

Weight loss : ತೂಕ ಕಳೆದುಕೊಳ್ಳುವುದು ಸುಲಭದ ಮಾತಲ್ಲ. ಅದಕ್ಕಾಗಿ ಸಾಕಷ್ಟು ಶ್ರಮ ಪಡಬೇಕಾಗುತ್ತದೆ. ಅಲ್ಲದೆ, ಕೆಲವೊಂದು ತ್ಯಾಗ ಮಾಡಬೇಕಾಗುತ್ತದೆ. ದೃಢಸಂಕಲ್ಪ ಇದ್ದರೆ ಮಾತ್ರ ತೂಕವನ್ನು ಇಳಿಸಿಕೊಳ್ಳಬಹುದು. ತೂಕ ಇಳಿಸಿಕೊಳ್ಳಲೆಂದು ಜಿಮ್ಗೆ ಹೋಗುವುದು ಮತ್ತು ಡಯಟ್ ಫಾಲೋ ಮಾಡುವುದು ಇಂದು ಸಾಮಾನ್ಯ. ಆದರೆ, ಎಷ್ಟೇ ಕಸರತ್ತು ಮಾಡಿದರೂ ಕೆಲವರು ಫಲಿತಾಂಶವನ್ನು ಪಡೆಯುವುದಿಲ್ಲ. ಏಕೆಂದರೆ ಅವರು ಯಾವುದನ್ನು ವ್ಯವಸ್ಥಿತವಾಗಿ ಮಾಡುವುದಿಲ್ಲ. ಆದರೆ, ಸ್ನೇಹಾ ಅಗರ್ವಾಲ್ ಅವರ ತೂಕ ಇಳಿಕ ಪಯಣ ನಿಮಗೆ ಸ್ಫೂರ್ತಿ ನೀಡುವುದಂತೂ ಖಂಡಿತ.
ಯಾವುದೇ ವರ್ಕೌಟ್ ಮಾಡದೇ ಮಧ್ಯಂತರ ಉಪವಾಸ ( ಇಂಟರ್ಮಿಟೆಂಟ್ ಫಾಸ್ಟಿಂಗ್ ) ದಂತಹ ಸರಳ ಮತ್ತು ಪರಿಣಾಮಕಾರಿ ಡಯಟ್ ಪ್ಲಾನ್ ಅನುಸರಿಸುವ ಮೂಲಕ ಸ್ನೇಹಾ ಅವರು ಬರೋಬ್ಬರಿ 33 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರೆ.
ಸ್ನೇಹಾ ಅವರು 10 ಗಂಟೆಯ ಅವಧಿಯ ನಡುವೆ ತಮ್ಮ ಊಟವನ್ನು ಮುಗಿಸಿ, ಉಳಿದ 14 ಗಂಟೆ ಯಾವುದೇ ಆಹಾರವನ್ನು ಸೇವಿಸುತ್ತಿರಲಿಲ್ಲ. ಬೆಳಗ್ಗೆ 9 ಗಂಟೆಗೆ ಆ್ಯಪಲ್ ಸೈಡರ್ ಮತ್ತು ದಾಲ್ಚಿನ್ನಿ ಪಾನೀಯ, 10 ಗಂಟೆಗೆ ಮೊಟ್ಟೆಯ ಬಿಳಿ ಭಾಗ, ಟೋಸ್ಟ್ ಮತ್ತು ಟೀ, ಮಧ್ಯಾಹ್ನ 12.30ಕ್ಕೆ ಸಮತೋಲಿತ ಶಕ್ತಿಯುತ ಊಟ, ಸಂಜೆ 4 ಗಂಟಗೆ ಚಟ್ನಿ ಭೇಲ್, 5.30ಕ್ಕೆ ಹಣ್ಣಿನ ಸಲಾಡ್ ಮತ್ತು ರಾತ್ರಿ 7 ಗಂಟೆಗೆ ತರಕಾರಿ ಮತ್ತು ಬೇಯಿಸಿದ ಚಿಕನ್ ತಿನ್ನುತ್ತಿದ್ದರು. ಉಳಿದ ಅವಧಿಯಲ್ಲಿ ಏನನ್ನು ಸೇವಿಸುತ್ತಿರಲಿಲ್ಲ. ಈ ಡಯಟ್ ಆರಂಭಿಸುವುದಕ್ಕೂ ಮುನ್ನ 155 ಕೆಜಿ ತೂಕವಿದ್ದ ಸ್ನೇಹಾ ಇದೀಗ 33 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ.
ಹೆಚ್ಚಿನ ಕೊಬ್ಬು ದೇಹದಲ್ಲಿ ಹೆಚ್ಚು ಜಾಗವನ್ನು ಆವರಿಸಿಕೊಳ್ಳುತ್ತದೆ. ಇದರಿಂದ ತೂಕ ಹೆಚ್ಚಾಗುತ್ತಾರೆ. ಹಾಗಾಗಿ ಸ್ನೇಹಾ 500ಗ್ರಾಂ ಕೊಬ್ಬನ್ನು ಕಳೆದುಕೊಂಡರೆ ಬರೋಬ್ಬರಿ 3 ಕೆಜಿ ತೂಕ ಕಳೆದುಕೊಂಡಂತೆ. ಅಂದಹಾಗೆ ಸ್ನೇಹಾ ಇನ್ನೂ ತಮ್ಮ ತೂಕ ಇಳಿಸುವ ಪ್ರಯಾಣವನ್ನು ಪೂರ್ಣಗೊಳಿಸಿಲ್ಲ. ಇನ್ನೂ 35 ಕೆಜಿಯನ್ನು ಕಡಿಮೆ ಮಾಡುವ ಗುರಿ ಹೊಂದಿದ್ದಾರೆ. ಅಲ್ಲಿಯವರೆಗೂ ಇದೇ ಡಯಟ್ ಪ್ಲಾನ್ ಮುಂದುವರಿಯಲಿದೆ.
ಅಂದಹಾಗೆ ಸ್ನೇಹಾ ಅವರ ತೂಕ ಇಳಿಕೆ ಕ್ರಮವನ್ನು ಗಮನಿಸುವುದಾದರೆ, ಮಧ್ಯಂತರ ಉಪವಾಸ ಮತ್ತು ಸರಿಯಾದ ಆಹಾರದ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತದೆ. ಸರಿಯಾದ ಮಾರ್ಗದರ್ಶನದ ಜೊತೆಗೆ ದೃಢ ಮನಸ್ಸು ಕೂಡ ತೂಕ ಇಳಿಕೆಯ ಗುರಿ ಮುಟ್ಟಲು ಸಹಾಯ ಮಾಡುತ್ತದೆ ಎಂಬುದು ಗೊತ್ತಾಗುತ್ತದೆ.
ನೀವು ಕೂಡ ತೂಕ ಇಳಿಸಿಕೊಳ್ಳಲು ಬಯಸಿದರೆ, ನೀವು ತಿನ್ನುವ ವಿಧಾನ ಮತ್ತು ನಿಮ್ಮ ಜೀವನಶೈಲಿಯನ್ನು ಬದಲಾಯಿಸುವ ಮೂಲಕ ಪ್ರಾರಂಭಿಸಿ. ಜಂಕ್ ಫುಡ್ಗಳ ಬದಲು ಆರೋಗ್ಯಕರ ತಿಂಡಿಗಳನ್ನು ತಿನ್ನಿ. ಮುಖ್ಯವಾಗಿ ನಿಮ್ಮ ದಿನಚರಿಯಲ್ಲಿ ವ್ಯಾಯಾಮವನ್ನು ಸೇರಿಸಿ. ನಿಮ್ಮಲ್ಲಿ ಪರಿಶ್ರಮ ಮತ್ತು ತಾಳ್ಮೆ ಇದ್ದರೆ ನಿಮ್ಮ ಗುರಿಗಳನ್ನು ಸುಲಭವಾಗಿ ಸಾಧಿಸುವಿರಿ.
ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.