More

  ಕೃಷ್ಣರಾಜಸಾಗರ ಭರ್ತಿಯಾದಲ್ಲಿ ನಗರಕ್ಕಿಲ್ಲ ಜಲ ಸಮಸ್ಯೆ

  ಬೆಂಗಳೂರು: ರಾಜಧಾನಿ ಜನರ ಕುಡಿಯುವ ನೀರಿನ ಆಸೆರೆಯಾಗಿರುವ ಕೃಷ್ಣರಾಜಸಾಗರ ಅಣೆಕಟ್ಟೆಗೆ (ಕೆಆರ್‌ಎಸ್) ಹರಿದುಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಳದಿಂದ ಜಲಾಶಯದ ನೀರಿನ ಮಟ್ಟ ಗುರುವಾರ 108 ಅಡಿಗೆ ಏರಿದೆ. ಇದರಿಂದಾಗಿ ಬೆಂಗಳೂರಿಗೆ ಪೂರೈಕೆಯಾಗುವ ಕಾವೇರಿ ನೀರಿನ ಸಮಸ್ಯೆ ಬಾಧಿಸದು.

  ಕೆಆರ್‌ಎಸ್‌ನಿಂದ ಬೆಂಗಳೂರು ನಗರಕ್ಕೆ ವಾರ್ಷಿಕ 18 ಟಿಎಂಸಿ ನೀರು ಬಳಸಿಕೊಳ್ಳಲಾಗುತ್ತಿದೆ. ಬೇಸಿಗೆ ವೇಳೆ ಸ್ವಲ್ಪಮಟ್ಟಿಗೆ ಸಮಸ್ಯೆ ಎದುರಾದರೂ, ಹೆಚ್ಚಿನ ಆತಂಕ ಇರದು. ಆದರೆ, ಈ ಬಾರಿ ನಿರೀಕ್ಷಿತ ಮಳೆ ಸುರಿಯದ ಕಾರಣ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ ಕುಸಿದ ಪರಿಣಾಮ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಭೀತಿ ಎದುರಾಗಿತ್ತು.

  ಒಂದು ವೇಳೆ ಜಲಾಶಯ ಪೂರ್ಣವಾಗಿ ಭರ್ತಿ ಆಗದಿದ್ದಲ್ಲಿ ನಗರಕ್ಕೆ ಪೂರೈಕೆ ಪ್ರಮಾಣ ತುಸು ಕಡಿಮೆಯಾಗುವ ಸಾಧ್ಯತೆ ಇತ್ತು. ಇದನ್ನು ಅರಿತೇ ಜಲಮಂಡಳಿ ಅಧಿಕಾರಿಗಳು ಜುಲೈ ಆರಂಭದಲ್ಲೇ ಸಭೆ ನಡೆಸಿ ನೀರಿನ ಮಿತವ್ಯಯ ಸಾಧಿಸುವತ್ತ ಗಮನ ಹರಿಸಿದ್ದರು.

  ಇದೀಗ ಕೃಷ್ಣರಾಜಸಾಗರ ಜಲಾಶಯ ಕ್ರಮೇಣ ಭರ್ತಿಯತ್ತ ಮುಖ ಮಾಡಿರುವುದರಿಂದ ಮುಂದಿನ ಯುಗಾದಿವರೆಗೂ ನೀರು ಪೂರೈಕೆ ಸರಾಗವಾಗಿರುತ್ತದೆ. ವಾರ್ಷಿಕ ನಿರ್ವಹಣೆ ಹಾಗೂ ತುರ್ತು ಕಾಮಗಾರಿ ಸಂದರ್ಭಗಳಲ್ಲಿ ಮಾತ್ರ ನೀರು ಪೂರೈಕೆ ವ್ಯತ್ಯಯವಾಗಬಹುದಷ್ಟೆ ಎಂದು ಜಲಮಂಡಳಿ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ.

  KRS

  ದೂರವಾದ ಆತಂಕ

  ಪ್ರಸಕ್ತ ವರ್ಷ ಮುಂಗಾರು ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದ ಕಾರಣ ಕೆಆರ್‌ಎಸ್ ಒಳಹರಿವು ಕಡಿಮೆಯಾಗಿತ್ತು. ಜುಲೈ ಆರಂಭದಲ್ಲಿ 90 ಅಡಿಗಿಂತ ಕಡಿಮೆ ನೀರು ಸಂಗ್ರಹವಾಗಿದ್ದ ಕಾರಣ ಆತಂಕ ಎದುರಾಗಿತ್ತು. ಅದರೆ, ಕಳೆದ 4-5 ದಿನಗಳಿಂದ ಕೊಡಗು ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಕೆಆರ್‌ಎಸ್‌ಗೆ ಅಧಿಕ ನೀರು ಹರಿದು ಬರಲು ಕಾರಣವಾಗಿದೆ. ಕಳೆದ ಮಂಗಳವಾರ 100 ಅಡಿ ದಾಟಿದ ವೇಳೆ ಜಲಮಂಡಳಿ ಅಧಿಕಾರಿಗಳು ಸಮಾಧಾನದ ನಿಟ್ಟಿಸಿರು ಬಿಡುವಂತಾಗಿತ್ತು. ಗುರುವಾರ 108.18 ಅಡಿ ನೀರು ಸಂಗ್ರಹಗೊಂಡಿದ್ದು, ಆಗಸ್ಟ್ ತಿಂಗಳಲ್ಲಿ ಜಲಾಶಯದ ಪೂರ್ಣ ಮಟ್ಟ 124.80 ಅಡಿ ಭರ್ತಿಯಾಗುವುದೆಂದು ನಿರೀಕ್ಷಿಸಲಾಗಿದೆ. ಕಳೆದ ವರ್ಷ ಜು.10ರಂದೇ ಕೆಆರ್‌ಎಸ್ ಪೂರ್ಣ ಮಟ್ಟ ತಲುಪಿತ್ತು.

  ಇದನ್ನೂ ಓದಿ: ಫಿಲಿಪೈನ್ಸ್| ಪ್ರಯಾಣಿಕರಿದ್ದ ದೋಣಿ ಮಗುಚಿ 23 ಮಂದಿ ಮೃತ್ಯು

  ಸೋರಿಕೆ ತಡೆಯಲು ಹರಸಾಹಸ

  ಕೆಆರ್‌ಎಸ್‌ನಿಂದ ನಗರಕ್ಕೆ ವಾರ್ಷಿಕ 18 ಟಿಎಂಸಿ ನೀರು ಪೂರೈಕೆಯಾದರೂ, ವಿತರಣೆ ಹಾಗೂ ನಿರ್ವಹಣೆ ವಿಚಾರದಲ್ಲಿನ ಲೋಪಗಳಿಂದಾಗಿ ಶೇ.29ರಷ್ಟು ಪೋಲಾಗುತ್ತಿದೆ. ಹಳೆಯ ಪೈಪ್‌ಲೇನ್, ರಸ್ತೆಅಗೆತ, ನೆಲಮಟ್ಟದ ಜಲಸಂಗ್ರಹಾಲಯಗಳಲ್ಲಿ ಅಸಮರ್ಪಕ ನಿರ್ವಹಣೆ, ದೋಷಪೂರಿತ ಮೀಟರ್ ಹಾಗೂ ಇತರ ಕಾರಣದಿಂದ ಕಾವೇರಿ ನೀರು ಸದ್ಬಳಕೆಯಾಗುತ್ತಿಲ್ಲ. ಸೋರಿಕೆಯನ್ನು ಶೇ.15ಕ್ಕೆ ಇಳಿಸಲು ಸರ್ಕಾರ ಸೂಚನೆ ನೀಡಿದ್ದರೂ, ಅದನ್ನು ಅನುಷ್ಠಾನಕ್ಕೆ ತರಲು ದೊಡ್ಡ ಮೊತ್ತ ಬೇಕಿರುವ ಕಾರಣ ಜಲಮಂಡಳಿ ಮೌನ ವಹಿಸಿದೆ.

  ಹೊಸ ವರ್ಷಕ್ಕೆ 110 ಹಳ್ಳಿಗೆ ನೀರು

  ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರ್ಪಡೆಯಾಗಿರುವ 110 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಸುವ ಕಾವೇರಿ 5ನೇ ಹಂತದ ಯೋಜನೆ ಪ್ರಗತಿಯಲ್ಲಿದೆ. ಪ್ರಸ್ತುತ ಕಾಮಗಾರಿ ಪೂರ್ಣಗೊಂಡಿರುವ ಪ್ರದೇಶದಲ್ಲಿ ಅರ್ಧದಷ್ಟು ಹಳ್ಳಿಗಳಿಗೆ ಮಾತ್ರ ನೀರು ವಿತರಿಸಲಾಗುತ್ತಿದೆ. ಈ ವರ್ಷಾಂತ್ಯಕ್ಕೆ ಕಾಮಗಾರಿ ಪೂರ್ಣಕ್ಕೆ ಗಡುವು ವಿಧಿಸಿದ್ದು, 2024ರ ಆರಂಭದಲ್ಲಿ ಬಾಕಿ ಹಳ್ಳಿಗಳಿಗೆ ಕಾವೇರಿ ನೀರು ಪೂರೈಸಲು ಜಲಮಂಡಳಿ ಚಿತ್ತ ಹರಿಸಿದೆ.

  ರಾಜ್ಯೋತ್ಸವ ರಸಪ್ರಶ್ನೆ - 26

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts