ಉಪ್ಪಿನಂಗಡಿ: ನೇತ್ರಾವತಿ-ಕುವಾರಧಾರಾ ನದಿ ಸಂಗಮ ತಟದಲ್ಲಿನ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದಲ್ಲಿ ಕಾಲಾವಧಿ ಜಾತ್ರೆ, ಮಖೆಜಾತ್ರೆ ಮತ್ತು ಉತ್ಸವಾದಿಗಳ ಪ್ರಕಾರ ಈ ಬಾರಿ ನಡು ಮಖೆಜಾತ್ರೆಯಾಗಿ ಮಹಾಶಿವರಾತ್ರಿ 2ನೇ ಮಖೆಕೂಟ ಫೆ.26ರಂದು ರಾತ್ರಿ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಪವಿತ್ರಪಾಣಿ ಕರಾಯ ವಿಷ್ಣುಮೂರ್ತಿ ಕುದ್ದಣ್ಣಾಯ ಉಪಸ್ಥಿತಿಯಲ್ಲಿ ಜರುಗಲಿದೆ.
ಮಹಾಶಿವರಾತ್ರಿಯ ಪ್ರಯುಕ್ತ ರಾತ್ರಿ 8ರಿಂದ 9ರ ತನಕ ರುದ್ರಪಾರಾಯಣ, ಬಲಿ ಹೊರಟು ಉತ್ಸವ, ಮಹಾಪೂಜೆ ನಡೆಯಲಿದೆ. 27ರಂದು ಪ್ರಾತಃಕಾಲ ತೀರ್ಥಸ್ನಾನ, ಬೆಳಗ್ಗೆ 6.30ರಿಂದ ಬಲಿ ಹೊರಟು ರಥೋತ್ಸವ, ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ಮಹಾಕಾಳಿ ಅಮ್ಮನವರ ನೇಮಕ್ಕೆ ಪಡಿಯಕ್ಕಿ ಕೊಡುವುದು, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ.
ದೇವಳದ ವರ್ಷಾವಧಿ ಉತ್ಸವದ ಅಂಗವಾಗಿ ಮಾ.11ರಂದು ಬೆಳಗ್ಗೆ ಧ್ವಜಾರೋಹಣ, ರಾತ್ರಿ ಉತ್ಸವ, 12ರಂದು ಬೆಳಗ್ಗೆ ಹಾಗೂ ರಾತ್ರಿ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
ಉದ್ಭವ ಲಿಂಗಕ್ಕೆ ಜಲಾಧಿವಾಸ
ಮಹಾಶಿವರಾತ್ರಿಯ ದಿನ ಸಹಸ್ರಾರು ಭಕ್ತರಿಂದ ಪೂಜಿಸಲ್ಪಡುತ್ತಿದ್ದ ನೇತ್ರಾವತಿ ನದಿ ಗರ್ಭದಲ್ಲಿರುವ ಉದ್ಭವ ಲಿಂಗವು ಬಿಳಿಯೂರಿನಲ್ಲಿ ಅಣೆಕಟ್ಟು ಕಟ್ಟಲಾದ ಬಳಿಕ ಹಿನ್ನೀರಿನಿಂದ ಸದಾ ಮುಳುಗಡೆಯಾಗುತ್ತಿರುವುದರಿಂದ ಶಿವರಾತ್ರಿಯ ಪೂಜೆ ತಡೆಹಿಡಿಯಲ್ಪಟ್ಟಿದೆ. ಕಳೆದ ವರ್ಷದಿಂದ ಉದ್ಭವ ಲಿಂಗಕ್ಕೆ ಪೂಜೆ ಸಲ್ಲಿಸಲಾಗದಿರುವ ಬಗ್ಗೆ ಭಕ್ತರಲ್ಲಿ ನಿರಾಶೆ ಮೂಡಿದೆ.