

ಕಾರು ಅಥವಾ ಬೈಕ್ ಖರೀದಿಸಿದ ನಂತರ, ನೀವು ಅದಕ್ಕೆ ನಂಬರ್ ಪ್ಲೇಟ್ ಅಳವಡಿಸಬೇಕು. ಆದರೆ ಪ್ರಸ್ತುತ ಸರ್ಕಾರವು HSRP (ಹೈ-ಸೆಕ್ಯುರಿಟಿ ನೋಂದಣಿ ಫಲಕ) ನಂಬರ್ ಪ್ಲೇಟ್‌ಗಳನ್ನು ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ. ಇನ್ನೂ ಎಲ್ಲಾ ಹಳೆಯ ಕಾರು ಹಾಗೂ ಬೈಕ್ ಮಾಲೀಕರು ತಮ್ಮ ವಾಹನಗಳ ಮೇಲೆ HSRP ನಂಬರ್ ಪ್ಲೇಟ್‌ಗಳನ್ನು ಅಳವಡಿಸುವುದು ಕಡ್ಡಾಯವಾಗಿದೆ.
Hsrp | ಈಗಾಗಲೇ ಬಹುತೇಕ ವಾಹನ ಸವಾರರು ಎಚ್ಚೆತ್ತುಕೊಂಡು ತಮ್ಮ-ತಮ್ಮ ವಾಹನಗಳಿಗೆ HSRP ನಂಬರ್ ಪ್ಲೇಟ್ ಅನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಎಷ್ಟೋ ಜನಕ್ಕೆ ಇದರಿಂದಾಗುವ ಅನುಕೂಲದ ಬಗ್ಗೆ ತಿಳಿದಿಲ್ಲ. ಹಾಗಿದ್ರೆ ಈ ನಂಬರ್ ಪ್ಲೇಟ್ಅನ್ನು ನಿಖರವಾಗಿ ಏಕೆ ಅಳವಡಿಸಬೇಕು? ಇದರಿಂದಾಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ.
ಆದರೆ ಕಡಿಮೆ ಅವಧಿಯಲ್ಲಿ ರಾಜ್ಯಾದ್ಯಂತ ಲಕ್ಷಾಂತರ ವಾಹನಗಳಲ್ಲಿ HSRP ನಂಬರ್ ಪ್ಲೇಟ್‌ಗಳನ್ನು ಅಳವಡಿಸಲು ಸಾಧ್ಯವಿಲ್ಲ. ಆದ್ದರಿಂದ ರಾಜ್ಯ ಸಾರಿಗೆ ಇಲಾಖೆ 6 ಬಾರಿ ಈ ನಂಬರ್ ಪ್ಲೇಟ್ ವಿಸ್ತರಣೆಗೆ ಗಡುವು ನೀಡಿತ್ತು. ಕೊನೆಯದಾಗಿ ಮಾರ್ಚ್ 31 ರ ತನಕ ಈ ದಿನಾಂಕವನ್ನು ವಿಸ್ತರಣೆ ಮಾಡಿತ್ತು. ಇದೀಗ ಸಮಯ ಮುಗಿದಿದ್ದು, ಎಲ್ಲಾ ವಾಹನಗಳು HSRP ನಂಬರ್ ಪ್ಲೇಟ್ ಇದ್ದರೆ ಮಾತ್ರ ರಸ್ತೆಯಲ್ಲಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ.
HSRP ಒಂದು ಹೆಚ್ಚಿನ ಭದ್ರತೆಯ ನೋಂದಣಿ ಫಲಕವಾಗಿದ್ದು, ಇದು ಸಾಮಾನ್ಯ ನಂಬರ್ ಪ್ಲೇಟ್‌ಗಿಂತ ಹೆಚ್ಚು ಸುರಕ್ಷಿತ ಮತ್ತು ಅತ್ಯಾಧುನಿಕವಾಗಿದೆ. ಈ ಪ್ಲೇಟ್ ಅಲ್ಯೂಮಿನಿಯಂನಿಂದ ಮಾಡಲ್ಪಟ್ಟಿದ್ದು, ಕ್ರೋಮಿಯಂ ಬೇಸ್ ಹಾಟ್ ಸ್ಟಾಂಪಿಂಗ್, ವಿಶಿಷ್ಟ ಕೋಡ್ ಮತ್ತು ಟ್ಯಾಂಪರ್-ಪ್ರೂಫ್ ಲಾಕ್ ಅನ್ನು ಹೊಂದಿದೆ. ಯಾರಾದರೂ ನಿಮ್ಮ ವಾಹನವನ್ನು ಕದ್ದರೆ, ನಂಬರ್ ಪ್ಲೇಟ್ ಬದಲಾಯಿಸಿಕೊಳ್ಳುವ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.
HSRP ಪ್ಲೇಟ್ ವಿಶಿಷ್ಟ ಕೋಡ್ ಮತ್ತು RFID ಚಿಪ್ ಅನ್ನು ಹೊಂದಿದ್ದು, ಯಾರಾದರೂ ನಿಮ್ಮ ವಾಹನವನ್ನು ಕಳ್ಳತನ ಮಾಡಿದರೆ, ಅದನ್ನು ಸುಲಭವಾಗಿ ಪತ್ತೆ ಮಾಡಲು ಸಹಾಯ ಮಾಡುತ್ತದೆ.
ನೀವು ಈ ಹಿಂದೆ ಯಾವುದೇ ಅಂಗಡಿಗೆ ಹೋಗಿ ಯಾವುದೇ ನಂಬರ್ ಪ್ಲೇಟ್ ಮಾಡಿಸಿಕೊಳ್ಳಬಹುದಿತ್ತು. ಇದು ನಕಲಿ ನಂಬರ್ ಪ್ಲೇಟ್‌ಗಳ ಬಳಕೆಯಲ್ಲಿ ಹೆಚ್ಚಾಗಿ ಕಂಡುಬರುತ್ತಿತ್ತು. HSRP ಯೊಂದಿಗೆ ನಕಲಿ ನಂಬರ್ ಪ್ಲೇಟ್‌ಗಳನ್ನು ತಯಾರಿಸುವುದು ಈಗ ಕಷ್ಟವಾಗಿದೆ.
HSRP ನಂಬರ್ ಪ್ಲೇಟ್‌ನೊಂದಿಗೆ ಸಂಚಾರ ಪೊಲೀಸರು ಮತ್ತು RTO ನಿಮ್ಮ ವಾಹನದ ಡಿಜಿಟಲ್ ಡೇಟಾವನ್ನು ಹೊಂದಿರುತ್ತಾರೆ. ಹಾಗಾಗಿ ಅಪಘಾತ ಅಥವಾ ಇತರ ಘಟನೆ ಸಂಭವಿಸಿದಲ್ಲಿ, ವಾಹನದ ವಿವರಗಳು ತಕ್ಷಣವೇ ಲಭ್ಯವಿರುತ್ತವೆ.
ಈ ಪ್ಲೇಟ್ ಸಾಮಾನ್ಯ ನಂಬರ್ ಪ್ಲೇಟ್‌ಗಿಂತ ಉತ್ತಮವಾಗಿದೆ. ಹವಾಮಾನ ಬದಲಾವಣೆ, ಮಳೆ ಅಥವಾ ಬಿಸಿಲಿನಿಂದ ಇದು ಹಾಳಾಗುವುದಿಲ್ಲ.
ಸರ್ಕಾರವು HSRP ನಂಬರ್ ಪ್ಲೇಟ್‌ಗಳನ್ನು ಕಡ್ಡಾಯಗೊಳಿಸಿರುವುದರಿಂದ, ಈ ಪ್ಲೇಟ್ ಅಳವಡಿಸದಿದ್ದರೆ ದಂಡ ವಿಧಿಸಲಾಗುವುದು. ಆದ್ದರಿಂದ ನಿಯಮಗಳನ್ನು ಪಾಲಿಸುವುದು ಮುಖ್ಯ.