

ನೋಯ್ಡಾ: ಇತ್ತೀಚಿನ ವರ್ಷಗಳಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಅಂತಾರಾಷ್ಟ್ರೀಯತ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಹಲವು ತಂಡಗಳಿಗೆ ಮಣ್ಣು ಮುಕ್ಕಿಸಿದೆ ಎಂದರೆ ತಪ್ಪಾಗಲಾರದು. 2017ರಲ್ಲಿ ಐಸಿಸಿಯಿಂದ ಮಾನ್ಯತೆ ಪಡೆದ ಅಫ್ಘಾನಿಸ್ತಾನ ಕ್ರಿಕೆಟ್ ತಂಡವನ್ನು ಕ್ರೀಡಾವಲಯದಲ್ಲಿ ಅಂಡರ್ಡಾಗ್ಸ್ ಎಂದು ಕರೆಯಲಾಗುತ್ತಿತ್ತು. 09ನೇ ಆವೃತ್ತಿಯ ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್, ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡಗಳನ್ನು ಮಣಿಸಿ ಸೆಮಿಫೈನಲ್ಗೇರಿದ ಅಫ್ಘಾನಿಸ್ತಾನ ತಂಡದ ಯಶಸ್ಸಿನಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಬಹುದಾಗಿದೆ.
ಅಫ್ಘಾನಿಸ್ತಾನದ ಯಶಸ್ಸಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರಮುಖ ಪಾತ್ರ ವಹಿಸಿದೆ ಎಂದು ಹೇಳಿದರೆ ತಪ್ಪಾಗಲಾರದು. ಏಕೆಂದರೆ ಈ ಹಿಂದೆ ಕ್ರಿಕೆಟ್ ಶಿಶು ಎಂದು ಕರೆಯಲ್ಪಡುತ್ತಿದ್ದ ಅಫ್ಘಾನಿಸ್ತಾನ ತಂಡಕ್ಕೆ ಬಿಸಿಸಿಐ ಪೋಷಿಸಿದ ಪರಿಣಾಮ ಇಂದು ಬಲಿಷ್ಠ ತಂಡಗಳಿಗೆ ಸೋಲುಣಿಸುವಷ್ಟು ಬೆಳೆದಿದ್ದು, ಇದಕ್ಕೆ ಬಿಸಿಸಿಐ ನೀಡಿರುವ ಬೆಂಬಲವೇ ಕಾರಣ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಮುಖ ಕಾರಣಗಳು ಹೀಗಿವೆ.
ಅಫ್ಘಾನಿಸ್ತಾನ ಕ್ರಿಕೆಟ್ ತಂಡಕ್ಕೆ ಬಿಸಿಸಿಐ ಗ್ರೇಟರ್ ನೋಯ್ಡಾದಲ್ಲಿರುವ ಶಹೀದ್ ವಿಜಯ್ ಸಿಂಗ್ ಪಥಿಕ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ಅನ್ನು 2015ರಲ್ಲಿ ತಾತ್ಕಾಲಿಕವಾಗಿ ಬಿಟ್ಟುಕೊಟ್ಟ ಪರಿಣಾಮ ತನ್ನ ಹೋಮ್ ಗ್ರೌಂಡ್ಅನ್ನು ಶಾರ್ಜಾದಿಂದ ಭಾರತಕ್ಕೆ ಸ್ಥಳಾಂತರಿಸಿತು. ಬಳಿಕ 2017ರಲ್ಲಿ ಐರ್ಲೆಂಡ್ ವಿರುದ್ಧ ಆಂತರಾಷ್ಟ್ರೀಯ ಸರಣಿಯನ್ನು ಆಡಿತ್ತು. ಇದೀಗ ಅಫ್ಘಾನಿಸ್ತಾನ ತಂಡವು ತನಗೆ ನೀಡಲಾದ ಕ್ರೀಡಾಂಗಣದ ಬಗ್ಗೆ ಅಪಸ್ವರ ಎತ್ತಿದ್ದು, ಬಿಸಿಸಿಐ ವಿರುದ್ಧ ಕಿಡಿಕಾರಿದೆ.
ಅಫ್ಘಾನಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧ ಏಕೈಕ ಟೆಸ್ಟ್ ಸರಣಿ ಆಡಲು ಗ್ರೇಟರ್ ನೋಯ್ಡಾಗೆ ಬಂದಿಳಿದಿದ್ದು, ಮೊದಲ ದಿನದ ಆಟಕ್ಕೆ ಮಳೆ ಅಡ್ಡಿಪಡಿಸಿದೆ. ಇದಕ್ಕೆ ಸಂಬಂಧಿಸಿದಂತೆ ಅಪಸ್ವರ ತೆಗೆದಿರುವ ಅಫ್ಘಾನಿಸ್ತಾನ ಕ್ರಿಕೆಟ್ ತಂಡವು ಇಲ್ಲಿ ಯಾವುದೇ ಸೌಲಭ್ಯಗಳಿಲ್ಲ. ನಾವು ಮತ್ತೆ ಇಲ್ಲಿಗೆ ಬರುವುದಿಲ್ಲ. ನಮ್ಮ ಆದ್ಯತೆ ಲಖನೌ ಕ್ರೀಡಾಂಗಣವಾಗಿದ್ದು, ಇಲ್ಲಿ ಯಾವುದೇ ಮೂಲಭೂತ ಸೌಕರ್ಯಗಳನ್ನು ನೀಡಲಾಗಿಲ್ಲ. ಆಟಗಾರರು ಇಲ್ಲಿನ ಸೌಲಭ್ಯಗಳ ಬಗ್ಗೆ ಬೇಸರಗೊಂಡಿದ್ದಾರೆ ಎಂದು ಅಫ್ಘನ್ ಕ್ರಿಕೆಟ್ ಮಂಡಳಿಯ ಸದಸ್ಯರು ಬಿಸಿಸಿಐ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ನೋಯ್ಡಾ ಕ್ರೀಡಾಂಗಣದಲ್ಲಿ ಒಳಚರಂಡಿ ಸಾಕಷ್ಟು ಕಳಪೆ ಗುಣಮಟ್ಟದಾಗಿದ್ದು, 2017ರಲ್ಲಿ ಬಿಸಿಸಿಐ ಈ ಕ್ರೀಡಾಂಗಣವನ್ನು ನಿಷೇಧಿಸಿತ್ತು. ಅಫ್ಘಾನಿಸ್ತಾನವು ಭಾರತದಲ್ಲಿ ಟೆಸ್ಟ್ ಪಂದ್ಯವನ್ನು ಆಯೋಜಿಸುತ್ತಿರುವುದು ಇದು ಮೂರನೇ ಬಾರಿ. 2019 ರಲ್ಲಿ ಐರ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಕ್ರಮವಾಗಿ ಡೆಹ್ರಾಡೂನ್ ಮತ್ತು ಲಕ್ನೋದಲ್ಲಿ ಆಯೋಜಿಸಲಾಗಿತ್ತು.