ನವದೆಹಲಿ: ಯುಎಸ್ಎ-ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದ ಟಿ20 ವಿಶ್ಚಕಪ್ನಲ್ಲಿ ಭಾರತ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದ್ದು, ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ. ಟಿ20 ವಿಶ್ವಕಪ್ನಲ್ಲಿ ಭಾರತದ ವಿಜಯದ ನಂತರ ತಂಡಕ್ಕೆ ನೂತನ ಕೋಚ್ ಆಗಿ ಗೌತಮ್ ಗಂಭೀರ್ರನ್ನು ನೇಮಿಸಲಾಗಿದ್ದು, ಅವರ ಮುಂದೆ ಬೆಟ್ಟದಷ್ಟು ಸವಾಲಿದೆ ಎಂದು ಹೇಳಬಹುದಾಗಿದೆ.
ಶ್ರೀಲಂಕಾ ವಿರುದ್ಧದ ಸರಣಿಯಿಂದ ಗೌತಮ್ ಗಂಭೀರ್ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದು, ಇದಾದ ಬಳಿಕ 2025ರಲ್ಲಿ ಚಾಂಪಿಯನ್ಸ್ ಟ್ರೋಪಿ, ವಿಶ್ವ ಟೆಸ್ಟ್ ಚಾಂಪಿಯನ್ಶಿಪ್, 2026ರಲ್ಲಿ ಟಿ20 ವಿಶ್ವಕಪ್, 2027ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಹಾಗೂ ಏಕದಿನ ವಿಶ್ವಕಪ್ಗೆ ತಂಡವನ್ನು ಸಜ್ಜುಗೊಳಿಸಬೇಕಿದೆ. ಇದೆಲ್ಲರದರ ನಡುವೆ ಭಾರತದ ನೂತನ ಕೋಚ್ ಕುರಿತು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ ನೀಡಿರುವ ಹೇಳಿಕೆ ಸಖತ್ ವೈರಲ್ ಆಗುತ್ತಿದೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಅಫ್ರಿದಿ, ಗೌತಮ್ ಗಂಭೀರ್ಗೆ ಈ ರೀತಿಯ ದೊಡ್ಡ ಅವಕಾಶ ಸಿಕ್ಕಿರುವುದು ತುಂಬಾ ಖುಷಿಯಾಗುತ್ತಿದೆ. ಆತ ಮಾತನಾಡುವ ರೀತಿ ಆಯ್ಕೆ ಮಾಡುವ ವಿಧಾನ ನೋಡಿದರೆ ತಂಡ ಉತ್ತಮ ಪ್ರದರ್ಶನ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ.
ಇದನ್ನೂ ಓದಿ: ಕಣ್ಮುಂದೆ ಬೆಳೆದ ಮಕ್ಕಳಿಗೆ ಹೀಗಾದರೆ; ಅಪರ್ಣಾರನ್ನು ನೆನೆದು ಹಿರಿಯ ನಟ ಶ್ರೀನಾಥ್ ಭಾವುಕ
ಆತ ಸಿಕ್ಕಿರುವ ಅವಕಾಶಗಳನ್ನು ಹೇಗೆ ಬಳಸಿಕೊಳ್ಳಲಿದ್ದಾನೆ ಎಂಬುದು ನೋಡಬೇಕಿದೆ. ನಾನು ಟಿವಿಯಲ್ಲಿ ಅನೇಕ ಭಾರಿ ಆತನ ಸಂದರ್ಶನಗಳನ್ನು ನೋಡಿದ್ದೇನೆ. ಆತ ಸಕಾರಾತ್ಮಕ ಅಂಶಗಳೊಂದಿಗೆ ನೇರ-ನಿಷ್ಠುರವಾಗಿ ಮಾತನಾಡುತ್ತೇನೆ. ನಾನು ಗೌತಮ್ ಗಂಭೀರ್ನ ದೊಡ್ಡ ಅಭಿಮಾನಿಯಾಗಿದ್ದು, ಆತನ ಆಕ್ರಮಣಶೀಲತೆ ನನಗೆ ತುಂಬಾ ಇಷ್ಟವಾಗುತ್ತದೆ.
ಭಾರತ ಮಾತ್ರವಲ್ಲದೇ ವಿಶ್ವ ಕ್ರಿಕೆಟ್ನಲ್ಲಿ ಆಕ್ರಮಣಕಾರಿ ಆಟವಾಡುವ ಆಟಗಾರರ ಅವಶ್ಯಕತೆಯಿದ್ದು, ಮೈದಾನದ ಒಳಗೆ ಎಷ್ಟೇ ಆಕ್ರಮಣಕಾರಿಯಾಗಿ ಆಡಿದರು. ಹೊರಗೆ ಗೌತಮ್ ಗಂಭೀರ್ ನಡೆದುಕೊಳ್ಳುವ ರೀತಿ ನನಗೆ ತುಂಬಾ ಇಷ್ಟವಾಗುತ್ತದೆ. ಆತನಿಗೆ ಉತ್ತಮ ಬುದ್ಧಿ ಶಕ್ತಿಯಿದ್ದು, ಅದನ್ನು ಹೇಗೆ ಬಳಸಿಕೊಳ್ಳಲಿದ್ದಾನೆ ಎಂಬುದಕ್ಕೆ ತಂಡದ ಪ್ರದರ್ಶನವೇ ಸಾಕ್ಷಿ ಆಗಿರುತ್ತದೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.