ಅಶ್ವಿನ್​ ದಿಢೀರ್​ ವಿದಾಯ ನಿರ್ಧಾರಕ್ಕೆ ಕಾರಣವೇನು? ವಾಷಿಂಗ್ಟನ್​ಗೆ ದಾರಿ ಬಿಡುವ ಒತ್ತಡವಿತ್ತೇ?

web ash wash
Published on

ಬ್ರಿಸ್ಬೇನ್: ಬಾರ್ಡರ್​-ಗಾವಸ್ಕರ್​ ಟ್ರೋಫಿ ಟೆಸ್ಟ್​ ಸರಣಿಯ ನಡುವೆಯೇ ಅಶ್ವಿನ್​ ವಿದಾಯ ಹೇಳಿರುವುದು ಅಚ್ಚರಿಗೆ ಕಾರಣವಾಗಿದೆ. ಆದರೆ ಭಾರತ ತಂಡದಲ್ಲಿ ತಾನು ಮೊದಲ ಆಯ್ಕೆಯ ಸ್ಪಿನ್ನರ್​ ಆಗಿರದಿದ್ದರೆ ಗುಡ್​ಬೈ ಹೇಳುವುದೇ ಸೂಕ್ತ ಎಂಬ ಅಶ್ವಿನ್​ ನಿಲುವೇ ನಿವೃತ್ತಿ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ. ಆದರೆ ನಿವೃತ್ತಿ ನಿರ್ಧಾರಕ್ಕೆ ಮುನ್ನ ಅಶ್ವಿನ್​ ಆಯ್ಕೆಗಾರರೊಂದಿಗೆ ಚರ್ಚಿಸಿಲ್ಲ ಎಂದೂ ಬಿಸಿಸಿಐ ಮೂಲಗಳು ತಿಳಿಸಿವೆ.

ಹಾಲಿ ಸರಣಿಯ ಮೊದಲ ಟೆಸ್ಟ್​ನಲ್ಲಿ ವಾಷಿಂಗ್ಟನ್​ ಸುಂದರ್​ ಆಡಿದ್ದರೆ, 3ನೇ ಟೆಸ್ಟ್​ನಲ್ಲಿ ರವೀಂದ್ರ ಜಡೇಜಾ ಏಕೈಕ ಸ್ಪಿನ್ನರ್​ ಆಗಿ ಕಣಕ್ಕಿಳಿದಿದ್ದರು. 2021ರ ಪಿಂಕ್​ಬಾಲ್​ ಟೆಸ್ಟ್​ನಲ್ಲಿ ಉತ್ತಮ ನಿರ್ವಹಣೆ ತೋರಿದ್ದ ಆಧಾರದಲ್ಲಷ್ಟೇ ಅಶ್ವಿನ್​ ಅಡಿಲೇಡ್​ನಲ್ಲಿ ಅವಕಾಶ ಪಡೆದಿದ್ದರು. ಆದರೆ ಕೇವಲ 1 ವಿಕೆಟ್​ ಪಡೆದು ನಿರಾಸೆ ಮೂಡಿಸಿದ್ದರು. ಇನ್ನು ಸರಣಿಯ ಕೊನೇ 2 ಟೆಸ್ಟ್​ಗಳಲ್ಲೂ ಅಶ್ವಿನ್​ರನ್ನು ಆಡಿಸುವ ಸಾಧ್ಯತೆ ಇರಲಿಲ್ಲ.

ಭಾರತ ತಂಡ ಮುಂದಿನ ವರ್ಷ ಜೂನ್​ನಲ್ಲಿ ಮುಂದಿನ ಟೆಸ್ಟ್​ ಸರಣಿ ಆಡಲಿದೆ. ಇಂಗ್ಲೆಂಡ್​ನಲ್ಲಿ ಆಡುವ ಆ 5 ಟೆಸ್ಟ್​ಗಳಲ್ಲೂ ಅಶ್ವಿನ್​ಗೆ 11ರ ಬಳಗದಲ್ಲಿ ಸ್ಥಾನದ ಗ್ಯಾರಂಟಿ ಇರಲಿಲ್ಲ. ಅಲ್ಲದೆ ಭಾರತ 2025ರ ಅಕ್ಟೋಬರ್​-ನವೆಂಬರ್​ನಲ್ಲಿ ತವರಿನಲ್ಲಿ ಮುಂದಿನ ಟೆಸ್ಟ್​ ಆಡಲಿದೆ. ಹೀಗಾಗಿ ಮುಂದಿನ 10 ತಿಂಗಳ ಕಾಲ ಅವರು ಮರಳಿ ಟೆಸ್ಟ್​ ಆಡುವ ಸಾಧ್ಯತೆ ಕಡಿಮೆ ಇತ್ತು.

ಗೌತಮ್​ ಗಂಭೀರ್​ ನೇತೃತ್ವದ ತರಬೇತಿ ಬಳಗ ಭಾರತ ತಂಡವನ್ನು ಕೂಡಿಕೊಂಡ ಬಳಿಕ ಈಗಾಗಲೆ ತಮಿಳುನಾಡಿನವರೇ ಆದ ವಾಷಿಂಗ್ಟನ್​ಸುಂದರ್​ರನ್ನು ಅಶ್ವಿನ್​ ಉತ್ತರಾಧಿಕಾರಿ ಆಗಿ ಗುರುತಿಸಿದೆ. ಹೀಗಾಗಿ ಭಾರತ ಇಬ್ಬರೇ ಸ್ಪಿನ್ನರ್​ಗಳನ್ನು ಆಡಿಸುವಾಗ ಜಡೇಜಾ-ವಾಷಿಂಗ್ಟನ್​ ಜೋಡಿಗೆ ಆದ್ಯತೆ ನೀಡುವ ನಿರೀಕ್ಷೆ ಇತ್ತು. ಜತೆಗೆ ಹೆಚ್ಚುತ್ತಿರುವ ವಯಸ್ಸಿನ ನಡುವೆ ಮೊಣಕಾಲು ನೋವಿನ ಸಮಸ್ಯೆಯನ್ನೂ ಎದುರಿಸುತ್ತಿರುವುದು 38 ವರ್ಷದ ಅಶ್ವಿನ್​ ನಿವೃತ್ತಿಗೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಆದರೆ ಸರಣಿಯ ನಡುವೆಯೇ ಈ ನಿರ್ಧಾರ ಪ್ರಕಟಿಸುವ ಅವಸರವನ್ನು ಯಾಕೆ ತೋರಿಸಿದರು ಎಂಬುದು ಸ್ಪಷ್ಟವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net