ಟ್ರೈನಿ ಡಾಕ್ಟರ್​ ಹತ್ಯೆ ಕೇಸ್​; ಮರಣೋತ್ತರ ಪರೀಕ್ಷಾ ವರದಿಯಲ್ಲಿ ಬಯಲಾಯ್ತು ಆಘಾತಕಾರಿ ಅಂಶ

Violence
Published on

ಕಲ್ಕತ್ತಾ: ರಾಷ್ಟ್ರವ್ಯಾಪಿ ತೀವ್ರ ಸಂಚಲನ ಮೂಡಿಸಿರುವ ಟ್ರೈನಿ ವೈದ್ಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಸಂಬಂಧ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಮುಷ್ಕರದ ಜೊತೆಗೆ ಮಮತಾ ಬ್ಯಾನರ್ಜಿ ರಾಜೀನಾಮೆಗೆ ಹೆಚ್ಚಿನ ಆಗ್ರಹ ಕೇಳಿ ಬರುತ್ತಿದೆ. ಟ್ರೈನಿ ವೈದ್ಯೆಯೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣೋತ್ತರ ಪರೀಕ್ಷೆಯ ವಿವರಗಳು ಬಹಿರಂಗವಾಗಿದ್ದು, ಆಘಾತಕಾರಿ ಅಂಶಗಳು ಕಂಡು ಬಂದಿವೆ.

ಆಗಸ್ಟ್​ 09ರಂದು ಕಲ್ಕತ್ತಾದ ಆರ್​ಜಿಕಾರ್​ ಮಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 31 ವರ್ಷದ ಟ್ರೈನಿ ವೈದ್ಯೆಯೆ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಲಾಗಿತ್ತು. ಈ ವಿಚಾರ ಹೊರಬರುತ್ತಿದ್ದಂತೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ತಪ್ಪಿತಸ್ಥರನ್ನು ಗಲ್ಲಿಗೇರಿಸಬೇಕು ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಲ್ಲಿ ವಿಫಲರಾದ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಬೇಕೆಂದು ಆಗ್ರಹ ಕೇಳಿ ಬರುತ್ತಿದೆ. ಇದೀಗ ಮರಣೋತ್ತರ ಪರೀಕ್ಷೆಯ ಕೆಲ ಅಂಶಗಳು ಬಯಲಾಗಿದ್ದು, ರಾಷ್ಟ್ರವ್ಯಾಪಿ ಮತ್ತಷ್ಟು ಪ್ರತಿಭಟನೆಗಳು ಹೆಚ್ಚಳವಾಗುವ ಸಾಧ್ಯತೆಯಿದೆ.

ಆರ್​.ಜಿ. ಕರ್​ ಮೆಡಿಕಲ್​ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಯುವತಿ ಮೇಲೆ ಅತ್ಯಾಚಾರ ಮಾಡಿ ಬಳಿಕ ಹಲ್ಲೆ ನಡೆಸಿ, ಕೈಗಳಿಂದ ಕತ್ತು ಹಿಸುಕಿ ಕೊಲೆ ಮಾಡಲಾಗಿದೆ. ವಿದ್ಯಾರ್ಥಿನಿಯ ದೇಹದ ಮೇಲೆ 16 ಗಾಯಗಳು ಹಾಗೂ ಆಂತರಿಕವಾಗಿ 9 ಗಾಯಗಳಿವೆ ಎಂಬುದನ್ನು ಮರಣೋತ್ತರ ಪರೀಕ್ಷೆ ಖಚಿತಪಡಿಸಿದೆ.

ವಿದ್ಯಾರ್ಥಿನಿಯ ಜನನಾಂಗದಲ್ಲಿ ಬಲವಂತವಾಗಿ ಗಾಯ ಮಾಡಿರುವ ಗುರುತು ಕಂಡು ಬಂದಿದ್ದು ಲೈಂಗಿಕ ಶೋಷಣೆ ನಡೆದಿರುವುದನ್ನು ಸಾಬೀತುಪಡಿಸಿದೆ. ಕೊಲೆ ಹಾಗೂ ಅತ್ಯಾಚಾರದ ಹಿಂದೆ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಇದ್ದಾರೆ. ಸಂತ್ರಸ್ತೆ ದೇಹದಲ್ಲಿ 150 ಎಂಜಿ ವೀರ್ಯ ಕಂಡು ಬಂದಿದೆ ಎಂದು ಮರಣೋತ್ತರ ಪರೀಕ್ಷಾ ವರದಿ ಹೇಳಿದೆ.

ಸದ್ಯ ಈ ಪ್ರಕರಣದ ತನಿಖೆಯನ್ನು ಸಿಬಿಐ ನಡೆಸುತ್ತಿದ್ದು, ಸುಪ್ರೀಂಕೋರ್ಟ್ ಸಹ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಪಶ್ಚಿಮ ಬಂಗಾಳ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ವೈದ್ಯರು ಹಾಗೂ ಆರೋಗ್ಯ ಸೇವೆಗಳನ್ನು ಒದಗಿಸುವ ಇತರ ವೃತ್ತಿಪರರ ಸುರಕ್ಷತೆಗಾಗಿ ನಿಯಮ ಗಳನ್ನು ರೂಪಿಸಲು 10 ಮಂದಿ ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯನ್ನು ಕೂಡ ಅದು ರಚಿಸಿದೆ. ಈ ಸಮಿತಿಯು ಮೂರು ವಾರಗಳಲ್ಲಿ ಮಧ್ಯಂತರ ವರದಿಯನ್ನು ಸಲ್ಲಿಸಬೇಕಿದೆ. ಅಂತಿಮ ವರದಿ ಸಲ್ಲಿಕೆಗೆ ಎರಡು ತಿಂಗಳ ಗಡುವು ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net