಲು ಗೌತಮ್ ಮುಂದಾಗಿದ್ದಾರೆ. ನಾವು ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೇನೆಂದರೆ ಭಾರತ ತಂಡ ಏಕದಿನ, ಟಿ20 ಹಾಗೂ ಟೆಸ್ಟ್ ವಿಶ್ವಚಾಂಪಿಯನ್ಶಿಪ್ನಲ್ಲಿ ಫೈನಲ್ ತಲುಪಲು ಸಹಾಯಕ ಸಿಬ್ಬಂದಿ ಮುಖ್ಯ ಪಾತ್ರ ನಿರ್ವಹಿಸಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಭಾರತ ಕಪ್ ಗೆಲ್ಲಲು ಕೋಚ್ ಜೊತೆಗೆ ಸಹಾಯಕ ಸಿಬ್ಬಂದಿ ಕೂಡ ಶ್ರಮ ಹಾಕಿದ್ದಾರೆ ಎಂಬ ಅಂಶವನ್ನು ಇವರು ಯಾಕೆ ಅರ್ಥ ಮಾಡಿಕೊಳ್ಳುತ್ತಿಲ್ಲ.
ಈಗಿರುವ ಸಹಾಯಕ ಸಿಬ್ಬಂದಿಯೊಂದಿಗೆ ಗೌತಮ್ ಸರಣಿಗಳನ್ನು ಆಡಿ ನಂತರ ಬರುವ ಫಲಿತಾಂಶಗಳನ್ನು ನೋಡಿಕೊಂಡು ಬದಲಾಯಿಸಬೇಕಾ ಇಲ್ಲವಾ ಎಂಬುದು ಯೋಚಿಸಲಿ. ಅದು ಬಿಟ್ಟು ಏಕಾಏಕಿ ಈ ರೀತಿಯ ನಿರ್ಧಾರ ತೆಗೆದುಕೊಂಡರೆ ಅದು ಆಟಗಾರರ ಮೇಲೆ ಪರಿಣಾಮ ಬೀರುತ್ತದೆ. ಗೌತಮ್ ಗಂಭೀರ್ ಅವರು ತಮ್ಮ ನಿರ್ಧಾರದ ಬಗ್ಗೆ ಇನ್ನೊಮ್ಮೆ ಯೋಚಿಸುವುದು ಸೂಕ್ತ ಎಂದು ಟೀಮ್ ಇಂಡಿಯಾ ಮಾಜಿ ಆಟಗಾರ ಜತಿನ್ ಪರಾಂಜಪೆ ಹೇಳಿದ್ದಾರೆ.