ಮುಂಬೈ: ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಷೇರುಗಳಲ್ಲಿ 9 ಪ್ರತಿಶತದಷ್ಟು ಲಾಭ ಮತ್ತು ಷೇರು ಮಾರುಕಟ್ಟೆಯಲ್ಲಿ ಜಿಯೋ ಫೈನಾನ್ಷಿಯಲ್ ಪಟ್ಟಿ ಆಗುವುದರೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಮುಕೇಶ್ ಅಂಬಾನಿ ಅವರು 2023ರಲ್ಲಿ 9.98 ಶತಕೋಟಿ ಡಾಲರ್ಗಳಷ್ಟು ಹೆಚ್ಚು ಶ್ರೀಮಂತರಾಗಿದ್ದಾರೆ ಎಂದು ಬ್ಲೂಮ್‌ಬರ್ಗ್ ದತ್ತಾಂಶಗಳು ತಿಳಿಸಿವೆ.
ಭಾರತದ ನಂಬರ್ 1 ಶ್ರೀಮಂತ ಭಾರತೀಯ ಮತ್ತು ವಿಶ್ವದ 13 ನೇ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅವರ ಆಸ್ತಿಯ ಮೌಲ್ಯವು ಈ ವರ್ಷ 97.1 ಶತಕೋಟಿ ಡಾಲರ್ (8,08,346 ಕೋಟಿ ರೂಪಾಯಿ) ಆಗಿದೆ.
ಬ್ಲೂಮ್‌ಬರ್ಗ್ ಮಾಹಿತಿಯ ಪ್ರಕಾರ, 500 ಶ್ರೀಮಂತ ವ್ಯಕ್ತಿಗಳ ಸಾಮೂಹಿಕ ನಿವ್ವಳ ಮೌಲ್ಯವು 2023 ರಲ್ಲಿ 1.5 ಲಕ್ಷ ಕೋಟಿ ಡಾಲರ್ ಏರಿಕೆಯಾಗಿದೆ, ಹಿಂದಿನ ವರ್ಷದಲ್ಲಿ 1.4 ಲಕ್ಷ ಕೋಟಿ ಡಾಲರ್ ನಷ್ಟವಾಗಿದ್ದು, ಈ ವರ್ಷ ಈ ನಷ್ಟ ತುಂಬಿದಂತಾಗಿದೆ.
ಎಲೋನ್ ಮಸ್ಕ್ ಅವರು ಫ್ರೆಂಚ್ ಐಷಾರಾಮಿ ವಸ್ತುಗಳ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರಿಂದ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಂಬ ಬಿರುದನ್ನು ಮರಳಿ ಪಡೆದಿದ್ದಾರೆ. 2022 ರಲ್ಲಿ 138 ಶತಕೋಟಿ ಡಾಲರ್ ಕಳೆದುಕೊಂಡ ನಂತರ ಮಸ್ಕ್ ಅವರು ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಯಶಸ್ಸಿನಿಂದ 95.4 ಶತಕೋಟಿ ಡಾಲರ್ ಗಳಿಸಿದ್ದಾರೆ.
ಹಿಂಡೆನ್‌ಬರ್ಗ್ ಆರೋಪಗಳ ಹಿನ್ನೆಲೆಯಲ್ಲಿ ನಷ್ಟ ಅನುಭವಿಸಿರುವ ಎರಡನೇ ಶ್ರೀಮಂತ ಭಾರತೀಯ ಗೌತಮ್ ಅದಾನಿ ಅವರು ಈ ವರ್ಷ 37.3 ಶತಕೋಟಿ ಡಾಲರ್ ಕಳೆದುಕೊಂಡಿದ್ದಾರೆ. ಸೂಚ್ಯಂಕದ ಪ್ರಕಾರ ಅವರ ನಿವ್ವಳ ಮೌಲ್ಯವು 83.2 ಶತಕೋಟಿ ಡಾಲರ್ ಆಗಿದೆ, ಇದು 31 ಪ್ರತಿಶತ ಕುಸಿತ ಕಂಡಿದೆ.
ಅದಾನಿ ಅವರನ್ನು ಹೊರತುಪಡಿಸಿ, ಡಿ-ಮಾರ್ಟ್‌ನ ರಾಧಾಕಿಶನ್ ದಮಾನಿ ಅವರು 18.7 ಕೋಟಿ ಡಾಲರ್ ಕಳೆದುಕೊಂಡು ಸಂಪತ್ತಿನ ಕುಸಿತವನ್ನು ಕಂಡ ಮತ್ತೊಬ್ಬ ಪ್ರಮುಖ ಭಾರತೀಯರಾಗಿದ್ದಾರೆ. ಅವೆನ್ಯೂ ಸೂಪರ್‌ಮಾರ್ಟ್ಸ್ (ಡಿ-ಮಾರ್ಟ್‌ನ ಮೂಲ ಕಂಪನಿ) ಷೇರುಗಳು 2023 ರಲ್ಲಿ ಹೆಚ್ಚಳ ಕಂಡಿಲ್ಲ.
ಶ್ರೀಮಂತ ಪಟ್ಟಿಯಲ್ಲಿರುವ ಇತರ ಪ್ರಮುಖ ಭಾರತೀಯ ಹೆಸರುಗಳೆಂದರೆ ಎಚ್‌ಸಿಎಲ್ ಟೆಕ್ ಸಂಸ್ಥಾಪಕ ಶಿವ ನಾಡಾರ್. ಇವರು ಈ ವರ್ಷ 9.47 ಶತಕೋಟಿ ಡಾಲರ್ ಗಳಿಸಿದ್ದು ಇವರ ಆಸ್ತಿ ಮೌಲ್ಯ 34 ಶತಕೋಟಿ ಡಾಲರ್ ತಲುಪಿದೆ. ಎಚ್‌ಸಿಎಲ್ ಟೆಕ್ ಷೇರುಗಳು ಈ ವರ್ಷ ಶೇ.41ರಷ್ಟು ಜಿಗಿತ ಕಂಡಿವೆ.
ಭಾರತದ ಅತ್ಯಂತ ಶ್ರೀಮಂತ ಮಹಿಳೆ, ಒಪಿ ಜಿಂದಾಲ್ ಗ್ರೂಪ್‌ನ ಮಾಜಿ ಅಧ್ಯಕ್ಷೆ ಸಾವಿತ್ರಿ ಜಿಂದಾಲ್ ಅವರು 8.93 ಶತಕೋಟಿ ಡಾಲರ್ ಹಣವನ್ನು ಈ ವರ್ಷ ತಮ್ಮ ಆಸ್ತಿಗೆ ಸೇರಿಸಿದ್ದಾರೆ. ಅವರು ಭಾರತದ ಅಗ್ರ 3ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಜಿಂದಾಲ್‌ನ ಒಟ್ಟು ನಿವ್ವಳ ಮೌಲ್ಯವು 24.7 ಶತಕೋಟಿ ಡಾಲರ್ ಆಗಿದೆ.
ಆದಿತ್ಯ ಬಿರ್ಲಾ ಗ್ರೂಪ್‌ನ ಕುಮಾರ್ ಮಂಗಳಂ ಬಿರ್ಲಾ ಅವರು 7.09 ಶತಕೋಟಿ ಡಾಲರ್, ಸನ್ ಫಾರ್ಮಾದ ದಿಲೀಪ್ ಶಾಂಘ್ವಿ 5.26 ಶತಕೋಟಿ ಡಾಲರ್, ಮತ್ತು ಏರ್‌ಟೆಲ್‌ನ ಸುನಿಲ್ ಮಿತ್ತಲ್ 3.62 ಶತಕೋಟಿ ಡಾಲರ್ ಗಳಿಕೆಯನ್ನು 2023 ರಲ್ಲಿ ಮಾಡಿದ್ದಾರೆ.