

ನವದೆಹಲಿ: ಅಕ್ರಮ ಸಂಬಂಧ ಅಥವಾ ಕಾನೂನಾತ್ಮಕವಲ್ಲದ ವಿವಾಹದಿಂದ ಜನಿಸಿದ ಮಕ್ಕಳಿಗೆ ತಮ್ಮ ಪೋಷಕರ ಅಥವಾ ಹಿಂದು ಅವಿಭಜಿತ ಕುಟುಂಬಕ್ಕೆ ಸೇರಿದ ಆಸ್ತಿ ಮೇಲೆ ಹಕ್ಕಿದೆಯೇ ಇಲ್ಲವೇ ಎಂಬ ಕುತೂಹಲಕಾರಿ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸುಪ್ರೀಂಕೋರ್ಟ್ ಮುಂದಾಗಿದ್ದು, ಈ ಸಂಬಂಧ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ನಡೆಸಿದೆ. ಹಿಂದೂ ವಿವಾಹ ಕಾಯ್ದೆ, 1956ರ ಸೆಕ್ಷನ್ 16(3)ರ ಅಡಿಯಲ್ಲಿ ಅಕ್ರಮ ಸಂಬಂಧದಿಂದ ಜನಿಸಿದ ಮಕ್ಕಳು ಕಾನೂನುಬದ್ಧ ಹೆಂಡತಿ/ಪತಿಗೆ ಜನಿಸಿದ ಮಕ್ಕಳಂತೆ ಆಸ್ತಿಯಲ್ಲಿ ಸಮಾನ ಪಾಲು ಪಡೆಯಲು ಅರ್ಹರಾಗಿದ್ದಾರೆ ಎಂದು ಕೆಲ ವಕೀಲರು ವಾದಿಸಿ ಕೋರ್ಟ್ ಗಮನಸೆಳೆದರು. ಈ ಆಸ್ತಿಯಲ್ಲಿ ಪೋಷಕರ ಸ್ವ-ಸ್ವಾಧೀನ ಆಸ್ತಿ ಒಳಗೊಂಡಿರುತ್ತದೆಯೇ ಅಥವಾ ಪಿತ್ರಾರ್ಜಿತ ಪೂರ್ವಜರ ಆಸ್ತಿ ಒಳಗೊಂಡಿರುತ್ತದೆಯೇ ಎಂಬ ಪ್ರಶ್ನೆಯನ್ನೂ ಕೆಲ ವಕೀಲರು ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠದ ಮುಂದಿಟ್ಟರು. ಅಂತಿಮವಾಗಿ, ಬಹುಪಾಲು ವಕೀಲರು ಅಸ್ತಿತ್ವದಲ್ಲಿರುವ ಕಾನೂನಿನ ಪ್ರಕಾರ, ಹಿಂದೂ ಅವಿಭಜಿತ ಕುಟುಂಬದ ಇತರ ಸದಸ್ಯರ ಆಸ್ತಿಗಳ ಮೇಲೆ ಇಂತಹಾ ಮಕ್ಕಳಿಗೆ ಯಾವುದೇ ಹಕ್ಕಿರುವುದಿಲ್ಲ ಎಂಬುದು ಸೆಕ್ಷನ್ 16(3) ಮೂಲಕ ತಿಳಿಸಲಾಗಿದೆ ಎಂದು ವಿವರಿಸಿದರು.
ಈ ಸೆಕ್ಷನ್ ಬಗ್ಗೆ ಕೆಲ ವಕೀಲರು ಅಸಮ್ಮತಿ ವ್ಯಕ್ತಪಡಿಸಿ, ಇದು ಹಿಂದೂ ಅವಿಭಜಿತ ಕುಟುಂಬದ ಆಸ್ತಿ ಮೇಲೆ ನ್ಯಾಯಸಮ್ಮತವಲ್ಲದ ಸಂಬಂಧದಿಂದ ಜನಿಸಿದ ಮಕ್ಕಳ ಹಕ್ಕಿಗೆ ಅಡ್ಡಿಯಾಗಿದೆ. ಅವಿಭಜಿತ ಕುಟುಂಬದಲ್ಲಿ ಮಾನ್ಯವಾದ ವಿವಾಹ ಸಂಬಂಧದಿಂದ ಜನಿಸಿದ ಪ್ರತಿ ಮಗು ಜನಿಸಿದ ಕ್ಷಣದಿಂದಲೇ ಆಸ್ತಿಯ ಪಾಲನ್ನು ಪಡೆಯಲು ಅರ್ಹವಾಗಿರುತ್ತದೆ ಎಂದು ತಿಳಿಸಿದರು. ಈ ವಿಚಾರದ ಬಗ್ಗೆ ದಿನಪೂರ್ತಿ ವಾದ-ಪ್ರತಿವಾದದ ನಂತರ ಸಿಜೆಐ ಡಿ ವೈ ಚಂದ್ರಚೂಡ್ ತೀರ್ಪನ್ನು ಕಾಯ್ದಿರಿಸಲು ಉದ್ದೇಶಿಸಿದಾಗ, ಹಲವು ವಕೀಲರು ತಮ್ಮ ಸಲ್ಲಿಕೆಗಳನ್ನು ಆಲಿಸಬೇಕು ಎಂದು ಅಪೇಕ್ಷೆ ವ್ಯಕ್ತಪಡಿಸಿದ್ದರಿಂದ ವಿಚಾರಣೆ ಮುಂದುವರಿದಿದೆ.
ವಾಸ್ತವದಲ್ಲಿ ಈ ಜಟಿಲ ಪ್ರಶ್ನೆ ಉದ್ಭವಿಸಿದ್ದು ಕರ್ನಾಟಕದಿಂದ ಎನ್ನುವುದು ವಿಶೇಷ. 2005ರಲ್ಲಿ ಕೆಳ ನ್ಯಾಯಾಲಯವೊಂದು ತೀರ್ಪು ನೀಡಿ, ನ್ಯಾಯಸಮ್ಮತವಲ್ಲದ ವಿವಾಹದಿಂದ ಜನಿಸಿದ ಮಕ್ಕಳಿಗೆ ಪೋಷಕರ ಪೂರ್ವಜರ ಆಸ್ತಿಗಳ ಮೇಲೆ ಯಾವುದೇ ಹಕ್ಕು ಇಲ್ಲ ಎಂದು ಹೇಳಿತ್ತು. ಆದರೆ ಜಿಲ್ಲಾ ನ್ಯಾಯಾಧೀಶರೊಬ್ಬರು ಈ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಬದಲಿಸಿ ತೀರ್ಪು ಕೊಟ್ಟಿದ್ದರು. ನಂತರ ಪ್ರಕರಣ ಕೈಗೆತ್ತಿಕೊಂಡಿದ್ದ ರಾಜ್ಯ ಹೈಕೋರ್ಟ್, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 16 (3) ಅಕ್ರಮ ಸಂಬಂಧದ ಮಕ್ಕಳಿಗೆ ಅವರ ಪೋಷಕರ ಆಸ್ತಿಯ ಮೇಲೆ ಮಾತ್ರ ಹಕ್ಕಿದೆ ಎಂದು ಸ್ಪಷ್ಟಪಡಿಸಿತ್ತು. ಹೆತ್ತವರ ಪೋಷಕರ ಮರಣದ ನಂತರ ಪೂರ್ವಜರ ಆಸ್ತಿ ಭಾಗ ಮಾಡಿದಾಗ ತನ್ನ ಹೆತ್ತವರಿಗೆ ಸೇರಿದ ಆಸ್ತಿಯ ಭಾಗದಲ್ಲಿ ಈ ಮಕ್ಕಳು ಪಾಲು ಹೊಂದಬಹುದು ಎಂದಿದ್ದ ಕೋರ್ಟ್, ಇಂತಹ ಹಕ್ಕುಗಳು ಪೋಷಕರು ವಿಲ್ ಬರೆಯದೆ ನಿಧನರಾದಾಗ ಮಾತ್ರ ಎಂದೂ ದಾಖಲಿಸಿತ್ತು. ಕರ್ನಾಟಕ ಹೈಕೋರ್ಟ್ನ ತೀರ್ಪನ್ನು ಸುಪ್ರೀಂಕೋರ್ಟ್
ನಲ್ಲಿ ಪ್ರಶ್ನಿಸಿ, ವಿಚಾರಣೆ ನಡೆದಿತ್ತು. 2011ರಲ್ಲಿ ಈ ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿ, ಕಾನೂನುಬಾಹಿರ ಸಂಬಂಧದಿಂದ ಜನಿಸಿದ ಮಕ್ಕಳು ಹೆತ್ತವರ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹರೇ? ಹಿಂದೂ ವಿವಾಹ ಕಾಯಿದೆಯ ಸೆಕ್ಷನ್ 16(3) ರ ಅಡಿಯಲ್ಲಿ ಅವರ ಹಕ್ಕು ಪೋಷಕರ ಸ್ವ-ಸ್ವಾಧೀನ ಆಸ್ತಿಯ ಪಾಲಿಗೆ ಮಾತ್ರ ಸೀಮಿತವಾಗಿದೆಯೇ ಎಂಬ ಪ್ರಶ್ನೆಗಳನ್ನು ಮುಂದಿಟ್ಟಿತ್ತು. ಇದೇ ವೇಳೆ ಅತ್ಯಂತ ಮಹತ್ವದ ಅಭಿಪ್ರಾಯ ಹೊರಹಾಕಿದ್ದ ನ್ಯಾಯಪೀಠ, ಮಗುವಿನ ಅಪ್ಪ-ಅಮ್ಮನ ಸಂಬಂಧಕ್ಕೆ ಕಾನೂನಾತ್ಮಕ ಅನುಮೋದನೆ ಇಲ್ಲದಿರಬಹುದು. ಆದರೆ, ಮಗುವಿನ ಜನನವನ್ನು ಪೋಷಕರ ಸಂಬಂಧದಿಂದಾಚೆ ನೋಡಬೇಕು. ಇಂತಹ ಸಂಬಂಧದಿಂದ ಜನಿಸಿದ ಮಗುವಿಗೆ ಮಾನ್ಯವಾದ ಮದುವೆಯಲ್ಲಿ ಜನಿಸಿದ ಮಕ್ಕಳಿಗೆ ಇರುವಂತಹ ಎಲ್ಲಾ ಹಕ್ಕುಗಳನ್ನು ಪಡೆಯುವ ಅರ್ಹತೆ ಇರುತ್ತದೆ. ಇದು ಸೆಕ್ಷನ್ 16(3) ತಿದ್ದುಪಡಿಯ ತಿರುಳು ಕೂಡ ಆಗಿದೆ ಎಂದು ಹೇಳಿತ್ತು.