ತಡಸ-ಶಿವಮೊಗ್ಗ ಹೆದ್ದಾರಿ ದುರಸ್ತಿಗೆ ಏನಡ್ಡಿ ? ತಹಸೀಲ್ದಾರ್ ನೇತೃತ್ವದಲ್ಲಿ ಸಾರ್ವಜನಿಕರ ಸಭೆ

TAHASILDAR MEETING ON ROAD PROBLEM
Published on

ಹಾನಗಲ್ಲ: ಪ್ರತಿದಿನವೂ ಅಪಘಾತಗಳಿಗೆ ಕಾರಣವಾಗುತ್ತಿರುವ ತಡಸ-ಶಿವಮೊಗ್ಗ ಹೆದ್ದಾರಿ ದುರಸ್ತಿಗೆ ಒತ್ತಾಯಿಸಿ ಗುರುವಾರ ಪ್ರತಿಭಟನೆಗೆ ಕೈಗೊಂಡ ಸಾರ್ವಜನಿಕರ ಮನವೊಲಿಸಿದ ಅಧಿಕಾರಿಗಳು, ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದರು.

ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ಸಾರ್ವಜನಿಕರು ಹಾನಗಲ್ಲ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಮಗಾರಿ ಕೈಗೊಳ್ಳಲು ಮುಂದಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಬಿ. ಪಾಟೀಲ ನೇತೃತ್ವದಲ್ಲಿ ಸಾರ್ವಜನಿಕರು ಹೆದ್ದಾರಿಯಲ್ಲಿ ಪ್ರತಿಭಟನೆ ಕೈಗೊಳ್ಳಲು ಮುಂದಾದರು. ಇದರಿಂದ ಎದುರಾಗಬಹುದಾದ ಸಮಸ್ಯೆ ಮನಗಂಡ ಪಿಐ ಎಸ್.ಆರ್. ಶ್ರೀಧರ ಪ್ರತಿಭಟನಾಕಾರರ ಮನವೊಲಿಸಿ, ತಹಸೀಲ್ದಾರ್ ನೇತೃತ್ವದಲ್ಲಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಾರ್ವಜನಿಕರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳನ್ನೂ ಕರೆಸುವಂತೆ ಪಟ್ಟು ಹಿಡಿದರು.

ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ, ಸಿಪಿಐ ಎಸ್.ಆರ್. ಶ್ರೀಧರ ಅವರ ಉಪಸ್ಥಿತಿಯಲ್ಲಿ ತಹಸೀಲ್ದಾರ್ ರವಿಕುಮಾರ ಕೊರವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು

ಹೋರಾಟಗಾರ ಪ್ರಶಾಂತ ಮುಚ್ಚಂಡಿ ಮಾತನಾಡಿ, ಹಾನಗಲ್ಲಿನ ಇದೇ ಹೆದ್ದಾರಿ ಮೂಲಕ ಶಿವಮೊಗ್ಗ, ಸಾಗರ, ಶಿರಸಿ, ಹಾವೇರಿ ಸೇರಿದಂತೆ ದೂರದ ನಗರಗಳಿಂದ ಭಾರಿ ಗಾತ್ರದ ವಾಹನಗಳು ಪ್ರತಿದಿನ ಸಂಚರಿಸುತ್ತವೆ. ಶಾಲಾ-ಕಾಲೇಜ್ ವಿದ್ಯಾರ್ಥಿಗಳು ಸಂಚರಿಸುತ್ತಾರೆ. ವಾಹನ ದಟ್ಟಣೆ ಹೆಚ್ಚಾಗಿರುವುದರಿಂದಲೇ ಅಪಘಾತ ಹೆಚ್ಚುತ್ತಿವೆ. ಈ ರಸ್ತೆ ಹೆದ್ದಾರಿಯಾಗಿ ಪರಿವರ್ತನೆಗೊಂಡಿದ್ದರೂ ಅದನ್ನು ವಿಸ್ತರಣೆ ಕೈಗೊಳ್ಳದ ಕಾರಣ ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ವಿಸ್ತರಣೆಯೇ ಶಾಶ್ವತ ಪರಿಹಾರವಾಗಿದೆ. ತಾತ್ಕಾಲಿಕ ದುರಸ್ತಿ ನಂತರ ವಿಸ್ತರಣೆ ಕೈಗೊಳ್ಳಲೇಬೇಕು. ಶಾಸಕರ ನೇತೃತ್ವದಲ್ಲಿ ಅಗಲೀಕರಣ ವಿಷಯ ಪ್ರಸ್ತಾಪಿಸಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಈಗಾಗಲೇ ಟೆಂಡರ್ ನಡೆದಿರುವ 5 ಕೋಟಿ ರೂಪಾಯಿ ಪ್ರಸ್ತಾವನೆ ರದ್ದುಪಡಿಸಿ, ವಿಸ್ತರಣೆಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ಪಿಡಬ್ಲ್ಯುಡಿ ಎಇಇ ನಾಗರಾಜ ಮಾತನಾಡಿ, ಲಕ್ಕಿಕೊಪ್ಪದಿಂದ ಗೊಂದಿವರೆಗಿನ ಹೆದ್ದಾರಿ ದುರಸ್ತಿಗಾಗಿ 27 ಲಕ್ಷ ರೂಪಾಯಿ ಮಂಜೂರಾಗಿದೆ. ಅದರಲ್ಲಿ ಹಾನಗಲ್ಲ ಮಧ್ಯದ ರಸ್ತೆ ಕಾಮಗಾರಿ ಕೂಡಲೇ ಕೈಗೊಳ್ಳಲಾಗುವುದು. ಶನಿವಾರದಿಂದಲೇ ಕಾಮಗಾರಿ ಆರಂಭಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ನಗರ ಮಧ್ಯದ ಹೆದ್ದಾರಿ ನಿರ್ವಣಕ್ಕಾಗಿ 5 ಕೋಟಿ ರೂಪಾಯಿ ಪ್ರಸ್ತಾವನೆ ಟೆಂಡರ್ ಹಂತದಲ್ಲಿದೆ. ಅದರಲ್ಲಿ ಮಹಾತ್ಮ ಗಾಂಧಿ ವೃತ್ತದಿಂದ 1.2 ಕಿ.ಮೀ. ಉದ್ದದ ಹೆದ್ದಾರಿ ವಿಸ್ತರಣೆ, ಎತ್ತರಗೊಳಿಸುವ ಕಾಮಗಾರಿ ಕೈಗೊಳ್ಳಲಾಗುವುದು. ಇನ್ನು 15 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಭರವಸೆ ನೀಡಿದರು.

ಪಿಎಸ್​ಐ ಯಲ್ಲಪ್ಪ ಹಿರಗಣ್ಣನವರ, ಪ್ರತಿಭಟನಾಕಾರರಾದ ಎಸ್.ಎಂ. ಕೋತಂಬರಿ, ರವಿಚಂದ್ರ ಪುರೋಹಿತ, ಹನುಮಂತಪ್ಪ ಕೋಣನಕೊಪ್ಪ, ಲೋಕೇಶ ಸುಣಗಾರ, ರಾಜೀವ ದಾನಪ್ಪನವರ, ಸಂಜು ಬೇದ್ರೆ, ಸತೀಶ ಭೋಸಲೆ, ಪ್ರಭುಗೌಡ ಪಾಟೀಲ, ಬಿ.ಎಂ.ಪಾಟೀಲ, ಪ್ರಭು ಕುಳೇನೂರ, ಅರಬಾಜ್ ಇನಾಂದಾರ ಇತರರು ಪಾಲ್ಗೊಂಡಿದ್ದರು.

ಮತ್ತೆ ಪ್ರತಿಭಟನೆಯ ಎಚ್ಚರಿಕೆ

ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಬಿ. ಪಾಟೀಲ ಮಾತನಾಡಿ, ಕಳೆದ ಐದು ವರ್ಷಗಳಿಂದ ಹೆದ್ದಾರಿ ತಾತ್ಕಾಲಿಕ ದುರಸ್ತಿ ಮಾತ್ರ ಕಾಣುವಂತಾಗಿದೆ. ಶಾಶ್ವತ ಪರಿಹಾರ ಸಿಗುತ್ತಿಲ್ಲ. ಈ ಕಾಮಗಾರಿ ಕೈಗೊಳ್ಳಲು ಏನು ತೊಂದರೆಯಾಗಿದೆ ? ಕೂಡಲೇ ಕಾಮಗಾರಿ ಆರಂಭಿಸದಿದ್ದರೆ ಪ್ರತಿಭಟನೆ ಮುಂದುವರಿಸುವುದಾಗಿ ಎಚ್ಚರಿಸಿದರು.

ಹಾನಗಲ್ಲಿನ ಹೆದ್ದಾರಿ ಕಿರಿದಾಗಿರುವುದರಿಂದ ವಾಹನ ಸಂಚಾರ ವ್ಯತ್ಯಯವಾಗುತ್ತಿದೆ. ಅಪಘಾತಗಳಿಗೂ ಕಾರಣವಾಗುತ್ತಿದೆ. ಪಾದಚಾರಿ ರಸ್ತೆಗಳು ಅತಿಕ್ರಮಣಗೊಂಡಿದ್ದು, ಪುರಸಭೆಯ ಅಧಿಕಾರಿಗಳೊಂದಿಗೆ ರ್ಚಚಿಸಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು. ತುರ್ತಾಗಿ ಹೆದ್ದಾರಿ ದುರಸ್ತಿಗೆ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಸೂಚಿಸಲಾಗಿದೆ. | ರವಿಕುಮಾರ ಕೊರವರ, ತಹಸೀಲ್ದಾರ್ ಹಾನಗಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net