

ಮೇಷ: ಚಾಂದ್ರಮಾನ್ಯ ರೀತ್ಯ ರಾಹು-ಕೇತುಗಳು ತಮ್ಮ ಸ್ಥಾನವನ್ನು ಸೆಪ್ಟೆಂಬರ್ 22ರಂದು ಬದಲಿಸುತ್ತಾರೆ. ನಿಮ್ಮ ರಾಶಿಗೆ ರಾಹುವು ದ್ವಿತೀಯದಲ್ಲೂ ಅಷ್ಟಮದಲ್ಲಿ ಕೇತುವೂ ಬಂದು ಸೇರುತ್ತಾರೆ. ಕೇತುಗ್ರಹವು ಕುಜನ ಮನೆಯ ಆಧಿಪತ್ಯದಲ್ಲಿ ಬರುತ್ತದೆ. ಗುರುವು ಸ್ವತಂತ್ರವಾಗಿ ಒಂಬತ್ತರ ಮನೆಯಲ್ಲಿ ಶುದ್ಧನಾಗಿದ್ದು ನಿಮ್ಮನ್ನು ಮಹತ್ತರವಾದ ಬದಲಾವಣೆಗೆ ಕೊಂಡೊಯ್ಯುತ್ತಾನೆ. ಎಲ್ಲಾ ವಿಷಯದಲ್ಲಿ ನಿಮಗೆ ಜಯ ಆಗುವ ಕಾಲ.
ವೃಷಭ: ವೃಷಭ ರಾಶಿಯು ರಾಹು ಸಂಪರ್ಕಕ್ಕೆ ಬಂದು ನಿಮ್ಮ ಸಾಮಾಜಿಕ, ಆರ್ಥಿಕ ಜೀವನದಲ್ಲಿ ಅನಿರೀಕ್ಷಿತವಾದ ಬೆಳವಣಿಗೆಗಳು ನಡೆದು ಕ್ರಮೇಣ ಸುಧಾರಣೆ ಕಂಡುಬರುತ್ತದೆ. ವೃಷಭ ರಾಹು-ವೃಶ್ಚಿಕ ಕೇತುವಿಬ್ಬರೂ ಬಲಾಢ್ಯರು. ಕೊಡುತ್ತಾರೆ. ಕೊಟ್ಟು ನೋಡುತ್ತಾರೆ. ಅಂದರೆ ರಾಹು-ಕೇತುಗಳ ಛಾಯಾಗ್ರಹಗಳು. ಧರ್ಮದಲ್ಲಿರಿ.
ಮಿಥುನ: ಸೆ.22ರಂದು ರಾಹು-ಕೇತುಗಳ ಬದಲಾವಣೆಯಾಗಲಿದ್ದು ಗುರುವು ಸ್ವಕ್ಷೇತ್ರದಲ್ಲಿ ಬಲಾಢ್ಯನಾಗಿ, ಶಕ್ತಿಶಾಲಿಯಾಗಿ ಇದ್ದು ನಿಮ್ಮ ಕೆಲಸಗಳಲ್ಲಿ ವಿಶೇಷ ಲಾಭ, ಜಯ ಉಂಟುಮಾಡುತ್ತಾನೆ. ಅಷ್ಟಮ ಶನಿಯ ಪ್ರಭಾವದಿಂದ ಕೆಲವೊಂದು ವಿಘ್ನಗಳು ಬರಬಹುದು. ವಿಘ್ನಹರ ಗಣಪತಿ- ಇಡಗುಂಜಿಯ ರಾಜಗಣಪನನ್ನು ಪೂಜಿಸಿ.
ಕಟಕ: ಕಟಕ ರಾಶಿಯ ಉಚ್ಚಸ್ಥಾನದಲ್ಲಿ ಗುರುವು 6ರಲ್ಲಿದ್ದರೂ ನಿಮಗೆ 11ನೇ ಮನೆಯ ರಾಹುವಿನಿಂದ ಅಗೋಚರವಾದ ಪೂರ್ವಜನ್ಮದ ಪುಣ್ಯದಿಂದ ವಿಚಾರ ವಿಷಯಗಳಲ್ಲಿ ಸಂತಸವಿದ್ದು, ವಿಶೇಷವಾದ ಧನಕಗಳಿಕೆಯಾಗಬಹುದು. ಆತ್ಮನಿಗೆ ವಯಸ್ಸೂ ಇಲ್ಲ-ಲಿಂಗವೂ ಇಲ್ಲ. ಸಮಚಿತ್ತದಿಂದ ನಡೆದು ಸಂತೋಷವನ್ನು ಎಲ್ಲರಿಗೂ ಹಂಚಿ.
ಸಿಂಹ: ದಶಮದಲ್ಲಿ ರಾಹುವು ಬಂದು, ಮಖಾ ನಕ್ಷತ್ರದ ನಕ್ಷತ್ರಾಧಿಪತಿ ಕೇತುವು ವೃಶ್ಚಿಕದಲ್ಲಿ ಬಂದು ಸೇರಿ ಗಂಡಾಂತರ, ಅವಾಂತರಗಳನ್ನು ನಿಲ್ಲಿಸಿ ಶೋಭೆ, ಕೀರ್ತಿಯನ್ನು ತರುತ್ತಾರೆ. ಸಂಪತ್ತಿಗೆ ಕೊರತೆಯಿಲ್ಲ. ಸಮತೋಲನದಿಂದ ಮನಸ್ಸನ್ನು ಪ್ರಶಾಂತವಾಗಿಡಿ. ನಾಗದೇವರಿಗೆ ಜೇನುತುಪ್ಪದಿಂದ ಅಭಿಷೇಕ ಮಾಡಿ. ಜಯ ನಿಮ್ಮದೇ.
ಕನ್ಯಾ: 9ರಲ್ಲಿ ರಾಹು, ತೃತೀಯ ಕೇತು ಶುಭವನ್ನು ಕೊಡುತ್ತಾರೆ. ರಾಹುವು ನಿಮ್ಮ ಖರ್ಚುವೆಚ್ಚಕ್ಕೆ ಸಮನಾಗಿ ಗಳಿಕೆಯನ್ನು ನೀಡಿದರೂ, ದುಷ್ಟ ಮನೋಭಾವ ಬಿಟ್ಟರೆ ಸಂಕಟ ಪರಿಹಾರವಾಗುತ್ತದೆ. ಗುರುಚರಿತ್ರೆಯ 14ನೇ ಅಧ್ಯಾಯ ಪಾರಾಯಣ ಮಾಡಿ. ಶುದ್ಧ ಷಷ್ಟಿ ದಿನದಂದು ಉಪವಾಸ ಮಾಡಿ ಸುಬ್ರಹ್ಮಣ್ಯನನ್ನು ಆರಾಧಿಸಿ.
ತುಲಾ: ರಾಶಿಗೆ ಸೆ.22ರಂದು ಬುಧನು, ವೃಷಭಕ್ಕೆ ರಾಹುವು, ವೃಶ್ಚಿಕಕ್ಕೆ ಕೇತುವು ಬಂದು ಸೇರಲಿದ್ದಾರೆ. ದ್ವಿತೀಯದಲ್ಲಿ ಕೇತುವು ಕೆಲವು ಅಡ್ಡಿ ಆತಂಕ ತಂದರೂ ನಿಮಗೆ ಕೆಡುಕು ಉಂಟಾಗಲಾರದು. ವೃಷಭದಲ್ಲಿ ಉಚ್ಚ ರಾಹುವು ನೀವು ತಪ್ಪು ಮಾಡಿದರೂ ಕ್ಷಮಿಸಿ ಮಾರ್ಗವನ್ನು ತೋರಿಸಿ ಕಾಪಾಡುತ್ತಾನೆ. ಕೇತುವಿಗೆ ಸಿದ್ಧಿವಿನಾಯಕನನ್ನು, ರಾಹುವಿಗೆ ಚಂಡಿಕಾ ಅಷ್ಟೋತ್ತರವನ್ನು ಪಠಿಸಿ.
ವೃಶ್ಚಿಕ: ಕುಜನ ಆಧಿಪತ್ಯದಲ್ಲಿ ಹುಟ್ಟಿದ ನೀವು, ನಿಮ್ಮ ರಾಶಿಗೆ ಕೇತುವು ಅಂದರೆ ಸಾಕ್ಷಾತ್ ಗಣಪತಿಯೇ ಬಂದು ಸೇರಿ ವಿಘ್ನಗಳನ್ನು ನಿವಾರಿಸಿ ನಿಮ್ಮನ್ನು ಸಾಧನೆಯತ್ತ ಕರೆದೊಯ್ಯುತ್ತಾನೆ. ನಂಬಿಕೆಯೇ ದೇವರು. ಗುರು ದತ್ತಾತ್ರೇಯನನ್ನು ಪೂಜಿಸಿ, ಪ್ರಾರ್ಥಿಸಿ. ನಿಮಗೆ ಶುಭವಾಗಲಿದೆ.
ಧನು: ಲಗ್ನದಲ್ಲಿ ಗುರುವು ಶುಭದಲ್ಲಿದ್ದು, ಸಂತೋಷಕ್ಕೆ ಕೊರತೆಯಿಲ್ಲ. ಹಾಗಿದ್ದಾಗ್ಯೂ ಎಚ್ಚರ. ಕುಂಭಕರ್ಣನು ವರವನ್ನು ಬೇಡುವಾಗ 6 ತಿಂಗಳು ಎಚ್ಚರವಾಗಿಯೂ, 6 ತಿಂಗಳು ನಿದ್ರಾವಸ್ಥೆಯಲ್ಲಿರುವಂತೆಯೂ ಸರಸ್ವತಿ ಅವನ ನಾಲಿಗೆಯಲ್ಲಿ ನುಡಿಸುತ್ತಾಳೆ. ಹಾಗೆಯೇ ಮಾತಾಡುವುದರಲ್ಲಿ ಎಚ್ಚರವಿರಲಿ. ಸದಾಕಾಲ ದಶರೂಪಿ ನಾರಾಯಣನನ್ನು ಪೂಜಿಸಿ.
ಮಕರ: ನಿಮ್ಮನ್ನು ತಿದ್ದಿ, ತಿಳಿವಳಿಕೆ ಹೇಳಬಹುದು. ಎಷ್ಟರಮಟ್ಟಿಗೆ ಕೇಳುತ್ತೀರ ಎಂಬುದು ಯಕ್ಷಪ್ರಶ್ನೆ. ಬಾಳು ಬಂಗಾರವಾಗಬೇಕಾದರೆ ದೈವಕೃಪೆ ಬೇಕೇಬೇಕು. ಶನಿಯ ಪ್ರಾರ್ಥನೆಯಿರಲಿ. ಹನ್ನೆರಡರ ಗುರು ನಿಮ್ಮನ್ನು ಬಾಧಿಸದೆ ಇರಲಿ. ಆದ್ದರಿಂದ ದಕ್ಷಿಣಾಮೂರ್ತಿ ಸ್ತೋತ್ರವನ್ನು ಪಠಿಸಿ. ಎಲ್ಲಿಯಾದರೂ ಸರಿ, ದತ್ತದೇವರ ದರ್ಶನಮಾಡಿ.
ಕುಂಭ: ಬ್ರಹ್ಮಾಂಡದಲ್ಲಿ ಎಲ್ಲವೂ ಇದ್ದೂ, ಎಲ್ಲವನ್ನು ಪ್ರಕೃತಿ ನಮಗಾಗಿ ಇಟ್ಟಿದೆ. ಬಳಸುವುದು, ಉಳಿಸುವುದು ನಮ್ಮ ಕೈಯಲ್ಲಿದೆ. ಹನ್ನೊಂದರ ಗುರುವು ಇನ್ನು 12 ತಿಂಗಳುಗಳ ಕಾಲ ಇದ್ದು ಶನಿಯ ತಾಪ ಕಡಿಮೆಮಾಡುತ್ತಾನೆ. ಸ್ವಕ್ಷೇತ್ರದಲ್ಲಿ ಶನಿ ಇದ್ದಲ್ಲೂ ಕೂಡ ಧ್ಯಾನ, ಅನುಷ್ಠಾನ ಮಾಡಿ. ರಾಮಾಯಣದ ಸುಂದರಕಾಂಡ ಪಾರಾಯಣವನ್ನು ಮಾಡಿ.
ಮೀನ: ಮೀನ ರಾಶಿಯವರಿಗೆ ರಾಹು ತೃತೀಯದಲ್ಲೂ, ಒಂಭತ್ತರಲ್ಲಿ ಕೇತುವೂ ಬಂದು ಸೇರಿ ಜನ್ಮಾಂತರದಲ್ಲಿ ಶಿವನ ಪೂಜೆಯ ಫಲವು ಈ ಜನ್ಮದಲ್ಲಿ ಸಾಫಲ್ಯವಾಗಲಿದೆ. ಹತ್ತರಲ್ಲಿ ಗುರುವಿದ್ದು, ಮೂರನೇ ಮನೆಯ ರಾಹುವಿಗೆ ದುರ್ಗೆ, ಸುಬ್ರಹ್ಮಣ್ಯನನ್ನು ಆರಾಧಿಸಿ. ನಿಮ್ಮ ಬದುಕು ಪ್ರಾರ್ಥನೆ ನಿಮಗೂ ಇರಲಿ, ದೇಶಕ್ಕೂ ಇರಲಿ.