

ಮೇಷ: ಸಂಕಷ್ಟ ಬಂದಾಗ ದೈವ ಪ್ರಾರ್ಥನೆ ಬಿಟ್ಟರೆ ಅನ್ಯಮಾರ್ಗ ಮತ್ತೊಂದಿಲ್ಲ. ನಾನು ನನ್ನದು ಎಂಬುದು ನಿಮಗೆ ಅರಿವಾಗುವುದಿಲ್ಲ. ನಿಮ್ಮ ಕ್ಲಿಷ್ಟ ಸಮಯಕ್ಕೆ ಯಾರೂ ಬರುವುದಿಲ್ಲ. ನಿಮಗೆ ದಾರಿ ತೋರಿಸಿದ ಗುರುವೇ ಅರಿವು ಮೂಡಿಸುತ್ತಾನೆ. ಸುಬ್ರಹ್ಮಣ್ಯನ ಪ್ರಾರ್ಥನೆ ಇರಲಿ.
ವೃಷಭ: ಶುಕ್ರ ಗ್ರಹವು ಮೇ 31ರಂದು ಮೇಷದಲ್ಲಿ ಇದ್ದು, ವೃಷಭ ರಾಶಿಯವರಿಗೆ ದ್ವಾದಶಕ್ಕೆ ಬಂದಿದ್ದಾನೆ. ಅವನು ಸೃಷ್ಟಿಸುತ್ತಾನೆ. ಹಾಗೇ ಅಂತ್ಯವನ್ನು ಮಾಡುತ್ತಾನೆ. ಕೇತು ಸಿಂಹ ರಾಶಿಯಲ್ಲಿ, ರಾಹುವು ಶನಿಯ ಮನೆಯಲ್ಲಿ ಇರುವುದರಿಂದ ನಿಮ್ಮ ನಡೆ-ನುಡಿ ಹಾವ ಭಾವವು ಆತ್ಮ ಹಾಗೂ ದೈವ ಒಪು್ಪವ ರೀತಿಯಲ್ಲಿರಲಿ. ಕಣ್ಣೀರು ಬಂದಾಗ ಅದನ್ನು ಒರೆಸುವವಳು ತಾಯಿಯೇ. ಅಂತಹ ಮಹಾಮಾತೆಯಾದ ಚಂಡಿಕಾ ದುರ್ಗೆಯನ್ನು ಪ್ರಾರ್ಥಿಸಿ ಪೂಜಿಸಿ.
ಮಿಥುನ: ಏಕಾದಶದಲ್ಲಿ ಶುಕ್ರನಿದ್ದಾನೆ ಹಾಗೂ ರಾಹು ಒಂಬತ್ತರಲ್ಲಿ ಶನಿಯ ಮನೆಯಲ್ಲಿದ್ದಾನೆ. ಶನಿಯು ದಶಮದಲ್ಲಿ ಇದ್ದಾನೆ. ಲಗ್ನದಲ್ಲಿ ಗುರುವಿರುವುದು ಅತ್ಯಂತ ಸೂಕ್ಷ್ಮ ಕಾಲವಿದು. ಸೂಕ್ಷಾ್ಮತಿಸೂಕ್ಷ್ಮ ನಿರ್ಧಾರಗಳನ್ನು ತೆಗೆದುಕೊಂಡು ನಿಮ್ಮ ಮನಸ್ಸಿಗೆ ಒಪ್ಪುವ ಶುದ್ಧ ಮನಸ್ಸಿನಿಂದ ಸತ್ಯದ ದಾರಿಯನ್ನು ಹಿಡಿದು ನಡೆದರೆ ಗುರುವೇ ಮೆಚ್ಚಿ ನಿಮಗೆ ದಾರಿಯನ್ನು ತೋರುತ್ತಾನೆ. ಲಗ್ನ ಗುರುವಿಗೆ ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ. ಚಾಮುಂಡೇಶ್ವರಿ ಅಷ್ಟೋತ್ತರ ಪಠಿಸಿ.
ಕಟಕ: ಅಗಸನು ಕತ್ತೆಯನ್ನು ಒಂದು ಜೀವಿಯೆಂದು ತಿಳಿಯದೆ ಭಾರವನ್ನು ಹೇರಿ ಸೇವೆ ತೆಗೆದು ಕೊಂಡು ಅದು ಮಾಡಿದ ಉಪಕಾರವನ್ನು ಮರೆಯುತ್ತಾನೆ. ವಿನಾಕಾರಣ ಯಾವ ಭಾರವನ್ನು ಹೊತ್ತು ಕಂಗಾಲಾಗಬೇಡಿ. ದ್ವಾದಶ ಗುರುವಿರುವ ಸಮಯಕ್ಕೆ ದೇಹಕ್ಕೆ ತಕ್ಕನಾದ ಕೆಲಸವನ್ನು ಮಾಡಿ ಸಂತಸದಿಂದಿರಿ. ರಾಮನ ಪ್ರಾರ್ಥನೆ ಇರಲಿ. ಸುಂದರಕಾಂಡ ಪಾರಾಯಣ ಮಾಡಿರಿ.
ಸಿಂಹ: ಜೂನ್ 6ರಂದು ಕುಜ ಕೇತುವು ಒಂದೇ ಮನೆ ಸೇರಿ ಎರಡು ಪಾಪ ಗ್ರಹಗಳು ನಿಮ್ಮ ರಾಶಿಯಲ್ಲಿ ಬಂದು ಸೇರಿವೆೆ. ಮಾತಿನಲ್ಲಿ ನಯವಿರಲಿ. ರಕ್ತಸಂಬಂಧಿಗಳ ಜತೆ ಒಡನಾಟವು ಮಿತಿಯಲ್ಲಿರಲಿ. ಅಂಗಾರಕನಿಗೆ ಸುಬ್ರಹ್ಮಣ್ಯನ ಪ್ರಾರ್ಥನೆ ಮಾಡಿದರೆ, ಕಾಲಕ್ಕೆ ಸರಿಯಾಗಿ ಜ್ಞಾನವನ್ನು ಕೊಟ್ಟು ಮುನ್ನಡೆಸುತ್ತಾನೆ. ಸೂರ್ಯನಿಗೆ ಆದಿತ್ಯ ಹೃದಯ ಪಾರಾಯಣ ಮಾಡಿ. 11ರ ಗುರು ಸ್ಥಿರವಾದ ಲಾಭ, ಕೀರ್ತಿ ಕೊಡುತ್ತಾನೆ.
ಕನ್ಯಾ: ದ್ವಾದಶದಲ್ಲಿ ಕುಜ-ಕೇತುವಿದ್ದಾರೆ. ಎರಡು ಪಾಪ ಗ್ರಹಗಳು ಸೇರಿವೆ. ಮಾಡಿದ ಪಾಪಗಳಿಗೆ ದೇವರಲ್ಲಿ ಕ್ಷಮೆ ಬೇಡಿದರೆ ಆತನೇ ಕಾಪಾಡುವ ಸಂದರ್ಭ ಒದಗಿ ಬರುತ್ತದೆ. ಗುರುವು ದಶಮದಲ್ಲಿದ್ದು, ನೀವು ನಿಮ್ಮ ಗುರು, ತಂದೆ ತಾಯಿಯನ್ನು ಪ್ರಾರ್ಥಿಸಿದರೆ, ಬರುವ ಕೆಟ್ಟ ಸಮಯ ದಾಟಬಹುದು. ಹನುಮಾನ್ ಅಷ್ಟೋತ್ತರ ಪಠಿಸಿ. ದೇವರಿಗೆ ಬೆಲ್ಲ- ಕಾಯಿ- ಜಿಂಜೀರ ಫಲ, ಕದಳಿ ಫಲ ಕೊಟ್ಟು ಅನುಗ್ರಹ ಪಡೆಯಿರಿ.
ತುಲಾ: ನಿಮ್ಮ ಕ್ಷೇತ್ರದಲ್ಲಿ ಅಭಿವೃದ್ಧಿ, ಸಾಧನೆ ಮಾಡುವುದು ಆದ್ಯ ಕರ್ತವ್ಯ ವಾಗಿರಲಿ. ನೀವು ಮೊದಲಿನಿಂದ ಕೈ ಹಿಡಿದ ವೃತ್ತಿಯಲ್ಲಿ ತಾತ್ಸಾರ ಮಾಡಬಾರದು. ಆರಂಭದಿಂದ ನಿಮಗೆ ದಾರಿದೀಪವಾದ ವೃತ್ತಿಯೇ ನಿಮಗೆ ವರವಾಗಿದೆ. ಯಶಸ್ಸು, ಧೈರ್ಯ, ಕೀರ್ತಿ, ಧನವನ್ನು ಕಾಣಬಹುದು. ಸಮಯ ಪ್ರಜ್ಞೆಯಿಂದ ಕರ್ತವ್ಯ ಮಾಡಿ. ನಿಮ್ಮ ಕುಲದೇವರ ಅನುಗ್ರಹ ಪಡೆಯಿರಿ.
ವೃಶ್ಚಿಕ: ಪಂಚಮ ಶನಿಯಿಂದ ಸ್ವಲ್ಪ ಮಟ್ಟಿಗೆ ಉದ್ವೇಗವೂ, ಮನಸ್ಸಿಗೆ ಕಿರಿಕಿರಿ, ಅಶಾಂತಿ ಉಂಟಾಗುವುದು ಸಹಜ. ಅಷ್ಟಮ ಗುರುವು ಮನೋರೋಗವನ್ನು ಕೊಟ್ಟು ಕೆಲಸ ಕಾರ್ಯಗಳಲ್ಲಿ ಕಷ್ಟವನ್ನು ಕೊಡುವ ಕಾಲವಿದು. ಇದಕ್ಕೆ ಒಂದೇ ಒಂದು ಮಾರ್ಗ. ಸುಬ್ರಹ್ಮಣ್ಯ ದೇವರು ಒಬ್ಬನೇ ನಿಮ್ಮನ್ನು ಕಾಪಾಡುವವನು.
ಧನಸ್ಸು: ಧನಕ್ಕೆ ಅಧಿಪತಿ, ಧನಧಾನ್ಯಗಳ ಅಧಿಪತಿ ಗುರುಕಟಾಕ್ಷವನ್ನು ಕೊಡುವ ಅಧಿಪತಿ ಗುರು. ತನ್ನ ಮಾತಿನಂತೆ ನಡೆದರೆ ಆಕಾಶವನ್ನೇ ಮುಟ್ಟಿಸುವ ಏಕೈಕ ಗ್ರಹ ಗುರು. ನಿಮ್ಮ ರಾಶಿಗೆ ಸಪ್ತಮದಲ್ಲಿದ್ದಾನೆ. ಸಪ್ತಮವು ಸುಖಸ್ಥಾನ. ದಾರಿಯನ್ನೇ ತೋರುವವನು ಗುರು. ಆದರೆ ನಿಮಗೆ ಜನ್ಮಕೊಟ್ಟ ಮಾತಾಪಿತರಿಗೆ ವಂದಿಸಿ, ಅವರ ಸೇವೆಯನ್ನು ಮಾಡಿರಿ. ಸಂತೋಷ, ದೀರ್ಘಾಯುಷ್ಯ ಹೀಗೆ ಎಲ್ಲ ರೀತಿಯ ಅಭೀಷ್ಟವನ್ನು ಪಡೆಯುವ ಕಾಲವಿದು.
ಮಕರ: ಈ ರಾಶಿಗೆ ದ್ವಿತೀಯದಲ್ಲಿ ರಾಹುವಿದ್ದಾನೆ. ಶನಿಯು 3ನೇ ಮನೆಯಲ್ಲಿ ಇದ್ದರೂ ಸಂಸಾರದಲ್ಲಿ ಜಟಾಪಟಿಯು ನಡೆಯುತ್ತಿರುತ್ತದೆ. ಮೌನ ಧರಿಸಿ ಎಲ್ಲವನ್ನೂ ಸಹಿಸಿಕೊಳ್ಳಬೇಕು. ಆ ಶಕ್ತಿಯು ನಿಮಗೆ ಇರಲೇಬೇಕಾದರೆ ಭಗವಂತನನ್ನು ಪೂಜಿಸಿ. 18 ದಿನಗಳ ಕಾಲ ನಿತ್ಯವೂ ನಾಗದೇವರನ್ನು ಅರ್ಚಿಸಿ, ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ. ನಾಗರಾಜನು ನಿಮ್ಮನ್ನು ಕಾಪಾಡಲಿ.
ಕುಂಭ: ದ್ವಾದಶದಲ್ಲಿ ರಾಹುವಿರುವುದರಿಂದ ಖರ್ಚು-ವೆಚ್ಚವನ್ನು ಕಟ್ಟಿಹಾಕಬೇಕು. ಹಾಸಿಗೆ ಇದ್ದಷ್ಟು ಕಾಲು ಚಾಚಿ. ಊಟದಿಂದ ಹಿಡಿದು ಮಲಗುವವರೆಗೂ ಎಲ್ಲದಕ್ಕೂ ಮಿತಿಯಿರಬೇಕು. ಕಾಲಜ್ಞಾನವಿರ ಬೇಕು. ಸಪ್ತಮ ಕುಜ-ಕೇತುಗಳ ಆರ್ಭಟವನ್ನು ಸಹಿಸಿಕೊಳ್ಳಲು ಷಣ್ಮುಖನನ್ನು ಪ್ರಾರ್ಥಿಸಿ. ಪಾರ್ವತಿ ಸಾಂಬಸದಾಶಿವನನ್ನು ಪೂಜಿಸಿ.
ಮೀನ: ಲಗ್ನದಲ್ಲಿ ಶನಿಯಿದ್ದು, ದ್ವಾದಶದಲ್ಲಿ ರಾಹು ಶನಿಯ ಮನೆಯಲ್ಲಿ ಇದ್ದಾನೆ ಷಷ್ಠದಲ್ಲಿ ಕುಜ-ಕೇತುಗಳು ಬಂದಿದ್ದಾರೆ. ಚತುರ್ಥದಲ್ಲಿ ಗುರುವಿದ್ದಾನೆ, ಕಾಲವು ಚೆನ್ನಾಗಿಯೇ ಕೂಡಿಬಂದಿದ್ದರೂ, ಯಾವ ವೈಫಲ್ಯವನ್ನೂ ಕಾಣದೆ ಮುಂದೆ ಸಾಗಲು, ಗುರುಚರಿತ್ರೆ ಪಾರಾಯಣ ಮಾಡಿ. ಗುರುವಿಗಾಗಿ 1ಕೆ.ಜಿ ಕಡಲೆಬೇಳೆಯನ್ನು ದಕ್ಷಿಣೆ ಸಹಿತ ದಾನ ನೀಡಿರಿ.