

ಬೆಂಗಳೂರು: ನಟಿ, ನಿರೂಪಕಿ ಅಪರ್ಣಾ ವಸ್ತಾರೆ ಅವರ ಸಾವು ಚಿತ್ರರಂಗಕ್ಕೆ ದೊಡ್ಡ ಆಘಾತವನ್ನುಂಟು ಮಾಡಿದ್ದು, ಹಲವರಿಗೆ ಆಘಾತ ತಂದಿದೆ. ಗಂಭೀರ ಸ್ವರೂಪದ ಕಾಯಿಲೆಯಿಂದ ಬಳಲುತ್ತಿದ್ದರು ನಟಿ ಅಪರ್ಣಾ ಅವರು ಈ ವಿಚಾರವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಕುಟುಂಬ ಹಾಗೂ ಆಪ್ತರು ಸೇರಿದಂತೆ ಕೆಲವೇ ಕೆಲವರಿಗೆ ಅವರು ಅನಾರೋಗ್ಯದಿಂದ ಬಳಲುತ್ತಿರುವ ವಿಚಾರ ತಿಳಿದಿತ್ತಂತೆ. ನಟಿ ಅಪರ್ಣಾ ಅವರ ಸಾವಿಗೆ ಚಿತ್ರರಂಗ, ರಾಜಕೀಯ ಸೇರಿದಂತೆ ಅನೇಕ ಕ್ಷೇತ್ರದ ಗಣ್ಯರು ಸಂತಾಪ ಸೂಚಿಸಿದ್ದು, ಹಿರಿಯ ನಟ ಶ್ರೀನಾಥ್ ಈ ಬಗ್ಗೆ ಮಾತನಾಡಿದ್ದಾರೆ.
ಬೆಂಗಳೂರಿನ ನಿವಾಸದಲ್ಲಿ ಅಂತಿಮ ದರ್ಶನ ಪಡೆದ ಬಳಿಕ ಮಾತನಾಡಿದ ನಟ ಶ್ರೀನಾಥ್, ನಮಗೆ ಆಯಸ್ಸು ಜಾಸ್ತಿ ಆದಷ್ಟು ಜಾಸ್ತಿ ಸಾವುಗಳನ್ನು ನೋಡುತ್ತಿದ್ದೇವೆ. ನಮ್ಮ ಕಣ್ಮುಂದೆ ಬೆಳೆದ ಮಕ್ಕಳು ಹೋಗುತ್ತಿರುವುದನ್ನು ನೋಡಿದರೆ ನಮಗೆ ಬೇಜಾರಾಗುತ್ತದೆ. ಅಪರ್ಣಾರನ್ನು ಮಗು ಆದಾಗಿನಿಂದ ನೋಡುತ್ತಿದ್ದೆ.
ಅಪರ್ಣಾರ ಸಂಸ್ಕಾರ ನೋಡಿದಾಗ ನನಗೆ ಅವರ ತಂದೆ ನಾರಾಯಣಸ್ವಾಮಿ ಅವರು ನೆನಪಾಗುತ್ತಿದ್ದರು. ಅವರ ಮಾತು ಸ್ಪಷ್ಟ ಕನ್ನಡ ಹಾಗೂ ಪದಗಳ ಬಳಕೆಯನ್ನು ಯಾರೂ ಮರೆಯೋಕೆ ಸಾಧ್ಯವಿಲ್ಲ. ಅವರ ನಿಧನದ ಸುದ್ದಿ ತುಂಬಾ ನೋವುಂಟು ಮಾಡಿದೆ. ದುಃಖವನ್ನು ಭರಿಸುವ ಶಕ್ತಿ ದೇವರು ಅವರ ಕುಟುಂಬಕ್ಕೆ ನೀಡಲಿ ಎಂದು ಹಿರಿಯ ನಟ ಶ್ರೀನಾಥ್ ಹೇಳಿದ್ದಾರೆ.
ಬಾರದ ಲೋಕಕ್ಕೆ ಪಯಣಿಸಿದ ನಟಿ, ನಿರೂಪಕಿ ಅಪರ್ಣಾ ಕನ್ನಡಿಗರಿಗೆ ಇನ್ನು ನೆನಪು ಮಾತ್ರ. ತಮ್ಮ ಸ್ವಚ್ಛ ಕನ್ನಡದಿಂದಲೇ ಪ್ರತಿಯೊಬ್ಬ ಕನ್ನಡಿಗನ ಮನದಲ್ಲಿ ಮನೆ ಮಾಡಿರುವ ಅಪರ್ಣಾ ಅವರು ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಕ್ಯಾನ್ಸರ್ ಎಂಬ ಮಹಾಮಾರಿ ಕನ್ನಡತಿಯನ್ನು ಬಲಿ ಪಡೆದಿದ್ದು, ಇಡೀ ಚಿತ್ರರಂಗಕ್ಕೆ ದೊಡ್ಡ ಆಘಾತವಾಗಿದೆ.