ಭವ್ಯ ಪರಂಪರೆ ಹೊಂದಿದ ನಾಡು ಕರ್ನಾಟಕ: ರಾಯಭಾರಿ ಬಿನಾಯ್ ಎಸ್.ಪ್ರಧಾನ್ ಅಭಿಮತ - ತಾಂಜಾನಿಯಾದಲ್ಲಿ ಕನ್ನಡ ಕಲರವ

kannada rajyotsava
Published on

ದಾರ್ ಈ ಸಲಾಮ್(ತಾಂಜಾನಿಯಾ): ಕರ್ನಾಟಕವು ಭವ್ಯವಾದ ಇತಿಹಾಸ ಹೊಂದಿದ್ದು, ವಿಶ್ವದಲ್ಲೇ ಪ್ರಖ್ಯಾತಿ ಪಡೆದ ವಿಜಯನಗರ ಸಾಮ್ರಾಜ್ಯ ಆಳಿದ ಸಂಪದ್ಭರಿತ ನಾಡಾಗಿದೆ ಎಂದು ತಾಂಜಾನಿಯಾದ ಭಾರತೀಯ ರಾಯಭಾರಿ ಬಿನಾಯ್ ಎಸ್.ಪ್ರಧಾನ್ ತಿಳಿಸಿದರು.

ತಾಂಜಾನಿಯಾದ ವಾಣಿಜ್ಯ ರಾಜಧಾನಿಯೆಂದೇ ಪ್ರಸಿದ್ಧಿಪಡೆದಿರುವ ದಾರ್ ಈ ಸಲಾಮ್​ನ ಟೆಂಪಲ್ ಸ್ಟ್ರೀಟ್ ನ ಭಾಟಿಯಾ ಸಮಾಜ ಆವರಣದಲ್ಲಿ ಕಾವೇರಿ ಕನ್ನಡ ಸಂಘ ಯೋಜಿಸಿದ್ದ ಕನ್ನಡ ರಾಜ್ಯೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಕರ್ನಾಟಕ ಹೊರತುಪಡಿಸಿದರೆ ಇಷ್ಟು ಅದ್ಭುತವಾಗಿ ನಾಡ ಉತ್ಸವ ಆಚರಣೆ ವಿಶ್ವದ ಬೇರೆ ಕಡೆ ನಡೆಯುವುದು ಅಪರೂಪ. ಕನ್ನಡ ನಾಡು ಪ್ರಾಚೀನ ಸಂಸ್ಕೃತಿ ಮತ್ತು ಭವ್ಯ ಪರಂಪರೆಯಿಂದ ಕೂಡಿದೆ. ಕನ್ನಡ ಪುರಾತನ ಮತ್ತು ಹೆಮ್ಮೆಯ ಭಾಷೆಯಾಗಿದೆ ಎಂದರು.

ವಿಜಯನಗರದ ಅರಸರು ರಾಜಧಾನಿ ಹಂಪಿಯಲ್ಲಿ ಅಮೋಘವಾ ಶಿಲ್ಪ ಕಲೆಯ ದೇಗುಲಗಳನ್ನು ನಿರ್ಮಿಸಿದ್ದಾರೆ. ಹಂಪಿಯು ಸಂಶೋಧನೆ ಮತ್ತು ಅಧ್ಯಯನಕ್ಕೆ ಹೇಳಿ ಮಾಡಿಸಿದ ತಾಣವಾಗಿಯೂ ಗುರುತಿಸಿಕೊಂಡಿದೆ ಎಂದು ಗುಣ ಗಾನ ಮಾಡಿದರು.

ದಾರ್​ ಈ ಸಲಾಮ್​ನ ಕಾವೇರಿ ಕನ್ನಡ ಸಂಘದ ಅಧ್ಯಕ್ಷ ಕಲ್ಯಾಣ್ ಕುಮಾರ್ ಮಾತನಾಡಿ, ಕನ್ನಡ ಚಲನ ಚಿತ್ರ ರಂಗದ ಮೇರು ನಟ ರೆಬೆಲ್ ಸ್ಟಾರ್ ಅಂಬರೀಷ್ ಕೇವಲ ಕರ್ನಾಟಕ ಮತ್ತು ಕನ್ನಡ ಚಿತ್ರ ರಂಗಕ್ಕೆ ಸೀಮತರಾದ ನಟರಲ್ಲ. ಭಾರತೀಯ ಚಿತ್ರರಂಗ ಕಂಡ ಅಪರೂಪದ ಕಲಾವಿದರಾಗಿದ್ದರು ಎಂದು ಹೇಳಿದರು.

ರೆಬೆಲ್ ಸ್ಟಾರ್ ಅವರ ಆಪ್ತ ಗೆಳೆಯ ಅರ್.ಮಂಜುನಾಥ್ ಚವಾಣ್ ಮಾತನಾಡಿ, ನಾಡಿನ ದಂತ ಕಥೆ ಡಾ. ರಾಜ್ ಕುಮಾರ್ ಆಗಿದ್ದು, ಅವರ ಕನಸಿನ ಕೂಸಾದ ಕನ್ನಡ ಚಲನ ಚಿತ್ರ ಕಲಾವಿದರ ಸಂಘದ ಸ್ವಂತ ಕಟ್ಟಡ ನನಸು ಮಾಡಿದ ಶ್ರೇಯಸ್ಸು ರೆಬೆಲ್ ಸ್ಟಾರ್ ಅಂಬರೀಷ್ ಅವರಿಗೆ ಸಲ್ಲುತ್ತದೆ. ಇಡೀ ಭಾರತೀಯ ಚಲನ ಚಿತ್ರ ರಂಗಕ್ಕೆ ಇದೊಂದು ಮಾದರಿ ಕೆಲಸವಾಗಿದೆ. ಸ್ನೇಹ, ಪರೋಪಕಾರ, ನಿಸ್ವಾರ್ಥ ಸೇವೆಗೆ ಮತ್ತೊಂದು ಹೆಸರು ಅಂಬರೀಷ್ ಎಂದು ನುಡಿದರು.

ಬಾಲಚಂದ್ರ ವಿರಚಿತ "ಅಂಬರೀಷ್ ದಿಲ್ ದಾರನ ಅಂತ ರಂಗ" ಆತ್ಮ ಕಥನದ ಪ್ರತಿಯನ್ನು ಕಾವೇರಿ ಕನ್ಸಂನಡ ಸಂಘದ ಅಧ್ಯಕ್ಷ ಕಲ್ಯಾಣ್ ಕುಮಾರ್ ಅವರಿಗೆ ಅರ್.ಮಂಜುನಾಥ್ ಚವಾಣ್ ಹಸ್ತಾಂತರಿಸಲಾಯಿತು.

ನಾಡಿನ ಕಲೆ, ಸಂಸ್ಕೃತಿ, ಭಾಭಾನ ಮೆರೆಯುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಗಡಿನಾಡ ಕನ್ನಡ ಬಂಧುಗಳು ಅಂಬರೀಷ್ ನುಡಿ ನಮನ ಸಲ್ಲಿಸುವುದರೊಂದಿಗೆ ಸಂಭ್ರಮದ ರಾಜ್ಯೋತ್ಸವದ ಕಾರ್ಯಕ್ರಮ ಸಂಪನ್ನವಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net