

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಸಹಜವಾಗಿಯೇ ಕರೊನಾ ಲಸಿಕೆ ಸಂಶೋಧನೆ ಹಾಗೂ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ.
ಸ್ವಾತಂತ್ರ್ಯೋತ್ಸವ ದಿನದಂದೇ ಕರೊನಾ ಲಸಿಕೆ ಬಳಕೆಗೆ ದೊರೆಯುವಬಗ್ಗೆ ಘೋಷಣೆ ಮಾಡಲಿದ್ದಾರೆ ಎಂದೇ ತಿಂಗಳ ಹಿಂದೆ ಭಾರಿ ಚರ್ಚೆ ನಡೆದಿತ್ತು. ಆದರೆ, ಲಸಿಕೆ ಶೀಘ್ರದಲ್ಲಿಯೇ ದೊರೆಯಲಿದೆ ಎಂದು ಪ್ರಕಟಿಸಿದ್ದಾರೆ.
ಸದ್ಯ ಮೂರು ಲಸಿಕೆಗಳು ಬೇರೆ ಬೇರೆ ಹಂತದ ಪ್ರಯೋಗದಲ್ಲಿವೆ. ತಜ್ಞರು ಹಸಿರು ನಿಶಾನೆ ನೀಡಿದ ಕೂಡಲೇ ಉತ್ಪಾದನೆ ಆರಂಭಿಸುವ ಯೋಜನೆ ಸಿದ್ಧವಾಗಿದೆ. ಪ್ರತಿ ಭಾರತೀಯನಿಗೂ ಲಸಿಕೆಯನ್ನು ಹೇಗೆ ತಲುಪಿಸಬೇಕೆಂಬ ಯೋಜನೆಯನ್ನೂ ರೂಪಿಸಲಾಗಿದೆ ಎಂದು ಮೋದಿ ತಿಳಿಸಿದ್ದಾರೆ.
ಸಹಜವಾಗಿಯೇ ಯಾವವು ಈ ಲಸಿಕೆಗಳು ಎಂದು ಕುತೂಹಲ ಮೂಡುವುದು ಸಹಜ. ಈ ಪೈಕಿ ಹೈದರಾಬಾದ್ನ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವಾಕ್ಸಿನ್ ಮಾನವರ ಮೇಲಿನ ಮೊದಲ ಹಂತದ ಪ್ರಯೋಗದಲ್ಲಿ ಸುರಕ್ಷಿತ ಎನಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನೊಂದೆಡೆ, ಗುಜರಾತ್ನ ಅಹ್ಮದಾಬಾದ್ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಝೈಡಸ್ ಕ್ಯಾಡಿಲ್ಲಾ ಕಂಪನಿ ಅಭಿವೃದ್ಧಿ ಪಡಿಸಿರುವ ಲಸಿಕೆ ಕೂಡ ಎರಡನೇ ಹಂತದ ಪರೀಕ್ಷೆಯಲ್ಲಿ ತೊಡಗಿಕೊಂಡಿದೆ. ದೇಶದ 11 ಸ್ಥಳಗಳಲ್ಲಿ ಇದರ ಮೊದಲ ಹಂತದ ಪರೀಕ್ಷೆ ನಡೆಸಲಾಗಿದೆ.
ಇನ್ನೊಂದೆಡೆ, ಪುಣೆಯ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಎರಡನೇ ಹಾಗೂ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಗೆ ಔಷಧ ಮಹಾನಿಯಂತ್ರಕರಿಂದ ಪರವಾನಗಿ ಪಡೆದಿದೆ. ಆಕ್ಸ್ಫರ್ಡ್ ವಿವಿ ತಂಡ ಅಭಿವೃದ್ಧಿಪಡಿಸುತ್ತಿರುವ ಲಸಿಕೆಯನ್ನು ಭಾರತದಲ್ಲಿ ಉತ್ಪಾದಿಸುವ ಹೊಣೆ ಇದರದ್ದಾಗಿದೆ. ಈ ಲಸಿಕೆ ಈಗಾಗಲೇ ಬ್ರಿಟನ್ನಲ್ಲಿ ಮೂರನೇ ಹಂತದ ಪರೀಕ್ಷೆಯನ್ನು 30 ಸಾವಿರ ಜನರ ಮೇಲೆ ನಡೆಸುತ್ತಿದೆ.
ಇದಲ್ಲದೇ, ಇನ್ನೂ ಹಲವು ಕಂಪನಿಗಳು ಲಸಿಕೆ ಅಭಿವೃದ್ಧಿಯ ವಿವಿಧ ಹಂತದಲ್ಲಿವೆ. ಹಲವು ವಿದೇಶಿ ಕಂಪನಿಗಳು ಭಾರತದ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡು ಲಸಿಕೆ ಸಂಶೋಧನೆಯಲ್ಲಿ ತೊಡಗಿವೆ.