ತೂಕ ಇಳಿಸಿಕೊಂಡ್ರೆ ಲಕ್ಷ ಲಕ್ಷ ಬೋನಸ್​... ಉದ್ಯೋಗಿಗಳಿಗೆ ಕಂಪನಿಯಿಂದ ಬಂಪರ್​ ಆಫರ್​! Weight Loss Challenge

Weight Loss Challenge
Published on

Weight Loss Challenge : ಚೀನಾದ ಪ್ರಮುಖ ತಂತ್ರಜ್ಞಾನ ಕಂಪನಿ ಅರಾಶಿ ವಿಷನ್ ಇಂಕ್ (ಇನ್‌ಸ್ಟಾ360 ಅಂತಾನೂ ಕರೆಯುತ್ತಾರೆ) ತನ್ನ ಉದ್ಯೋಗಿಗಳಿಗೆ ಬಂಪರ್ ಕೊಡುಗೆಯನ್ನು ಘೋಷಿಸಿದೆ. ಉದ್ಯೋಗಿಗಳು ತೂಕ ಇಳಿಸಿಕೊಳ್ಳಲು ಮತ್ತು ಆರೋಗ್ಯಕರ ಜೀವನವನ್ನು ನಡೆಸಲು ಇದು ಒಂದು ವಿಶಿಷ್ಟ ಮಾರ್ಗವನ್ನು ಅಳವಡಿಸಿಕೊಂಡಿದೆ.

ಕಂಪನಿಯು ಆಗಸ್ಟ್ 12 ರಂದು ತನ್ನ ವಾರ್ಷಿಕ 'ಮಿಲಿಯನ್ ಯುವಾನ್ ತೂಕ ಇಳಿಸುವ ಸವಾಲು' ಅನ್ನು ಪ್ರಾರಂಭಿಸಿತು. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್‌ನ ವರದಿಯ ಪ್ರಕಾರ, ಈ ಸವಾಲಿನಲ್ಲಿ ಭಾಗವಹಿಸುವುದು ತುಂಬಾ ಸುಲಭ. ಯಾವುದೇ ಉದ್ಯೋಗಿ ಈ ಸವಾಲಿಗಾಗಿ ನೋಂದಾಯಿಸಿಕೊಳ್ಳಬಹುದು. ಸವಾಲು ಸ್ವೀಕರಿಸಿ, ತೂಕ ಇಳಿಸಿಕೊಂಡರೆ, ಪ್ರತಿ ಅರ್ಧ ಕೆಜಿ ತೂಕ ಇಳಿಕೆಗೆ 500 ಯುವಾನ್ (ಸುಮಾರು ರೂ. 6100) ಬೋನಸ್ ಪಡೆಯುತ್ತಾರೆ.

ಈ ವರ್ಷ, Gen-Z ಉದ್ಯೋಗಿ ಶಿ ಯಾಕಿ 90 ದಿನಗಳಲ್ಲಿ 20 ಕೆಜಿಗಿಂತ ಹೆಚ್ಚು ತೂಕ ಇಳಿಸಿಕೊಂಡು ತೂಕ ಇಳಿಸುವ ಚಾಂಪಿಯನ್ ಪ್ರಶಸ್ತಿಯನ್ನು ಗೆದ್ದರು. ಅವರಿಗೆ 20,000 ಯುವಾನ್ (ಸುಮಾರು ರೂ. 2.47 ಲಕ್ಷ) ನಗದು ಬಹುಮಾನ ಸಿಕ್ಕಿತು. ಅವರು ತಮ್ಮ ಯಶಸ್ಸಿಗೆ ಶಿಸ್ತು, ಆಹಾರ ನಿಯಂತ್ರಣ ಮತ್ತು ಪ್ರತಿದಿನ 1.5 ಗಂಟೆಗಳ ವ್ಯಾಯಾಮ ಕಾರಣ ಎಂದು ಹೇಳಿದರು. ಇದು ಅವರ ಜೀವನದ ಅತ್ಯುತ್ತಮ ಅವಕಾಶ ಎಂದು ಅವರು ಹೇಳಿದರು. ಅಲ್ಲದೆ, ಅವರು ಕಂಪನಿಗೆ ಧನ್ಯವಾದ ಅರ್ಪಿಸಿದರು.

ಇನ್ನು ಶಿ ಯಾಕಿ ಅವರು ತಮ್ಮ ಸಹೋದ್ಯೋಗಿಗಳಿಗೆ ಸ್ಫೂರ್ತಿ ನೀಡಲು ಗ್ರೂಪ್​ ಚಾಟ್‌ನಲ್ಲಿ ತಾವು ಅನುಸರಿಸಿದ 'ಕಿನ್ ಹಾವೊ​ ತೂಕ ಇಳಿಸುವ ವಿಧಾನ'ವನ್ನು ಹಂಚಿಕೊಂಡರು. ಅಂದರೆ, ಕಿನ್​ ಹಾವೊ ಚೀನಾದ ಖ್ಯಾತ ನಟ. ಅವರು 15 ದಿನಗಳಲ್ಲಿ 10 ಕೆಜಿ ತೂಕ ಇಳಿಸಿಕೊಂಡು ಭಾರಿ ಸುದ್ದಿಯಾದರು. ಅವರ ಆಹಾರ ಕ್ರಮದ ಪ್ರಕಾರ, ಒಂದು ದಿನ ಸೋಯಾ ಹಾಲು ಮಾತ್ರ ಕುಡಿಯುವುದು ಮತ್ತು ಇನ್ನೊಂದು ದಿನ ಜೋಳ ಅಥವಾ ಹಣ್ಣುಗಳನ್ನು ಮಾತ್ರ ತಿನ್ನುವುದು ಸೇರಿ ಹಲವಾರು ಕಠಿಣ ನಿಯಮಗಳನ್ನು ಒಳಗೊಂಡಿದೆ.

ಇನ್ನು ಕಂಪನಿಯು 2022 ರಿಂದ ಏಳು ಬಾರಿ ಈ ಸವಾಲನ್ನು ಆಯೋಜಿಸಿದೆ. ಇದು ಸುಮಾರು 2 ಮಿಲಿಯನ್ ಯುವಾನ್ (ಸುಮಾರು ರೂ. 2.47 ಕೋಟಿ) ಮೌಲ್ಯದ ಬಹುಮಾನಗಳನ್ನು ವಿತರಿಸಿದೆ. ಕಳೆದ ವರ್ಷ, 99 ಉದ್ಯೋಗಿಗಳು ಒಟ್ಟಾಗಿ 950 ಕಿಲೋಗ್ರಾಂಗಳಷ್ಟು ತೂಕ ಇಳಿಸಿಕೊಂಡರು ಮತ್ತು ಒಂದು ಮಿಲಿಯನ್ ಯುವಾನ್ ಬೋನಸ್ ಹಂಚಿಕೊಂಡರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net