

ಅಮೆರಿಕ ಅಧ್ಯಕ್ಷರಾಗಿ ಇಂದು ಪ್ರಮಾಣವಚನ | ಭಾರತ ಭೇಟಿ ನಿರೀಕ್ಷೆ
ನವದೆಹಲಿ: ಅಮೆರಿಕದಲ್ಲಿ ಇಂದಿನಿಂದ ಟ್ರಂಪ್ ಯುಗ. ಕೊರೆಯುವ ಚಳಿ ನಡುವೆಯೂ ಟ್ರಂಪ್ ಬೆಂಬಲಿಗರು ಅಮೆರಿಕದಾದ್ಯಂತ ಸಂಭ್ರಮಿಸುತ್ತಿದ್ದಾರೆ. 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ರಾತ್ರಿ 10.30ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದು, ಪದಗ್ರಹಣದ ಬಳಿಕ ಅವರು ತೆಗೆದುಕೊಳ್ಳಲಿರುವ ನಿರ್ಣಯಗಳ ಮೇಲೆ ಜಗತ್ತಿನ ಕಣ್ಣು ನೆಟ್ಟಿದೆ. ಟ್ರಂಪ್ ನಿರ್ಣಯಗಳು ಹಲವು ದೇಶಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ಟ್ರಂಪ್ 2 ನೇ ಬಾರಿಗೆ ಅಧ್ಯಕ್ಷರಾಗುತ್ತಿರುವ ವೇಳೆಯಲ್ಲೇ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳ ಮೇಲೂ ಪ್ರಭಾವ ಉಂಟಾಗಲಿದೆ. ಭಾರತದ ಮುಂದೆ ಅವಕಾಶಗಳು ಮತ್ತು ಸವಾಲುಗಳೂ ಇದ್ದು, ಇದರ ಸಮರ್ಥ ನಿರ್ವಹಣೆಯ ಆಧಾರದಲ್ಲಿ ಭಾರತ ಮತ್ತು ಅಮೆರಿಕ ಬಾಂಧವ್ಯ ವೃದ್ಧಿಯಾಗಲಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಜತೆಗೆ ಮಾತುಕತೆ ನಡೆಸಿರುವ ಟ್ರಂಪ್, ಅಧಿಕಾರವಧಿಯ ಮೊದಲ 100 ದಿನಗಳಲ್ಲಿಯೇ ಚೀನಾ ಭೇಟಿಗೆ ಉತ್ಸುಕತೆ ತೋರಿದ್ದು, ಭಾರತ ಆಯೋಜಿಸಿರುವ ಕ್ವಾಡ್ ಶೃಂಗದಲ್ಲೂ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಹೀಗಾಗಿ ಟ್ರಂಪ್ ನಡೆ ಕುತೂಹಲ ಮೂಡಿಸಿದೆ. ಟ್ರಂಪ್ ಮೊದಲ ಬಾರಿಗೆ ಅಧ್ಯಕ್ಷರಾಗಿದ್ದಾಗ ಭಾರತ ಮತ್ತು ಅಮೆರಿಕ ನಡುವೆ ಉತ್ತಮ ಬಾಂಧವ್ಯವಿತ್ತು. ಟ್ರಂಪ್ ಮತ್ತು ಮೋದಿ ‘ಹೌಡಿ ಮೋದಿ’ ಮತ್ತು ‘ನಮಸ್ತೆ ಟ್ರಂಪ್’ ಕಾರ್ಯಕ್ರಮಗಳನ್ನು ಆಯೋಜಿಸಿ ಎರಡೂ ದೇಶಗಳ ನಡುವಿನ ಸಂಬಂಧವನ್ನು ವೃದ್ಧಿಸಿದ್ದರು. ಇದೇ ವಿಧದಲ್ಲಿ ಮುಂದಿನ 4 ವರ್ಷದಲ್ಲಿ ಭಾರತ ಮತ್ತು ಮೋದಿ ಜತೆ ಟ್ರಂಪ್ ಸಂಬಂಧ ಮುಂದುವರಿಯುವ ನಿರೀಕ್ಷೆ ಇದೆ.
1.ವಿದೇಶಾಂಗ ಸಚಿವ ಎಸ್. ಜೈಶಂಕರ್, 2. ಚೀನಾ ಉಪಾಧ್ಯಕ್ಷ ಹಾನ್ ಝೆಂಗ್, 3. ಇಟಲಿ ಪ್ರಧಾನಿ ಜಾರ್ಜಿಯಾ ಮೆಲೊನಿ, 4.ಮಾಜಿ ಅಧ್ಯಕ್ಷ ಜೋ ಬೈಡನ್, 5.ಎಲಾನ್ ಮಸ್ಕ್, 6. ಮಾರ್ಕ್ ಜುಕರ್ ಬರ್ಗ್, 7. ಜೆಫ್ ಬಿಜೋಸ್
ಭಾರತ ಇತ್ತೀಚಿನ ವರ್ಷಗಳಲ್ಲಿ ತನ್ನ ರಕ್ಷಣಾ ಅಗತ್ಯಗಳಿಗೆ ರಷ್ಯಾ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಅಮೆರಿಕದೊಂದಿಗೆ ಹೆಚ್ಚಿನ ರಕ್ಷಣಾ ಒಪ್ಪಂದಗಳನ್ನು ಮಾಡಿಕೊಂಡಿದೆ. ಜೋ ಬೈಡನ್ ಅವಧಿಯಲ್ಲೂ ಹಲವು ರಕ್ಷಣಾ ಒಪ್ಪಂದಗಳು ಏರ್ಪಟ್ಟಿದ್ದವು. ಟ್ರಂಪ್ ನ್ಯಾಟೋ ಕಡೆಗೆ ಹೆಚ್ಚು ಒಲವು ಹೊಂದಿದ್ದರೂ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾ ಪ್ರಭಾವವನ್ನು ಕಡಿಮೆ ಮಾಡಲು ಭಾರತದೊಂದಿಗೆ ರಕ್ಷಣಾ ಒಪ್ಪಂದಗಳನ್ನು ಮುಂದುವರಿಸುವ ನಿರೀಕ್ಷೆ ಇದೆ. ಇದೇ ಉದ್ದೇಶದಿಂದಲೇ ಅಮೆರಿಕ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾ ಒಳಗೊಂಡ ಕ್ವಾಡ್ ಒಕ್ಕೂಟವನ್ನು ಟ್ರಂಪ್ ಮೊದಲ ಅವಧಿಯಲ್ಲಿ ಸ್ಥಾಪಿಸಲಾಗಿತ್ತು.
ಟ್ರಂಪ್ ವಲಸೆ ನೀತಿಗಳನ್ನು ಕಠಿಣಗೊಳಿಸುವುದಾಗಿ ಈಗಾಗಲೇ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ಐಟಿ ಕ್ಷೇತ್ರದ ಉದ್ಯೋಗಿಗಳು ಅವಲಂಬಿತವಾಗಿರುವ ಎಚ್-1 ಬಿ ವೀಸಾದ ಮೇಲೂ ಪರಿಣಾಮ ಆಗಬಹುದು. ಮೊದಲ ಅವಧಿಯಲ್ಲಿ ವಿದೇಶಿ ಕಾರ್ವಿುಕರ ಮೇಲೆ ಹೆಚ್ಚು ನಿರ್ಬಂದ ಹೇರುವ ಪ್ರಯತ್ನ ಮಾಡಿದ್ದರು. ಈ ಬಾರಿಯೂ ನಿರ್ಬಂಧ ಹೇರಲು ಮುಂದಾದರೆ ಭಾರತೀಯ ಮೂಲದವರಿಗೆ ಅಭದ್ರತೆ ಹೆಚ್ಚಲಿದೆ. ಜತೆಗೆ ಅಮೆರಿಕಕ್ಕೆ ತೆರಳುವ ವಿದ್ಯಾರ್ಥಿಗಳು ಮತ್ತು ಪದವಿ ಪಡೆದ ಬಳಿಕ ಅಮೆರಿಕದಲ್ಲಿ ಉಳಿಯಲು ಬಯಸುವವರಿಗೂ ಟ್ರಂಪ್ ವಲಸೆ ನೀತಿಗಳು ತೊಡಕಾಗಲಿವೆ.
ಟ್ರಂಪ್ ಚುನಾವಣಾ ಪ್ರಚಾರದ ವೇಳೆ ಹಲವು ದೇಶಗಳ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಕುರಿತು ಮಾತನಾಡಿದ್ದರು. ಟ್ರಂಪ್ ತೆರಿಗೆ ನೀತಿಯಲ್ಲಿ ಬದಲಾವಣೆ ತಂದರೆ ಅಮೆರಿಕ ಮಾರುಕಟ್ಟೆಯ ಮೇಲೆ ಹೆಚ್ಚಾಗಿ ಅವಲಂಬಿತವಾಗಿರುವ ಭಾರತದ ಮಾಹಿತಿ ತಂತ್ರಜ್ಞಾನ (ಐಟಿ), ಔಷಧ ಮತ್ತು ಜವಳಿ ವಲಯದ ಮೇಲೆ ಹೆಚ್ಚಿನ ಪರಿಣಾಮ ಉಂಟಾಗಲಿದೆ. ಟ್ರಂಪ್ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಬಯಸಿದರೆ, ಉತ್ಪಾದನಾ ಕ್ಷೇತ್ರದಲ್ಲಿ ಭಾರತಕ್ಕೆ ಲಾಭ ಉಂಟಾಗುವ ನಿರೀಕ್ಷೆ ಇದೆ. ಭಾರತ ಮತ್ತು ಅಮೆರಿಕ ನಡುವೆ 2022ರಲ್ಲಿ ಒಟ್ಟು 191 ಬಿಲಿಯನ್ ಡಾಲರ್ ವಹಿವಾಟು ನಡೆದಿತ್ತು. ಇದರಲ್ಲಿ ಭಾರತ 73 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ರಫ್ತು ಮಾಡಿದ್ದರೆ, 118.9 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳನ್ನು ಆಮದು ಮಾಡಿಕೊಂಡಿತ್ತು. ಈ ಮೂಲಕ ಭಾರತ, ಅಮೆರಿಕದ 9ನೇ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿತ್ತು.