ನೀವು ಈ ಮಿಸ್ಟೇಕ್ಸ್ ಮಾಡ್ತಿದ್ರೆ ನಿಮ್ಮ ಮೂಳೆಗಳು ಡ್ಯಾಮೇಜ್​ ಆಗೋದು ಖಚಿತ! ಇಲ್ಲಿದೆ ಉಪಯುಕ್ತ ಮಾಹಿತಿ... Bones Health

Bones Health
Published on

Bones Health : ಒಬ್ಬ ವ್ಯಕ್ತಿ ಸದೃಢವಾಗಿರಬೇಕಾದರೆ ಆತನ ಮೂಳೆಗಳು ಚೆನ್ನಾಗಿರಬೇಕು ಅಂದರೆ, ಬಲಿಷ್ಠವಾಗಿರಬೇಕು. ಮೂಳೆಗಳು ಬಲಿಷ್ಠವಾಗಿರಬೇಕಾದರೆ ಅದರಲ್ಲಿ ಕ್ಯಾಲ್ಸಿಯಂ ಎಂಬ ವಸ್ತುವಿರಬೇಕು. ಇಲ್ಲವಾದರೆ ಮೂಳೆಗಳು ಇರುವೆಗಳು ತಿಂದ ಬೆಲ್ಲದಂತಾಗುತ್ತದೆ. ನಾವು ದಿನನಿತ್ಯ ಏನೇ ಮಾಡಿದರೂ ಮೂಳೆಗಳು ನಮ್ಮನ್ನು ಬೆಂಬಲಿಸುತ್ತವೆ. ಒಂದು ವೇಳೆ ಮೂಳೆಗಳು ಸ್ಪಂದಿಸದಿದ್ದರೆ, ಕುಳಿತುಕೊಳ್ಳಲು, ನಿಲ್ಲಲು ಅಥವಾ ಏನನ್ನಾದರೂ ಹಿಡಿಯಲು ಕೂಡ ನಮ್ಮಿಂದ ಸಾಧ್ಯವಾಗುವುದಿಲ್ಲ.

ಅಂದಹಾಗೆ ನಾವು ಬೆಳೆದಂತೆ ನಮ್ಮ ಮೂಳೆಗಳಲ್ಲಿ ಕ್ಯಾಲ್ಸಿಯಂ ಅಂಶ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ವಯಸ್ಕರು ತಮ್ಮ ಮೊಣಕಾಲುಗಳು ಮತ್ತು ಕೀಲುಗಳಲ್ಲಿ ತುಂಬಾ ನೋವು ಅನುಭವಿಸುತ್ತಾರೆ. ನಾವು ಮಾಡುವ ಕೆಲವು ತಪ್ಪುಗಳಿಂದ ನಮ್ಮ ಮೂಳೆಗಳಲ್ಲಿನ ಕ್ಯಾಲ್ಸಿಯಂ ಕರಗುತ್ತಾ ಹೋಗುತ್ತದೆ. ಆ ತಪ್ಪುಗಳು ಯಾವುವು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

* ಹೆಚ್ಚಾಗಿ ಕೆಂಪು ಮಾಂಸವನ್ನು ತಿನ್ನುವ ಜನರು ತಮ್ಮ ದೇಹದ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟೀನ್ ಪಡೆಯಲು ಪ್ರಾರಂಭಿಸುತ್ತಾರೆ. ಇದರಿಂದ ಅಸಿಡಿಟಿ ಸಮಸ್ಯೆ ಉಂಟಾಗಿ, ಮಲ-ಮೂತ್ರ ವಿಸರ್ಜನೆಯ ಸಮಯದಲ್ಲಿ ಬಹಳಷ್ಟು ಕ್ಯಾಲ್ಸಿಯಂ ದೇಹದಿಂದ ಹೊರಹೋಗುತ್ತದೆ.

* ತಂಪು ಪಾನೀಯಗಳು ಮತ್ತು ಸೋಡಾಗಳಂತಹ ಕಾರ್ಬೊನೇಟೆಡ್ ಪಾನೀಯಗಳನ್ನು ಸೇವಿಸುವ ಜನರು ದುರ್ಬಲ ಮೂಳೆ ಸಮಸ್ಯೆಗಳನ್ನು ಎದುರಿಸಬಹುದು. ಅಂತಹ ಪಾನೀಯಗಳು ಹೆಚ್ಚಿನ ಮಟ್ಟದ ಫಾಸ್ಫೇಟ್ ಅನ್ನು ಹೊಂದಿರುತ್ತವೆ. ಇದು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ.

* ಕೆಲವರು ಹೆಚ್ಚು ಆಮ್ಲೀಯತೆಯ ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಈ ಔಷಧಿಗಳು ಕ್ಯಾಲ್ಸಿಯಂ, ಮೆಗ್ನೀಸಿಯಂ ಮತ್ತು ಸತುಗಳಂತಹ ಖನಿಜಗಳ ಮೇಲೆ ಪರಿಣಾಮ ಬೀರುತ್ತವೆ. ಇದರಿಂದ ಮೂಳೆಗಳ ಆರೋಗ್ಯ ಹಾಳಾಗುತ್ತದೆ.

* ನಿಮ್ಮ ಮೂಳೆಗಳನ್ನು ಬಲವಾಗಿಡಲು ನೀವು ಬಯಸಿದರೆ, ಚಹಾ ಮತ್ತು ಕಾಫಿಯ ಸೇವನೆಯನ್ನು ಕಡಿಮೆ ಮಾಡಿ. ಏಕೆಂದರೆ, ಅವುಗಳಲ್ಲಿನ ಕೆಫೀನ್ ನಿಮ್ಮ ಮೂಳೆಗಳ ಮೇಲೆ ಪರಿಣಾಮ ಬೀರಬಹುದು.

ಮೂಳೆಗಳು ಬಲವಾಗಿರಲು ಏನು ಮಾಡಬೇಕು?

* ನಿಮ್ಮ ದೈನಂದಿನ ಆಹಾರದಲ್ಲಿ ಕ್ಯಾಲ್ಸಿಯಂ ಮತ್ತು ಪೊಟ್ಯಾಸಿಯಂ ಸಮೃದ್ಧವಾಗಿರುವ ಆಹಾರವನ್ನು ಸೇರಿಸಿ. ಒಣ ಹಣ್ಣುಗಳಾದ ಗೋಡಂಬಿ, ಬಾದಾಮಿ, ಒಣದ್ರಾಕ್ಷಿ ಮತ್ತು ವಾಲ್‌ನಟ್‌ಗಳು ಒಳ್ಳೆಯದು.

* ಸಿಹಿ ಮತ್ತು ಸಕ್ಕರೆಯನ್ನು ನಿಯಂತ್ರಿಸುವುದು ಒಳ್ಳೆಯದು. ಸಕ್ಕರೆಯ ಬದಲು ಬೆಲ್ಲ ತಿನ್ನಬಹುದು. ಬೆಲ್ಲವು ದೇಹಕ್ಕೆ ಅಗತ್ಯವಿರುವ ಕ್ಯಾಲ್ಸಿಯಂ ಮತ್ತು ಕಬ್ಬಿಣವನ್ನು ಒದಗಿಸುತ್ತದೆ.

* ಹಾಲು ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸಬೇಕು. ಚೀಸ್ ತಿನ್ನುವುದು ಪ್ರಯೋಜನಕಾರಿ.

* ನಿಮ್ಮ ಮೂಳೆಗಳನ್ನು ಬಲವಾಗಿಡಲು, ನೀವು ಹಸಿ ತರಕಾರಿಗಳನ್ನು ತಿನ್ನಬೇಕು. ವಿಶೇಷವಾಗಿ ಬೀನ್ಸ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಅವು ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಫೋಲಿಕ್ ಆಮ್ಲವನ್ನು ಹೊಂದಿರುತ್ತವೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net