ಕೆಲಸಕ್ಕೆ ರಜೆ ಹಾಕಲು ಅಪಘಾತದಲ್ಲಿ ಗಾಯವಾದಂತೆ ಮೇಕಪ್​ ಮಾಡಿಕೊಂಡ ಮಹಿಳೆ! ವೈರಲ್​ ಆಯ್ತು ಖತರ್ನಾಕ್​ ಐಡಿಯಾದ ವಿಡಿಯೋ; Viral

viral
Published on

Viral | ಕೆಲಸ ಮಾಡುವ ಕಚೇರಿಗಳಲ್ಲಿ ರಜೆಗಾಗಿ ಕೆಲವು ಮಂದಿ ಇಲ್ಲ-ಸಲ್ಲದ ಸಬೂಬು ಹೇಳಿ ರಜೆ ಗಿಟ್ಟಿಸಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಉಷಾರಿಲ್ಲ ಸರ್​.. ಊರಿಗೆ ಹೋಗಬೇಕು.. ತುಂಬಾ ಕೆಲಸ ಇದೆ ಹೀಗೆ ನಾನಾ ಕಾರಣಗಳನ್ನು ಕೊಟ್ಟು ರಜೆ ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ನಿಜವಾಗಿಯೂ ಅಪಘಾತ ಆಗಿರುವ ರೀತಿ ತನ್ನ ಮುಖದ ಮೇಲೆ ಮೇಕಪ್​ ಮಾಡಿಕೊಂಡು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ.

ಪುಣೆಯಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡುವ ಮಹಿಳೆಯೊಬ್ಬರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಅಸಾಮಾನ್ಯ ವೀಡಿಯೊಗಳಿಂದ ಎಲ್ಲರ ಗಮನ ಸೆಳೆದಿದ್ದಾರೆ. ಕೆಲಸದಿಂದ ರಜೆ ಪಡೆಯಲು ಮೇಕಪ್ ಬಳಸಿ ನಕಲಿ ಅಪಘಾತದ ಗಾಯಗಳನ್ನು ಹೇಗೆ ಬರೆದುಕೊಳ್ಳುವುದು ಎಂಬ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮುಖದ ಮೇಲೆ ಗಾಯವಾದಾಗ ಅದನ್ನು ಗುಣಪಡಿಸಲು ಹೊಲಿಗೆಗಳನ್ನು ಹಾಕಿದಾಗ ಕಾಣುವ ರೀತಿಯೇ ಮೇಕಪ್​ ಮಾಡಿಕೊಂಡಿದ್ದಾರೆ. ನಂತರ ತಾವು ಕೆಲಸ ಮಾಡುವ ಕಚೇರಿಗೆ ಹೋಗುವಾಗ ಗಾಯವು ಹೇಗೆ ನೈಜವಾಗಿ ಕಾಣುಬೇಕು ಎಂಬುದನ್ನೂ ಸಹ ಆ ವಿಡಿಯೋದಲ್ಲಿ ತಿಳಿಸಿದ್ದಾರೆ.

ಇನ್ನೂ ಈ ಬಗ್ಗೆ ವಿಡಿಯೋದಲ್ಲಿ ಆ ಮಹಿಳೆ ಮಾತನಾಡಿದ್ದು, ಈ ಟ್ರಿಕ್ ರಜೆ ಪಡೆಯಲು ಕಷ್ಟಪಡುವ ಐಟಿ ಉದ್ಯೋಗಿಗಳಿಗೆ ಅನುಕೂಲವಾಗಲಿದೆ. ಕೊನೆಯವರೆಗೂ ವಿಡಿಯೋ ನೋಡಿ ಮತ್ತು ನಿಮ್ಮ ಮ್ಯಾನೇಜರ್ ಇದನ್ನು ನೋಡಲು ಬಿಡಬೇಡಿ ಎಂದು ಅವರು ವೀಕ್ಷಕರಿಗೆ ತಮಾಷೆಯಾಗಿ ಹೇಳಿದ್ದಾರೆ. ಅಷ್ಟರಲ್ಲಿ ಅವರ ವೀಡಿಯೊಗಳು ವೈರಲ್ ಆಗಿದ್ದು, ಈ ವಿಡಿಯೋ ನೋಡಿದ ಜನರು ಅಸಮಾಧಾನ ಹೊರಹಾಕಿದ್ದಾರೆ.

ಈ ವೈರಲ್ ವಿಡಿಯೋವನ್ನು ಪ್ರೀತಮ್ ಜುಜಾರ್ ಕೊಥವಾಲಾ ಎಂಬುವವರು 'faridas_makeup_studio' ಎಂಬ ಇನ್‌ಸ್ಟಾಗ್ರಾಮ್‌ನಲ್ಲಿ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಕೇವಲ ನಾಲ್ಕು ದಿನಗಳಲ್ಲಿ, ಈ ವಿಡಿಯೋ ತುಂಬಾ ವೈರಲ್​ ಆಗಿದ್ದು, 32 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಕೆಲವರು ಆ ಮಹಿಳೆಯ ಸೃಜನಶೀಲತೆಯನ್ನು ನೋಡಿ ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಅವರು ತಮ್ಮ ಕೆಲಸದಲ್ಲಿ ಅಪ್ರಾಮಾಣಿಕತೆಯನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಉದ್ಯೋಗದಾತರನ್ನು ಮೂರ್ಖರನ್ನಾಗಿ ಮಾಡಲು ಜನರನ್ನು ಪ್ರೋತ್ಸಾಹಿಸಿದ್ದಕ್ಕಾಗಿ ಅವರನ್ನು ಟೀಕಿಸಿದ್ದಾರೆ.

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net