ಜನತಾ ಕರ್ಫ್ಯೂ ಎಂದರೇನು? ಇದು ಹೇಗಿರುತ್ತದೆ..

Modi 19 march 20
Published on

ಪ್ರಧಾನಿ ನರೇಂದ್ರ ಮೋದಿಯವರು ಕರೊನಾ ವೈರಸ್ Covid19 ಸೋಂಕು ಹರಡುತ್ತಿರುವುದನ್ನು ತಡೆಯುವ ಸಲುವಾಗಿ ಜನರ ನೆರವನ್ನು ಕೋರಿ ಮಾರ್ಚ್ 22ರಂದು ಒಂದು ದಿನದ ಮಟ್ಟಿಗೆ ಯಾರೂ ಮನೆಯಿಂದ ಹೊರಗೆ ಬರಬೇಡಿ ಎಂದು ಗುರುವಾರ ರಾತ್ರಿ ಮನವಿ ಮಾಡಿದ್ದಾರೆ. ತಮ್ಮ ಅರ್ಧ ಗಂಟೆಯ ಭಾಷಣದಲ್ಲಿ ಅವರು ಜನತಾ ಕರ್ಫ್ಯೂ ಪದವನ್ನು ಇದೇ ಮೊದಲ ಸಲ ಬಳಸಿದ್ದಾರೆ.

ಕರ್ಫ್ಯೂ ಎಂಬ ಪದ ಕಾನೂನು ಆಡಳಿತಕ್ಕೆ ಸಂಬಂಧಿಸಿದ್ದಾಗಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಪೊಲೀಸರು ಜಾರಿಗೊಳಿಸುವ ನಿಯಮ ಇದಾಗಿದೆ. ಪರಿಸ್ಥಿತಿ ನಿಯಂತ್ರಿಸುವ ಸಲುವಾಗಿ ಯಾರೂ ಮನೆಯಿಂದ ಹೊರಬಾರದಂತೆ ಬಲವಂತವಾಗಿ ಪೊಲೀಸರು ಮಾಡಿಸುವ ಬಂದ್ ಎಂದೂ ಹೇಳಬಹುದು. ಆದರೆ, ಜನತಾ ಕರ್ಫ್ಯೂ ಎಂಬ ಪದವೇ ಹೇಳುವಂತೆ, ಸರ್ಕಾರದ ಆಡಳಿತ ಕೈಂಕರ್ಯದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಬಯಸುತ್ತದೆ. ದೇಶಕ್ಕೆ ದೇಶವೇ ಎದುರಿಸುವ ಸಂಕಷ್ಟಮಯ ಸನ್ನಿವೇಶವನ್ನು ಎದುರಿಸುವುದಕ್ಕೆ ಸರ್ಕಾರ ಮಾತ್ರವಲ್ಲ, ಸಾರ್ವಜನಿಕರೂ ಕೈ ಜೋಡಿಸಬೇಕು ಎಂಬ ಇರಾದೆ ಪ್ರಧಾನಿಯವರ ಮಾತಿನಲ್ಲಿ ಎದ್ದು ಕಾಣುತ್ತಿತ್ತು. ಇದಕ್ಕೆ ದೇಶವಾಸಿಗಳಿಂದ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದ್ದು, ಶುಕ್ರವಾರ ಬೆಳಗ್ಗೆಯೇ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ತ್ವರಿತಗತಿಯಲ್ಲಿ ನಡೆದಿದೆ. ಟ್ವಿಟರ್​ನಂತಹ ಸಾಮಾಜಿಕ ಜಾಲತಾಣಗಳಲ್ಲಿ #JanataCurfewMarch22, IndiaFightsCovid19 #SocialDistancing ಮುಂತಾದ ಹ್ಯಾಷ್ ಟ್ಯಾಗ್ ಬಳಸಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಲೇ ಇದೆ.

ಜನತಾ ಕರ್ಫ್ಯೂಗೆ ಪ್ರಧಾನಿ ನೀಡಿದ ವ್ಯಾಖ್ಯಾನ ಇದು - ಜನರಿಂದ ಜನರಿಗಾಗಿ ಅವರೇ ಹೇರಿಕೊಳ್ಳುವ ಕರ್ಫ್ಯೂ. ದೇಶದ ಪ್ರತಿಯೊಬ್ಬ ಪೌರರೂ ಇದನ್ನು ಸ್ವಯಂ ಪ್ರೇರಣೆಯಿಂದ ಆಚರಿಸಬೇಕು.

ಹೇಗಿರಲಿದೆ ಈ ಕರ್ಫ್ಯೂ ಎಂಬುದನ್ನು ಪ್ರಧಾನಿ ವಿವರಿಸಿದ್ದು ಹೀಗೆ - ಈ ಭಾನುವಾರ ಬೆಳಗ್ಗೆ 7ರಿಂದ ರಾತ್ರಿ ಒಂಭತ್ತು ಗಂಟೆ ತನಕ ಅಂದರೆ 14 ಗಂಟೆ ಅವಧಿ ನಡೆಯಲಿದೆ ಈ ಜನತಾ ಕರ್ಫ್ಯೂ. ಈ ಅವಧಿಯಲ್ಲಿ ಯಾವೊಬ್ಬ ಪೌರನೂ ಮನೆಯಿಂದ ಹೊರಗೆ ಬರುವಂತಿಲ್ಲ. ಮನೆಯಲ್ಲಿದ್ದುಕೊಂಡು ಈ ಅವಧಿಯ ಸದುಪಯೋಗ ಮಾಡಿಕೊಳ್ಳಲು ಪ್ರಯತ್ನಿಸಬೇಕು. ಆದಾಗ್ಯೂ, ಪೊಲೀಸ್, ಮಾಧ್ಯಮ, ವೈದ್ಯಕೀಯ ಸೇವೆ ಮುಂತಾದ ಕೆಲಸದಲ್ಲಿರುವವರಿಗೆ ಈ ಕರ್ಫ್ಯೂ ಅನ್ವಯವಲ್ಲ.

ಯಾಕೆ ಈ ಸಾಹಸ?- ಪ್ರಧಾನಿಯವರ ವಿವರಣೆ ಹೀಗಿದೆ- ಭವಿಷ್ಯದ ಸವಾಲುಗಳನ್ನು ಎದುರಿಸುವುದಕ್ಕೆ ನಾವೆಷ್ಟು ಸಜ್ಜಾಗಿದ್ದೇವೆ ಎಂಬುದನ್ನು ಅರಿಯಲು ಈ ಭಾನುವಾರದ ಜನತಾ ಕರ್ಫ್ಯೂ ಮುನ್ನುಡಿ ಬರೆಯಲಿದೆ. ಇದು ದೇಶವಾಸಿಗಳಿಗೆಲ್ಲ ಒಂದು ಅನುಭವ.

ಎಲ್ಲರೂ ಏನುಮಾಡಬೇಕು?: ಪ್ರತಿಯೊಬ್ಬರೂ ಕನಿಷ್ಠ 10 ಜನರನ್ನು ಸಂಪರ್ಕಿಸಿ ಜನತಾ ಕರ್ಫ್ಯೂ ಬಗ್ಗೆ ಮಾಹಿತಿ ನೀಡಿ ಅವರು ಅದರಲ್ಲಿ ಪಾಲ್ಗೊಳ್ಳುವಂತೆ ಮಾಡಬೇಕು. ಕರೊನಾ ವೈರಸ್ ಸೋಂಕು ಹರಡುವಿಕೆ ತಡೆಗಟ್ಟಲು ಅದೆಷ್ಟು ಮುಖ್ಯ, ಸೋಷಿಯಲ್ ಡಿಸ್ಟೆನ್ಸಿಂಗ್ ಅನುಷ್ಠಾನಗೊಳಿಸುವ ಅಗತ್ಯವನ್ನು ಅವರಿಗೆ ಮನವರಿಕೆ ಮಾಡಿಕೊಡಬೇಕು. ತಾವೂ ಸುರಕ್ಷಿತರಾಗಿದ್ದು, ಉಳಿದವರನ್ನೂ ಸುರಕ್ಷಿತವಾಗಿ ಇರಿಸುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು.

ಸಂಜೆ 5 ಗಂಟೆಗೆ 5 ನಿಮಿಷ ಮಾಡಬೇಕಾದ್ದೇನು ಮತ್ತು ಯಾಕೆ?: ಕರೊನಾ ಸೋಂಕು ಎಷ್ಟು ಗಂಭೀರವಾದುದು ಎಂಬುದನ್ನು ಎಲ್ಲರೂ ಅರಿತಿರುತ್ತೀರಿ. ಇದನ್ನು ತಡೆಯುವ ಸಲುವಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟು ಕೆಲಸ ಮಾಡುವ ಕರೊನಾ ವಾರಿಯರ್ಸ್ ಗೆ ಗೌರವ ಸಲ್ಲಿಸಬೇಕು. ಅವರು ಯಾರೂ ಹೆಸರಿಗೋಸ್ಕರ ಅದನ್ನು ಮಾಡುತ್ತಿಲ್ಲ. ಮನುಕುಲದ ಒಳಿತಿಗಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹೀಗಾಗಿ ಭಾನುವಾರ ಸಂಜೆ 5 ಗಂಟೆಗೆ 5 ನಿಮಿಷ ಮನೆಯಿ ಕಿಟಕಿ ಬದಿಯಲ್ಲೋ, ಬಾಲ್ಕನಿಯಲ್ಲೋ ನಿಂತು ಚಪ್ಪಾಳೆ ತಟ್ಟುವ ಮೂಲಕ, ಗಂಟೆ ಬಾರಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು. ಅವರನ್ನು ಆ ಕೆಲಸದಲ್ಲಿ ಮುಂದುವರಿಯುವುದಕ್ಕೆ ಹುರಿದುಂಬಿಸಬೇಕು ಎಂದು ಪ್ರಧಾನಿ ಮೋದಿ ದೇಶವಾಸಿಗಳಲ್ಲಿ ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net