VIDEO| ಚೇಸ್​ ಮಾಡಿಕೊಂಡು ಬಂದು ಕಾರು ಅಡ್ಡಗಟ್ಟಿ ಗೂಂಡಾವರ್ತನೆ; ಆರೋಪಿ ಅರೆಸ್ಟ್​

RoadRage
Published on

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ರೋಡ್​ ರೇಜ್​ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪುಂಡರ ಹಾವಳಿ ಮಿತಿ ಮೀರುತ್ತಿದೆ. ನಗರದ ಸರ್ಜಾಪುರದ ದೊಡ್ಡಕನ್ನೆಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ಈ ವಿಡಿಯೋವನ್ನು ಸಂತ್ರಸ್ತರು ತಮ್ಮ ಮೊಬೈಲ್​ನಲ್ಲಿ ಚಿತ್ರೀಕರಿಸಿಕೊಂಡಿದ್ದಾರೆ. ಘಟನೆ ಸಂಬಂಧ ಬೆಳ್ಳಂದೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ ಕುಡಿದ ಮತ್ತಿನಲ್ಲಿ ಬೈಕ್​ ಸವಾರನೋರ್ವ ವಾಹನ ಚಾಲನೆ ಮಾಡಿದ್ದು, ಅಮಲಿನಲ್ಲಿ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಕಾರಿಗೆ ಡಿಕ್ಕಿ ಹೊಡೆದ ಬಳಿಕ ಒಳಗೆ ಕುಳಿತಿದ್ದವರ ಮೇಲೆ ಹಲ್ಲೆಗೆ ಮುಂದಾಗಿರುವ ವ್ಯಕ್ತಿಯೂ ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿರುವುದನ್ನು ನೋಡಬಹುದಾಗಿದೆ. ಈ ವೇಳೆ ಕಾರಿನೊಳಗಿರುವ ವ್ಯಕ್ತಿ ಕಾರಿನೊಳಗೆ ಮಗುವಿದೆ ಎಂದು ಬೇಡಿಕೊಂಡಿದ್ದಾನೆ. ಆದರೆ ಇದ್ಯಾವುದನ್ನೂ ಕೇಳಿಸದ ಪುಂಡ, ಬಾಗಿಲು ತೆಗೆಯುವಂತೆ ರಂಪಾಟ ಮಾಡಿದ್ದಾನೆ. ಆದರೆ ಬಾಗಿಲು ತರೆಯದೇ ಪತ್ನಿ ಹಾಗೂ ಮಗುವನ್ನು ಸುರಕ್ಷಿತವಾಗಿರಿಸಲು ಪ್ರಯತ್ನಿಸಿದ್ದಾರೆ.

ಕಾರಿನ ಮುಂಭಾಗಕ್ಕೆ ಬಂದ ಪುಂಡ, ಕಾರಿನ ವೈಪರ್ ಕಿತ್ತು ದಾಳಿ ಮಾಡಿದ್ದಾನೆ. ಬಳಿಕ ಕಲ್ಲಿನಿಂದ ದಾಳಿ ಮಾಡಿದ್ದಾನೆ. ಈ ವೇಳೆ ಅಲ್ಲಿದ್ದ ಸ್ಥಳೀಯರು ಆತನನ್ನು ತಡೆಯಲು ಮುಂದಾಗಿದ್ದು, ಆತ ಕಾರಿನ ಮೇಲೆ ಕಲ್ಲನ್ನು ಎತ್ತಿ ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ತೆರಳಿದ್ದಾನೆ. ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಬಂಧಿತನು ಕೋರಮಂಗಲದ ಪಬ್​ ಒಂದರಲ್ಲಿ ಬೌನ್ಸರ್​ ಆಗಿ ಕೆಲಸ ಮಾಡುತ್ತಿದ್ದು, ಈತನ ಹೆಸರು ಅನಿಲ್​ ರೆಡ್ಡಿ ಎಂದು ತಿಳಿದು ಬಂದಿದೆ. ಬಂಧಿತನ ವಿರುದ್ಧ ಕೊಲೆ ಯತ್ನ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net