ಮಳೆಯಿಂದ IPL​ ಫೈನಲ್​ ಪಂದ್ಯ ರದ್ದಾದ್ರೆ ಮುಂದೇನು? ಪಂಜಾಬ್​ಗೆ ವರ, ಆರ್​ಸಿಬಿಗೆ ಶಾಪ! IPL 2025

IPL 2025
Published on

IPL 2025 : ವಿಶ್ವದ ಶ್ರೀಮಂತ ಟಿ20 ಲೀಗ್ ಐಪಿಎಲ್ ಟೂರ್ನಿಯಲ್ಲಿ ಮಂಗಳವಾರ ಹೊಸ ಇತಿಹಾಸ ನಿರ್ಮಾಣವಾಗಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ. ಐಪಿಎಲ್ 18ನೇ ಆವೃತ್ತಿಯ ಪ್ರಶಸ್ತಿ ಕಾದಾಟದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ಮುಖಾಮುಖಿಗೆ ವೇದಿಕೆ ಸಜ್ಜಾಗಿದ್ದು, ಯಾರೇ ಗೆದ್ದರೂ ಹೊಸ ಚಾಂಪಿಯನ್ ಉದಯವಾಗಲಿದೆ.

9 ವರ್ಷಗಳ ಬಳಿಕ ಮತ್ತು ಒಟ್ಟಾರೆ 4ನೇ ಬಾರಿಗೆ ಫೈನಲ್​ಗೇರಿರುವ ಆರ್​ಸಿಬಿ ತಂಡ ಕಪ್ ಗೆಲುವಿನ 18 ವರ್ಷಗಳ ಕಾಯುವಿಕೆಗೆ ಅಂತ್ಯ ಹಾಡುವ ಹಂಬಲದಲ್ಲಿದೆ. ಭಾರತೀಯ ಕ್ರಿಕೆಟ್​ನ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಸರಿಸುಮಾರು ಎರಡು ದಶಕಗಳ ಮೊಟ್ಟಮೊದಲ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯುವ ತವಕದಲ್ಲಿದ್ದಾರೆ. ಆರ್​ಸಿಬಿ ಅಭಿಮಾನಿಗಳಂತೂ ವಿಜಯೋತ್ಸವದ ಜಾತ್ರೆ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ.

ಅತ್ತ ಪಂಜಾಬ್​ಗೂ ಇದು 18 ವರ್ಷಗಳ ಕನಸು ನನಸಾಗಿಸುವ ಅವಕಾಶವೆನಿಸಿದೆ. ಎರಡನೇ ಮತ್ತು 11 ವರ್ಷಗಳ ಬಳಿಕ ಫೈನಲ್​ಗೇರಿರುವ ಪಂಜಾಬ್ ತಂಡ, ಶ್ರೇಯಸ್ ಅಯ್ಯರ್ ಸಾರಥ್ಯದಲ್ಲಿ ಚೊಚ್ಚಲ ಟ್ರೋಫಿ ಗೆಲುವಿನ ಕಾತರದಲ್ಲಿದೆ. ಹೀಗಾಗಿ ಜಿದ್ದಾಜಿದ್ದಿನ ಹಣಾಹಣಿಯೊಂದರ ನಿರೀಕ್ಷೆ ಹರಡಿದೆ. ಆದರೆ, ಫೈನಲ್​ ಪಂದ್ಯ ನಡೆಯಲಿರುವ ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಳೆ ಭೀತಿ ಆವರಿಸಿದೆ. ಏಕೆಂದರೆ, ಮುಂಬೈ ಮತ್ತು ಪಂಜಾಬ್​ ನಡುವಿನ ಕ್ವಾಲಿಫೈಯರ್​ 2ರ ಪಂದ್ಯ ಮಳೆಯ ಕಾರಣ ತುಂಬಾ ವಿಳಂಬವಾಯಿತು.

ಅಹಮದಾಬಾದ್​ನಲ್ಲಿ ಮಳೆಯ ಮುನ್ಸೂಚನೆ ನೀಡಲಾಗಿದ್ದು, ಭಾರಿ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಪಂದ್ಯ ನಡೆಯುತ್ತೋ? ಇಲ್ಲವೋ? ಎಂಬ ಚಿಂತೆ ಅಭಿಮಾನಿಗಳಲ್ಲಿ ಆವರಿಸಿದೆ. ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೆ ಏನಾಗಲಿದೆ ಎಂಬ ಪ್ರಶ್ನೆಯು ಸಹ ಇದೆ. ಅದಕ್ಕೆ ಉತ್ತರ ಇಲ್ಲಿದೆ.

ಅಹಮದಾಬಾದ್​ನಲ್ಲಿ ಫೈನಲ್ ಪಂದ್ಯಕ್ಕೂ ಮಳೆ ಅಡಚಣೆಯ ಭೀತಿ. ಮಳೆ ಅಡ್ಡಿಪಡಿಸಿದರೆ, ಮಂಗಳವಾರವೇ ಫೈನಲ್ ಪೂರ್ಣಗೊಳಿಸಲು ಎರಡು ಗಂಟೆ ಹೆಚ್ಚುವರಿ ಅವಧಿ ಕಾಯಲಾಗುವುದು. ಫಲಿತಾಂಶ ನಿರ್ಧಾರ ಸಾಧ್ಯವಾಗದಿದ್ದರೆ, ಮೀಸಲು ದಿನವಾದ ಬುಧವಾರಕ್ಕೆ (ಜೂನ್ 4) ಫೈನಲ್ ಪಂದ್ಯ ಮುಂದೂಡಲ್ಪಡಲಿದೆ. ಮೀಸಲು ದಿನವೂ ಮಳೆ ಅಡಚಣೆಯಿಂದ ಫಲಿತಾಂಶ ಬಾರದಿದ್ದರೆ, ಲೀಗ್ ಹಂತದ ಅಂಕಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿದ್ದ ತಂಡಕ್ಕೆ ಅಂದರೆ ಈ ಬಾರಿ ಅಗ್ರಸ್ಥಾನ ಅಲಂಕರಿಸಿದ್ದ ಪಂಜಾಬ್ ಕಿಂಗ್ಸ್​ಗೆ ಟ್ರೋಫಿ ವಿತರಿಸಲಾಗುತ್ತದೆ. ಒಂದು ವೇಳೆ ಇದು ನಡೆದರೆ ಆರ್​ಸಿಬಿ ಅಭಿಮಾನಿಗಳಿಗೆ ಈ ಬಾರಿಯೂ ಭಾರೀ ನಿರಾಶೆಯಾಗಲಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಮಳೆ ಬಾರದಿರಲಿ ಎಂದು ಎಲ್ಲರು ಬೇಡಿಕೊಳ್ಳುತ್ತಿದ್ದಾರೆ.

* ಮುಖಾಮುಖಿ: 36

* ಆರ್​ಸಿಬಿ: 18

* ಪಂಜಾಬ್: 18

* ಆರಂಭ: ರಾತ್ರಿ 7.30

* ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಜಿಯೋ ಹಾಟ್​ಸ್ಟಾರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net