

ಮುಂಬೈ: ಗುಜರಾತ್ ಟೈಟನ್ಸ್ ತಂಡದ ನಾಯಕನಾಗಿ ಸತತ ಎರಡು ವರ್ಷಗಳ ಕಾಲ ಆಟವಾಡಿದ ಹಾರ್ದಿಕ್ ಪಾಂಡ್ಯ, ತಂಡದಲ್ಲಿ ಮುಂದುವರೆಯುವ ಆಸಕ್ತಿಯನ್ನು ಕಳೆದುಕೊಂಡಿದ್ದು, ಇದೀಗ ಮುಂಬೈ ಇಂಡಿಯನ್ಸ್ ಟೀಮ್ಗೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಈ ಬಗ್ಗೆ ಟೈಟನ್ಸ್ ತಂಡ ಕೂಡ ದೃಢಪಡಿಸಿದೆ. ಪಾಂಡ್ಯ ಮುಂಬೈಗೆ ಮತ್ತೊಮ್ಮೆ ಬಂದಿದ್ದು ಕ್ರಿಕೆಟ್ ಅಭಿಮಾನಿಗಳಿಗೆ ಸಂತಸ ನೀಡಿದ್ದೆ ಆದ್ರೂ ಸಾಮಾಜಿಕ ಜಾಲತಾಣಗಳಲ್ಲಿ ಈ ನಿರ್ಧಾರ ಕುರಿತು ತೀವ್ರ ಅಸಮಾಧಾನ ಸಹ ವ್ಯಕ್ತವಾಗಿದೆ.
ಗುಜರಾತ್ ಟೈಟನ್ಸ್ ತೊರೆದ ಹಾರ್ದಿಕ್ ಪಾಂಡ್ಯ ಮುಂದಿನ ಎರಡು ವರ್ಷಗಳ ಕಾಲ ಅದೇ ತಂಡದಲ್ಲಿ ನಾಯಕನಾಗಿ ಮುಂದುವರೆಯಬಹುದಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನು ಕೆಲವರು ಮುಂಬೈ ಇಂಡಿಯನ್ಸ್ಗೆ ವಾಪಾಸ್ ಬಂದದ್ದು ಮತ್ತಷ್ಟು ಖುಷಿ ತಂದಿದೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪೋಸ್ಟ್ ಹಂಚಿಕೊಂಡ ಹಾರ್ದಿಕ್, "ಮನೆ ಮುಂಬೈ ಇಂಡಿಯನ್ಸ್ ಮನೆ" ಎಂಬ ಶೀರ್ಷಿಕೆ ಕೊಟ್ಟು ತಮ್ಮ ಅನುಯಾಯಿಗಳೊಂದಿಗೆ ಶೇರ್ ಮಾಡಿಕೊಂಡಿದ್ದಾರೆ.
ಸದ್ಯ ಐಪಿಎಲ್ 2024ರ ಆವೃತ್ತಿಗೂ ಮುನ್ನವೇ ಕ್ಯಾಪ್ಟನ್ ವಿಚಾರ ತೀವ್ರ ಚರ್ಚೆಯಾಗುತ್ತಿದ್ದು, ಮುಂಬೈ ಇಂಡಿಯನ್ಸ್ಗೆ ರೋಹಿತ್ ಶರ್ಮಾ, ಹಾರ್ದಿಕ್ ಪಾಂಡ್ಯ ಹಾಗೂ ಜಸ್ಪ್ರಿತ್ ಬುಮ್ರಾ ಈ ಮೂವರಲ್ಲಿ ಯಾರು ನಾಯಕನ ಸ್ಥಾನ ಅಲಂಕರಿಸಲಿದ್ದಾರೆ ಎಂಬ ಗೊಂದಲಗಳು ಬುಗಿಲೆದ್ದಿವೆ. ನೆಟ್ಟಿಗರು ಎಂದಿನಂತೆ ಈ ಬಾರಿಯೂ ರೋಹಿತ್ ಕ್ಯಾಪ್ಟನ್ ಆಗಿ ಮುಂದುವರೆಯಲಿದ್ದಾರೆ ಎಂದು ಹೇಳಿದರೆ, ಕೆಲವರು ಪಾಂಡ್ಯ ಆಯ್ಕೆಯಾಗುವುದು ಖಚಿತ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಿಗ್ ಬಾಸ್ ಬೆಡಗಿ ಪವಿ ಪೂವಪ್ಪ ಹಾಟ್ ಫೋಟೋಗಳು
ಈ ಎಲ್ಲದರ ನಡುವೆ ಟೀಮ್ ಇಂಡಿಯಾ ಮತ್ತು ಮುಂಬೈ ಇಂಡಿಯನ್ಸ್ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪರೋಕ್ಷವಾಗಿ ಹಾಕಿರುವ ಸ್ಟೋರಿಯೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಹೇಳಿಕೆ ಯಾರಿಗೆ ಸಲ್ಲುತ್ತದೆ? ಯಾರಿಗೆ ಅನ್ವಯಿಸಲಿ ಎಂದು ಹೇಳಿರಬಹುದು? ಎಂಬ ಗೊಂದಲಗಳನ್ನು ಸೃಷ್ಟಿಸಿದೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬುಮ್ರಾ 'ಮೌನವೇ ಅತ್ಯುತ್ತಮ ಉತ್ತರ' ಎಂದು ಬರೆದಿರುವ ಸ್ಟೋರಿ ಹಾಕಿಕೊಂಡಿದ್ದಾರೆ. ಈ ಹೇಳಿಕೆ ಮುಂಬೈ ತಂಡದ ಮೇಲಿನ ಅಸಮಾಧಾನ ಇರಬಹುದೇ? ಎಂಬ ಅನುಮಾನಗಳು ಹುಟ್ಟಿಕೊಂಡಿದ್ದು, ಬುಮ್ರಾ ಮುಂಬೈ ಇಂಡಿಯನ್ಸ್ ತಂಡವನ್ನು ಅನ್ಫಾಲೋ ಕೂಡ ಮಾಡಿದ್ದಾರೆ. ಈ ಬೆಳವಣಿಗೆಗಳು ಜಸ್ಪ್ರೀತ್ ಅವರ ಬೇಸರ ತಂಡದ ಮೇಲೆ ಇರುವುದು ಖಚಿತ ಎಂಬುದನ್ನು ಪರೋಕ್ಷವಾಗಿ ಒತ್ತಿ ಹೇಳುವಂತಿದೆ,(ಏಜೆನ್ಸೀಸ್).