

ಮೈಸೂರು; ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಜಪಡೆಯ ಆಗಮನದೊಂದಿಗೆ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಸಂಭ್ರಮ ಆರಂಭಗೊಂಡಿದೆ. ಈಗಾಗಲೇ 2025ರ ದಸರಾ ಮಹೋತ್ಸವದಲ್ಲಿ ಭಾಗಿಯಾಗಲು ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಅರಮನೆ ಪ್ರವೇಶಿಸಿದ್ದು, ಇಂದು (ಆ.11) ದಸರಾ ಆನೆಗಳ ತೂಕವನ್ನು ಪರಿಶೀಲನೆ ನಡೆಸಲಾಯಿತು.
2017ರ ದಸರಾ ಹಾಗೂ ಕಳೆದ ನಾಲ್ಕು ವರ್ಷದಿಂದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುತ್ತಿರುವ ‘ಭೀಮ’ ದಾಖಲೆ ಪ್ರಮಾಣದಲ್ಲಿ ಬಲ ಹೆಚ್ಚಿಸಿಕೊಂಡಿದ್ದಾನೆ. 2022ರ ದಸರಾದಲ್ಲಿ ಸುಮಾರು 4 ಸಾವಿರ ಕೆ.ಜಿ ತೂಗುತ್ತಿದ್ದವ, ವರ್ಷದಿಂದ ವರ್ಷಕ್ಕೆ ತೂಕ ಹೆಚ್ಚಿಸಿಕೊಳ್ಳುತ್ತಿದ್ದಾನೆ. ಇದೀಗ 5.5 ಟನ್ ಅಂಚಿಗೆ ಬಂದಿದ್ದಾನೆ. 25 ವರ್ಷದ ಕಿರಿಯ ಆನೆಯಾಗಿದ್ದರೂ ತೂಕದಲ್ಲಿ ಬಲಶಾಲಿಯಾಗಿದ್ದಾನೆ.
ಈ ಬಾರಿಯೂ ದಸರಾ ಗಜಪಡೆಯ ತೂಕದಲ್ಲಿ ಕ್ಯಾಪ್ಟನ್ ಅಭಿಮನ್ಯುನನ್ನು ಭೀಮ ಮೀರಿಸಿದ್ದು ಹೆಚ್ಚು ಭಾರ ತೂಗಿದ್ದಾನೆ. ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ದಸರಾ ಗಜಪಡೆಯ ಆನೆಗಳ ಆರೋಗ್ಯದ ಬಗ್ಗೆ ತಿಳಿದುಕೊಳ್ಳಲು ತೂಕ ಪರಿಶೀಲನೆ ನಡೆಸಲಾಯಿತು. ದಸರಾ ಸಂದರ್ಭದಲ್ಲಿ ಈ ಪ್ರಕ್ರಿಯೆಯು ಅನೇಕ ವರ್ಷಗಳಿಂದ ನಡೆದು ಬಂದಿದೆ. ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಮ್ ಅಂಡ್ ಕೊ ಎಲೆಕ್ಟ್ರಾನಿಕ್ ತೂಕ ಮಾಪನ ಕೇಂದ್ರದಲ್ಲಿ ಗಜಪಡೆಯ ತೂಕ ಪರಿಶೀಲಿಸಲಾಯಿತು. ತೂಕ ಮಾಡಿದ ಆನೆಗಳ ಪೈಕಿ ಗಜಪಡೆಯ ಭವಿಷ್ಯದ ಕ್ಯಾಪ್ಟನ್ ಎಂದೇ ಹೆಸರಾಗಿರುವ ಭೀಮ ಅತ್ಯಂತ ಹೆಚ್ಚು ಬಲಶಾಲಿಯಾಗಿದ್ದಾನೆ. ಎರಡನೇ ಸ್ಥಾನದಲ್ಲಿ ಕ್ಯಾಪ್ಟನ್ ಅಭಿಮನ್ಯು ಆನೆ ಇದೆ.
ಕಾವೇರಿ -3010 ಕೆ.ಜಿ.
ಲಕ್ಷ್ಮಿ - 3730 ಕೆ.ಜಿ. ಕೆ.ಜಿ.
ಕಂಜನ್ - 4880 ಕೆ.ಜಿ.
ಏಕಲವ್ಯ - 5305 ಕೆ.ಜಿ.
ಮಹೇಂದ್ರ - 5120 ಕೆ.ಜಿ.
ಧನಂಜಯ್ - 5310 ಕೆ.ಜಿ.
ಪ್ರಶಾಂತ - 5110 ಕೆ.ಜಿ.
ಅಭಿಮನ್ಯು - 5360 ಕೆ.ಜಿ
ಭೀಮ - 5465 ಕೆ.ಜಿ.‘