ಚುನಾವಣಾ ನೀತಿ ಸಂಹಿತೆ ಜಾರಿಗೆ ಬರುವ ಮುನ್ನ : ಬಂಗಾಳದಲ್ಲಿ ವೇತನ ಹೆಚ್ಚಳ, ತಮಿಳುನಾಡಿನಲ್ಲಿ ಸಾಲ ಮನ್ನಾ !

Mamatha
Published on

ಕೊಲ್ಕತಾ/ಚೆನ್ನೈ: ಮತದಾನದ ದಿನಾಂಕವನ್ನು ಘೋಷಿಸಿದ ತಕ್ಷಣ ಮಾದರಿ ನೀತಿ ಸಂಹಿತೆಯು ಜಾರಿಗೆ ಬರುವುದರಿಂದ, ಆಡಳಿತಾರೂಢ ಸರ್ಕಾರಗಳು ಯಾವುದೇ ಹೊಸ ಕಲ್ಯಾಣ ಯೋಜನೆಗಳನ್ನು ಘೋಷಿಸಬಾರದು ಎಂಬ ನಿಯಮವಿದೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲೆ ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಸರ್ಕಾರಗಳು ಇಂದು ತಮ್ಮ ಮತದಾರರನ್ನು ಆಕರ್ಷಿಸುವ ಕೊನೆಯ ಹಂತದ ಪ್ರಯತ್ನವನ್ನು ಮಾಡಿವೆ. ಚುನಾವಣೆ ಘೋಷಿಸಲು ಇಂದು ನಿಗದಿಯಾಗಿದ್ದ ಸಮಯಕ್ಕೆ ಸ್ವಲ್ಪ ಹೊತ್ತು ಮುಂಚೆ ಎರಡು ಪ್ರಮುಖ ನಿರ್ಧಾರಗಳನ್ನು ಎರಡೂ ರಾಜ್ಯದ ಮುಖ್ಯಮಂತ್ರಿಗಳು ಪ್ರಕಟಿಸಿದ್ದಾರೆ.

ಚುನಾವಣಾ ಆಯೋಗವು ಇಂದು ಸಂಜೆ 4.30 ಕ್ಕೆ ಈ ಎರಡೂ ರಾಜ್ಯಗಳೊಂದಿಗೆ ಕೇರಳ, ಪುದುಚೇರಿ ಮತ್ತು ಅಸ್ಸಾಂಗಳ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಘೋಷಿಸುವುದಾಗಿ ನಿಗದಿಯಾಗಿತ್ತು. ಮಧ್ಯಾಹ್ನ 3.27 ಕ್ಕೆ ನಗರ ಪ್ರದೇಶಗಳ ದಿನಗೂಲಿ ಕಾರ್ಮಿಕರಿಗೆ ವೇತನದಲ್ಲಿ ಹೆಚ್ಚಳವನ್ನು ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಟ್ವಿಟರ್ ಮೂಲಕ ಘೋಷಿಸಿದರು. ಅತ್ತ ಕೆಲವು ಗಂಟೆಗಳ ಮುನ್ನ ತಮಿಳುನಾಡು ಸಿಎಂ ಎಡಪ್ಪಾಡಿ ಈ.ಪಳನಿಸ್ವಾಮಿ ಬಡವರಿಗೆ ಮತ್ತು ರೈತರಿಗೆ ಸಹಕಾರಿ ಬ್ಯಾಂಕ್​ಗಳು ನೀಡಿರುವ 6 ಸವರನ್​​ವರೆಗಿನ ಚಿನ್ನದ ಸಾಲಗಳನ್ನು ಮನ್ನಾ ಮಾಡುವುದಾಗಿ ಘೋಷಿಸಿದರು.

ಪಶ್ಚಿಮ ಬಂಗಾಳ ನಗರ ಉದ್ಯೋಗ ಯೋಜನೆಯ ಅಡಿಯಲ್ಲಿ ದಿನಗೂಲಿ ಕಾರ್ಮಿಕರಿಗೆ ವೇತನವನ್ನು ಹೆಚ್ಚಿಸಿರುವ ಬ್ಯಾನರ್ಜಿ, ಇದರಿಂದ ಒಟ್ಟು 56,500 ಕಾರ್ಮಿಕರಿಗೆ ಉಪಯೋಗವಾಗಲಿದೆ. ಈ ಹೆಚ್ಚಳವು 2021 ಮತ್ತು 2022 ರ ಹಣಕಾಸು ವರ್ಷಗಳೆರಡಕ್ಕೂ ಅನ್ವಯವಾಗಲಿದೆ ಎಂದಿದ್ದಾರೆ.

ಆರ್ಥಿಕತೆಯು ಇನ್ನೂ ಚೇತರಿಸಿಕೊಳ್ಳುತ್ತಿದೆ ಎಂದು ಸಿಎಂ ಪ್ರಕಟಿಸಿರುವ ಸಾಲ ಮನ್ನಾ ಯೋಜನೆಯ ಕೆಳಗೆ ಲಾಕ್​ಡೌನ್​ ಸಮಯದಲ್ಲಿ ಮೂರು ತಿಂಗಳ ಅವಧಿಗೆ ರೂ. 25,000 ದಿಂದ 1 ಲಕ್ಷದವರೆಗೆ ತೆಗೆದುಕೊಂಡಿರುವ ಚಿನ್ನದ ಸಾಲಗಳು ಮನ್ನಾ ಆಗಲಿವೆ. ಇದರ ಜೊತೆಗೆ, ಮತದಾನದ ದಿನಾಂಕ ಘೋಷಣೆಗೆ ಕೆಲವೇ ನಿಮಿಷಗಳ ಮೊದಲು, ತಮಿಳುನಾಡು ವಿಧಾನಸಭೆಯು ಹಿಂದುಳಿದ ವರ್ಗಗಳಿಗಿರುವ ಮೀಸಲಾತಿಯಲ್ಲಿ ವನ್ನಿಯಾರ್ ಸಮುದಾಯಕ್ಕೆ 10.5% ಮೀಸಲಾತಿ ನೀಡುವ ಮಸೂದೆಯನ್ನು ಸಹ ಅಂಗೀಕರಿಸಿದೆ.(ಏಜೆನ್ಸೀಸ್)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net