ಮದುವೆ ಮಾತುಕತೆ ವಿಫಲ; ಹುಡುಗಿಯ ತಂದೆಗೆ ಇರಿದ ಹುಡುಗನ ತಂದೆ

murder1
Published on

ಗುರುಗ್ರಾಮ: ತಮ್ಮ ಪುತ್ರಿಗೆ ಸಂಬಂಧವನ್ನು ನಿಗದಿಪಡಿಸಿದ್ದ ಪಾಲಕರು ಮಾತುಕತೆಗಾಗಿ ಹುಡುಗನ ಮನೆಗೆ ಹೋಗಿದ್ದಾಗ ಮಾತುಕತೆ ಮುರಿದುಬಿದ್ದಿತು. ಇದರಿಂದ ತಮ್ಮ ಪುತ್ರಿಯನ್ನು ಆ ಮನೆಗೆ ಕೊಡಲು ಹುಡುಗಿಯ ಪಾಲಕರು ನಿರಾಕರಿಸಿದರು. ಇದರಿಂದ ಸಿಟ್ಟಾದ ಹುಡುಗನ ತಂದೆ ಹುಡುಗಿಯ ತಂದೆಗೆ ಚೂರಿಯಿಂದ ಇರಿದು, ಹತ್ಯೆ ಮಾಡಿದ್ದಾನೆ.

ಗುರುಗ್ರಾಮದಲ್ಲಿ ದಿನಗೂಲಿ ಕೆಲಸ ಮಾಡಿಕೊಂಡಿದ್ದ ರಾಜಸ್ಥಾನ ಮೂಲದ ವ್ಯಕ್ತಿಯೊಬ್ಬ ಗುರುಗ್ರಾಮದ ಸೊಹ್ನಾ ಪ್ರದೇಶದಲ್ಲಿ ವಾಸವಾಗಿರುವ ವ್ಯಕ್ತಿಯ ಪುತ್ರನೊಂದಿಗೆ ಮದುವೆ ನಿಷ್ಕರ್ಷಿಸಲು ನಿರ್ಧರಿಸಿದ್ದ. ಎರಡೂ ಮನೆಯನವರು ಪರಸ್ಪರ ಮನೆಗಳನ್ನು ನೋಡಿಕೊಂಡು ಹೋಗಿ ಆಗಿತ್ತು. ಮದುವೆ ಮಾತುಕತೆಗಾಗಿ ಹುಡುಗಿಯ ಪಾಲಕರು ಹುಡುಗನ ಮನೆಗೆ ಬಂದಿದ್ದರು.

ಮಾತುಕತೆ ಸಾಗುತ್ತಿರುವಾಗಲೇ ಯಾವುದೋ ಒಂದು ವಿಷಯದಲ್ಲಿ ಭಿನ್ನಾಭಿಪ್ರಾಯ ಮೂಡಿತು. ಇದು ವಾಗ್ವಾದಕ್ಕೆ ನಾಂದಿ ಹಾಡಿತು. ಪರಿಸ್ಥಿತಿ ಬಿಗಡಾಯಿಸುತ್ತಿರುವಂತೆ ಎರಡೂ ಕಡೆಯವರು ಪರಸ್ಪರ ಕೈಕೈ ಮಿಲಾಯಿಸಲಾರಂಭಿಸಿದರು. ಕೈಗೆ ಸಿಕ್ಕ ಚೂರಿ ಹಿಡಿದ ಹುಡುಗನ ತಂದೆ, ಹುಡುಗಿಯ ತಂದೆಯ ಹೊಟ್ಟೆಗೆ ನಾಲ್ಕಾರು ಬಾರಿ ಇರಿದ ಎನ್ನಲಾಗಿದೆ.

ಗಂಭೀರವಾಗಿ ಗಾಯಗೊಂಡಿದ್ದ ಹುಡುಗಿಯ ತಂದೆಯನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆತ ದಾರಿ ಮಧ್ಯೆ ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿದ್ದಾರೆ.

ಇದನ್ನು ಖಚಿತಪಡಿಸಿರುವ ಪೊಲೀಸರು, ಸೊಹ್ನಾ ಪ್ರದೇಶದಲ್ಲಿ ರಾತ್ರಿ 7 ಗಂಟೆಯಲ್ಲಿ ಈ ಘಟನೆ ನಡೆದಿದೆ. ಹುಡುಗಿಯ ತಂದೆ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಾತುಕತೆ ನಡೆಸಲೆಂದು ಹುಡುಗನ ಮನೆಗೆ ಬಂದಾಗ ಮಾತಿಗೆ ಮಾತು ಬೆಳೆದಿದ್ದು ಈ ಘಟನೆಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.

ಹುಡುಗನ ತಂದೆ, ಆತನ ಸಹೋದರ ಸೇರಿ ಒಟ್ಟು ಆರು ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಸದ್ಯ ಇವರೆಲ್ಲರೂ ಪರಾರಿಯಾಗಿದ್ದು, ಶೋಧ ಕಾರ್ಯ ಕೈಗೊಳ್ಳಲಾಗಿದೆ ಎಂದು ಗುರುಗ್ರಾಮ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net