ಕನ್ನಡಪರ ಹೋರಾಟಗಾರರಿಗೆ ಸಚಿವ ಎಂ.ಬಿ.ಪಾಟೀಲ ಹೇಳಿದ್ದೇನು ?

M B Patil
Published on

ಬೆಂಗಳೂರು: ಅಂಗಡಿ ಮುಂಗಟ್ಟುಗಳು, ವಾಣಿಜ್ಯೋದ್ಯಮ ಸಂಸ್ಥೆಗಳು ಕನ್ನಡ ನಾಮಲಕವನ್ನು ನಿಯಮದ ಪ್ರಕಾರ ಬಳಸಬೇಕು. ಈ ವಿಷಯದಲ್ಲಿ ಎರಡು ಮಾತೇ ಇಲ್ಲ. ಆದರೆ ಯಾರೂ ಏಕಾಏಕಿ ಕಾನೂನು ತಮ್ಮ ಕೈಗೆ ಎತ್ತಿಕೊಳ್ಳಬಾರದು ಎಂದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಸಲಹೆ ನೀಡಿದರು.

ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಮೊದಲಿಗೆ ಕನ್ನಡ ನಾಮಲಕಗಳನ್ನು ಹಾಕಲು ಒಂದು ಗಡುವು ನಿಗದಿಪಡಿಸುವ ನಿರ್ಧಾರವಾಗಲಿ. ಅದಾದ ಮೇಲೆ ನಿಯಮ ಪಾಲನೆ ಮಾಡದವರ ವಿರುದ್ಧ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ. ಆದರೆ ಕನ್ನಡಪರ ಹೋರಾಟಗಾರರಿಗೆ ರಾಜ್ಯದ ಕಾಳಜಿಯೂ ಅಷ್ಟೇ ಮುಖ್ಯವಾಗಿದೆ ಎಂದರು.

ಉದ್ಯಮಗಳ ಸ್ಥಾಪನೆಗೆ ಭಾರತದ ರಾಜ್ಯಗಳ ಸೇರಿ ಜಗತ್ತಿನೆಲ್ಲೆಡೆ ಪೈಪೋಟಿಯಿದೆ. ಉದ್ಯಮಿಗಳಿಗೆ ಯಾವುದೇ ರಾಜ್ಯವೂ ಅನಿವಾರ್ಯವಲ್ಲ. ಇಂತಹ ಘಟನೆಗಳು ನಡೆದಾಗ ಅವು ಎಲ್ಲೆಡೆ ಹರಡಿ ನಮ್ಮಲ್ಲಿ ಬಂಡವಾಳ ಹೂಡಲು ಹಿಂದೆಮುಂದೆ ನೋಡಬೇಕಾದ ಪರಿಸ್ಥಿತಿ ಉಂಟಾಗಲಿದೆ ಎಂಬ ಕಳವಳ ವ್ಯಕ್ತಪಡಿಸಿದರು.

ಇಲಾಖೆ ವ್ಯಾಪ್ತಿಯ ಕೈಗಾರಿಕೆಗಳಲ್ಲಿ ಕನ್ನಡ ಬಳಕೆಗೆ ಸಂಬಂಧಿಸಿದಂತೆ ಸಲಹಾಸೂಚಿ ಹೊರಡಿಸಲಾಗುವುದು ಎಂದ ಎಂ.ಬಿ.ಪಾಟೀಲ, ಮೂವರು ಡಿಸಿಎಂ ಹುದ್ದೆಗಳ ಸೃಜನೆ ಇತ್ಯಾದಿ ವಿಚಾರಗಳ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ನಾಯಕರ ಮುಂದೆ ಅಭಿಪ್ರಾಯ ಮಂಡಿಸುತ್ತೇವೆ. ಈ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವ ಅಗತ್ಯವಿಲ್ಲವೆಂದರು.

ಬೆದರಿದ ಬಿಜೆಪಿ

ಶಾಸಕ ಬಸನಗೌಡ ಪಾಟೀಲ ಯತ್ನಾಳ್ ತಮ್ಮದೇ ಪಕ್ಷದವರ ಮೇಲೆ ಹೊರಿಸುತ್ತಿರುವ ವಾಸ್ತವಾಂಶದ ಆರೋಪಕ್ಕೆ ಬಿಜೆಪಿ ಬೆದರಿದೆ. ತಮ್ಮ ಪಕ್ಷದ ವಿರುದ್ಧವೇ ಯತ್ನಾಳ್ ಭ್ರಷ್ಟಾಚಾರ ಆರೋಪ ಮಾಡುತ್ತಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳಲಾಗದಷ್ಟು ಬಿಜೆಪಿ ದುರ್ಬಲವಾಗಿದೆ ಎಂದು ಎಂ.ಬಿ.ಪಾಟೀಲ ಛೇಡಿಸಿದರು.

ಯತ್ನಾಳ್‌ರಿಗೂ ಕಾಂಗ್ರೆಸ್‌ಗೂ ಯಾವುದೇ ಸಂಬಂಧವಿಲ್ಲ. ಆದರೆ ಬಿಜೆಪಿಯವರು ತಮ್ಮ ಸಮಾಧಾನಕ್ಕೆ ಅವರನ್ನು ಕಾಂಗ್ರೆಸ್ ಏಜೆಂಟ್ ಎಂದು ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲೂ ಅವರ ವಿರುದ್ಧ ಕ್ರಮಕೈಗೊಳ್ಳುವ ನಿರ್ಧಾರವಾಗಿಲ್ಲ ಎಂದರು.

ನಿಜಾಂಶ ಜನರ ಮುಂದಿಡುವೆವು

ಬಿಜೆಪಿ ಆಡಳಿತಾವಧಿಯ ಕೋವಿಡ್ ನಿರ್ವಹಣೆಗೆ ಖರೀದಿ ಮತ್ತಿತರ ಅವ್ಯವಹಾರಗಳ ಬಗ್ಗೆ ತನಿಖೆಗೆ ಕಾಂಗ್ರೆಸ್ ಸರ್ಕಾರ ತೀರ್ಮಾನಿಸಿ, ಈ ಸಂಬಂಧ ಆದೇಶ ಹೊರಡಿಸಿದೆ. ತನಿಖೆ ನಡೆಸಿ ಅಕ್ರಮಗಳು ಕಂಡು ಬಂದರೆ ನಿಜಾಂಶ ಜನರ ಮುಂದಿಡುತ್ತೇವೆ.

ಯಾರಿಂದಲಾದರೂ ಅವ್ಯವಹಾರ, ತಪ್ಪುಗಳಾಗಿದ್ದರೆ ಕ್ರಮಕೈಗೊಳ್ಳಲು ಸರ್ಕಾರ ಹಿಂಜರಿಯದು. ಆದರೆ ಯತ್ನಾಳ್ ಅವರ ಹತ್ತಿರ ಅವ್ಯವಹಾರಗಳ ಮಾಹಿತಿ ಇರುವುದರಿಂದಲೇ ಕ್ರಮಕ್ಕೆ ಬಿಜೆಪಿ ಹಿಂದೇಟು ಹಾಕುತ್ತಿರಬಹುದು ಎಂದು ಎಂ.ಬಿ.ಪಾಟೀಲ ಅನುಮಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net