

| ಡಾ.ಗಣಪತಿ ಹೆಗಡೆ
ಅದೊಂದು ಶಾಂತ, ಸುಂದರ ಗುರುಕುಲ. ಪುಸ್ತಕಗಳ ಪಾಠಕ್ಕಿಂತ ಬದುಕಿನ ಪಾಠಗಳ ಬಗ್ಗೆ ಹೆಚ್ಚು ಮಹತ್ತ್ವ ಕೊಡುವ ಪರಿಸರ. ಗುರುಕುಲದ ವಿದ್ಯಾರ್ಥಿ ಶ್ರೀಹರಿಗೆ ಗುರುಗಳ ಪಾಠದ ಮೇಲೆ ಎಲ್ಲಿಲ್ಲದ ಶ್ರದ್ಧೆ. ‘ಶ್ರೀಹರಿ, ಮನುಷ್ಯ ಎಷ್ಟು ಕಾಲ ಬದುಕಿರುತ್ತಾನಪ್ಪಾ?’ ಎಂದು ಒಂದು ದಿನ ಇದ್ದಕ್ಕಿದ್ದಂತೆಯೇ ಗುರುಗಳು ಪ್ರಶ್ನಿಸಿದರು. ‘ಇಂದಿನ ದಿನಗಳಲ್ಲಿ ಎಂಬತ್ತು ವರ್ಷಗಳು ಬದುಕಿದರೆ ಹೆಚ್ಚು. ಎಲ್ಲೋ ನೂರರಲ್ಲಿ ಒಂದಿಬ್ಬರು ಮಾತ್ರ ಅಬ್ಬಬ್ಬಾ ಎಂದರೆ ನೂರು ವರ್ಷ ಬದುಕಬಹುದು ಗುರುಗಳೇ’ ಎಂದ. ‘ಇರಲಿ ನೂರು ವರ್ಷ ಬದುಕುತ್ತಾನೆ ಅಂತಾನೇ ಇಟ್ಕೊಳೋಣ. ಅದರಲ್ಲಿ ಅರ್ಧಭಾಗ ಅಂದರೆ ಐವತ್ತು ವರ್ಷಗಳು ನಿದ್ರೆಯಲ್ಲಿಯೇ ಕಳೆಯುವುದಲ್ಲವೇ? ಅಂದರೆ, ಮನುಷ್ಯ ಜೀವನ ಇರೋದು ಕೇವಲ 50 ವರ್ಷಗಳು ಎಂದಾಯಿತು!’ ಎಂದರು ಗುರುಗಳು.
‘ಹೌದಲ್ಲವೇ ಗುರುಗಳೇ, ಅದರಲ್ಲಿ 25 ವರ್ಷಗಳು ಬಾಲ್ಯ, ಶಿಕ್ಷಣ, ಕೊನೆಯಲ್ಲಿ ವೃದ್ಧಾಪ್ಯ ಇದರಲ್ಲೇ ಕಳೆದುಹೋಗುವುದು. ಅಂದರೆ, ಮನುಷ್ಯನ ಜೀವಿತಾವಧಿ ಕೇವಲ ಇಪ್ಪತ್ತೈದು ವರ್ಷಗಳಾ ಗುರುಗಳೇ?’ ಎಂದ ಶ್ರೀಹರಿ. ‘ಇನ್ನೂ ಲೆಕ್ಕ ಕೊಡ್ತೀನಿ ಕೇಳಿಸ್ಕೊ. ಉಳಿದ ಇಪ್ಪತ್ತೈದು ವರ್ಷಗಳಲ್ಲಿ ರೋಗರುಜಿನಗಳು, ವಿಯೋಗ, ದುಃಖಗಳು, ಇನ್ನು ಯಾರದ್ದೋ ಸೇವೆ, ತಾನೇ ತಂದುಕೊಳ್ಳುವ ಕೆಲವು ನೋವುಗಳು ಇವೆಲ್ಲವೂ ಆಗಬೇಕಲ್ಲಪ್ಪ!’ ಎಂದು ಗುರುಗಳು ಹೇಳಿದಾಗ, ‘ಹಾಗಾದರೆ ಸುಖದಿಂದ ಬದುಕುವ ದಿನಗಳು ಯಾವವು ಗುರುಗಳೇ?’ ಎಂದು ಪ್ರಶ್ನಿಸಿದ.
ಆಯುರ್ವರ್ಷಶತಂ ನೃಣಾಂ ಪರಿಮಿತಂ ರಾತ್ರೌ ತದರ್ಧಂ ಗತಂ
ತಸ್ಯಾರ್ಧಸ್ಯ ಪರಸ್ಯ ಚಾರ್ಧಮಪರಂ ಬಾಲತ್ವ ವೃದ್ಧತ್ವಯೋಃ|
ಶೇಷಂ ವ್ಯಾಧಿ-ವಿಯೋಗ-ದುಃಖಸಹಿತಂ ಸೇವಾದಿಭಿರ್ನಿಯತೇ
ಜೀವೇ ವಾರಿತರಂಗಚಂಚಲತರೇ ಸೌಖ್ಯಂ ಕುತಃ ಪ್ರಾಣಿನಾಮ್|
ಮನುಷ್ಯರಿಗೆ ಆಯಸ್ಸು ನೂರು ವರ್ಷಗಳೆಂದು ನಿಗದಿಯಾಗಿದೆ. ಅದರಲ್ಲಿ ಐವತ್ತು ವರ್ಷಗಳಷ್ಟು ನಿದ್ರೆಯಲ್ಲಿಯೇ ಕಳೆಯುತ್ತದೆ. ಉಳಿದ 50 ವರ್ಷಗಳಲ್ಲಿ 25 ವರ್ಷಗಳಷ್ಟು ಕಾಲವು ಬಾಲ್ಯ ಮತ್ತು ವೃದ್ಧಾಪ್ಯದಲ್ಲಿ ಕಳೆಯುತ್ತದೆ. ಇನ್ನುಳಿದ 25 ವರ್ಷಗಳಲ್ಲಿ ರೋಗ, ವಿಯೋಗ, ದುಃಖ, ಸೇವೆ ಮುಂತಾದವುಗಳಿರುತ್ತವೆ. ನೀರಿನ ಅಲೆಗಳಷ್ಟು ಚಂಚಲವಾಗಿರುವ ಈ ಜೀವನದಲ್ಲಿ ಮನುಷ್ಯರಿಗೆೆ ಸುಖವೆಲ್ಲಿದೆ?’ ಎಂದು ಭರ್ತೃಹರಿಯೆಂಬ ಕವಿ ತನ್ನ ‘ವೈರಾಗ್ಯ ಶತಕ’ದಲ್ಲಿ ಪ್ರಶ್ನಿಸುತ್ತಾನೆ ಎಂದು ಗುರುಗಳು ವಿವರಿಸಿದರು.
ಹಾಗೆಂದು ನಿರಾಸೆ ಪಡಬೇಕಿಲ್ಲ. ಜೀವನದಲ್ಲಿ ಆಗೀಗ ಸಿಗುವ ಮಧುರ ಕ್ಷಣಗಳನ್ನೇ ಸಂತಸದ ಬುಗ್ಗೆಗಳು ಎಂದು ಅನುಭವಿಸಬೇಕಷ್ಟೇ. ಅಯ್ಯೋ ಮುಂದೆ ಹೇಗೆಂಬ ಚಿಂತೆ ಬರಬಾರದು. ಪಾಲಿಗೆ ಬಂದುದು ಪಂಚಾಮೃತವೆಂಬ ಭಾವ ನಮ್ಮದಾಗಬೇಕು. ಭಗವಂತನು ನಮಗಾಗಿ ಕೊಟ್ಟ ಸಮಯದ ಒಂದೊಂದು ಕ್ಷಣವನ್ನೂ ಸಾರ್ಥಕ ಮಾಡಿಕೊಳ್ಳಬೇಕು. ನಮ್ಮ ಬದುಕು ಇತರರಿಗೆ ಆದರ್ಶವಾಗಿರಬೇಕು. ಎದುರಾದ ಕಷ್ಟವು ಸುಖಕ್ಕೊಂದು ದಾರಿ ಎಂಬ ತತ್ತ್ವ ಅಳವಡಿಸಿಕೊಂಡು ಮನಸ್ಸಿನಲ್ಲಿ ತೃಪ್ತಿ ಹೊಂದಿ ಸುಖಮಯ ಜೀವನ ನಡೆಸಬೇಕು ಎಂದು ಗುರುಗಳು ಬೋಧಿಸಿದರು.
(ಲೇಖಕರು ಸಂಸ್ಕೃತ ಉಪನ್ಯಾಸಕರು)