

ಬೆಂಗಳೂರು: ಸೆ.29 ರಂದು ನಡೆಯಲಿರುವ ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗದ ಸಂಪೂರ್ಣ ಬೆಂಬಲಿ ಇದೆಯಾ? ಎಂಬ ಪ್ರಶ್ನೆ ಹಲವು ಕನ್ನಡ ಪರ ಸಂಘಟನೆಗಳಲ್ಲಿ ಮೂಡಿತ್ತು. ಕಾವೇರಿ ವಿಚಾರ ಕುರಿತು ಮಾಡಲಿರುವ ಹೋರಾಟಕ್ಕೆ ಹಿರಿಯ ನಟ ಶಿವರಾಜ್‌ಕುಮಾರ್ ಹೇಳುವುದೇನು ಎಂಬುದನ್ನು ತಿಳಿಯಲು ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ನಟನ ನಿವಾಸಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ.
ಶಿವರಾಜ್‌ಕುಮಾರ್ ನಿವಾಸಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಭೇಟಿ ನೀಡಿದ್ದು, ಶಿವರಾಜ್‌ಕುಮಾರ್ ಅವರೊಂದಿಗೆ ಮಾತುಕತೆ ಮಾಡಿದರು. ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಎನ್. ಸುರೇಶ್, "ಶಿವಣ್ಣ ಅವರ ನಿವಾಸಕ್ಕೆ ನಾವು ಪದಾಧಿಕಾರಿಗಳು ಬಂದಿದ್ದೆವು. ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‌ಗೆ ಚಿತ್ರರಂಗದ ಬೆಂಬಲವಿದೆ" ಎಂದು ಹೇಳಿದರು.
"ಶಿವಣ್ಣ ಮೊದಲಿಗೆ ಈ ಬಂದ್ ಏಕೆ ಎಂದು ಪ್ರಶ್ನಿಸಿದರು. ರೈತರ ಹೋರಾಟಕ್ಕೆ ನಮ್ಮ ಪ್ರತಿಭಟನೆ ಎಂದು ಹೇಳಿದ ನಂತರ ಅವರು, ಖಂಡಿತಾ ಬರುತ್ತೇನೆ ಎಂದು ಒಪ್ಪಿಗೆ ಸೂಚಿಸಿದರು. ನಾಳೆ ಶಿವರಾಜ್‌ಕುಮಾರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಬೆಳಗ್ಗೆ 10 ಗಂಟೆಗೆ ಗುರುರಾಜ ಕಲ್ಯಾಣ ಮಂಟಪದಲ್ಲಿ ಹೋರಾಟ ಪ್ರಾರಂಭವಾಗಲಿದೆ" ಎಂದು ಹೇಳಿದರು.
"ಸ್ಥಳಕ್ಕೆ ಚಿತ್ರರಂಗದ ಹಲವು ನಟ-ನಟಿಯರು ಆಗಮಿಸಲಿದ್ದಾರೆ. ಕಲಾವಿದರಾದ ಶಿವಣ್ಣ, ರವಿಚಂದ್ರನ್, ಪ್ರೇಮ್, ಧ್ರುವ ಸರ್ಜಾ, ವಿಜಯ್ ರಾಘವೇಂದ್ರ, ಶ್ರೀಮುರುಳಿ ಸೇರಿದಂತೆ ಎಲ್ಲರನ್ನೂ ಆಹ್ವಾನಿಸಿದ್ದೇವೆ. ಪ್ರತಿಭಟನೆಯನ್ನು ಹಬ್ಬದ ರೀತಿಯಲ್ಲಿ ಮಾಡಲಾಗುವುದು. ನಮ್ಮದು ರೈತರ ಪರ ಹೋರಾಟವಾಗಿದ್ದು, ಬಂದ್‌ಗೆ ಇಡೀ ಚಿತ್ರೋದ್ಯಮದ ಬೆಂಬಲವಿದೆ" ಎಂದು ಎನ್.ಎಂ. ಸುರೇಶ್ ಹೇಳಿದರು.