ಪಕ್ಷಿಗಳು ‘V’ ಆಕಾರದಲ್ಲೇ ಹಾರುವುದೇಕೆ ಗೊತ್ತಾ? ಇದರ ಹಿಂದಿದೆ ನಿಮ್ಮ ಹುಬ್ಬೇರಿಸುವ ವೈಜ್ಞಾನಿಕ ರಹಸ್ಯ | Birds Fly

Birds Fly
ಪಕ್ಷಿಗಳು ‘V’ ಆಕಾರದಲ್ಲೇ ಹಾರುವುದೇಕೆ ಗೊತ್ತಾ? ಇದರ ಹಿಂದಿದೆ ನಿಮ್ಮ ಹುಬ್ಬೇರಿಸುವ ವೈಜ್ಞಾನಿಕ ರಹಸ್ಯ | Birds Fly
Published on: 

Birds Fly: ಸಾಮಾನ್ಯವಾಗಿ ಆಕಾಶದಲ್ಲಿ ಯಾರ ಹಂಗಿಲ್ಲದೇ, ಯಾವ ಅಡತಡೆಗಳಿಲ್ಲದೇ ಅತಿ ಎತ್ತರದಲ್ಲಿ ಹಾರಾಡುವ ಪಕ್ಷಿಗಳ ಹಿಂಡನ್ನು ನೋಡುವುದೇ ಹಲವರಿಗೆ ಒಂದು ಸುಂದರ ಅನುಭವ. ಅದರಲ್ಲೂ ಹಕ್ಕಿಗಳು ಇಂಗ್ಲಿಷ್‌ನ ‘V’ ಅಕ್ಷರದ ಆಕಾರದಲ್ಲಿ ಕ್ರಮಬದ್ಧವಾಗಿ ಹಾರುವುದನ್ನು ಎಂದಾದರೂ ನೀವು ಸೂಕ್ಷ್ಮವಾಗಿ ಗಮನಿಸಿದ್ದೀರಾ? ಇದು ಕೇವಲ ಪ್ರಕೃತಿಯ ಸೌಂದರ್ಯ ಅಥವಾ ವಿಸ್ಮಯವೇನಲ್ಲ. ಬದಲಿಗೆ ಇದರ ಹಿಂದೆ ಒಂದು ವೈಜ್ಞಾನಿಕ ರಹಸ್ಯವಿದೆ ಎಂಬುದೇ ರೋಚಕ.

ಆಕಾಶದಲ್ಲಿ ಹಕ್ಕಿಗಳ ಹಿಂಡು ‘V’ ಆಕಾರದಲ್ಲಿ ಹಾರುವುದನ್ನು ನಾವು ಬೆಳ್ಳಂಬೆಳ್ಳಗ್ಗೆ ಅಥವಾ ಸಂಜೆ ಹೊತ್ತಿನಲ್ಲಿ ಹೆಚ್ಚಾಗಿ ಕಾಣಲು ಸಿಗುತ್ತವೆ. ವಿಶೇಷವಾಗಿ ದೂರದ ಪ್ರಯಾಣ ಮಾಡುವ ವಲಸೆ ಹಕ್ಕಿಗಳು ಈ ಮಾದರಿಯಲ್ಲಿ ಹೆಚ್ಚಾಗಿ ಹಾರುತ್ತದೆ ಎಂಬುದು ವಿಶೇಷ. ಆದರೆ, ಹಕ್ಕಿಗಳು ಹೀಗೆ ಹಾರುವುದರ ಹಿಂದೆ ದೇಹದ ಶಕ್ತಿಯನ್ನು ಉಳಿಸುವ ಉಪಾಯವಿದೆ ಎಂದು ವಿವರಿಸಲಾಗಿದೆ.

ಹಕ್ಕಿಯೊಂದು ರೆಕ್ಕೆ ಬಡಿಯುವಾಗ ಅದರ ಹಿಂದೆ ಮತ್ತು ಪಕ್ಕದಲ್ಲಿ ಗಾಳಿಯ ಚಲನೆಯಿಂದ ಮೇಲ್ಮುಖ ಬಲ ಉಂಟಾಗುತ್ತದೆ. ಅದರ ಹಿಂದೆ ಹಾರುವ ಮತ್ತೊಂದು ಹಕ್ಕಿಯು ಈ ಗಾಳಿಯ ಚಲನೆಯ ಪ್ರಯೋಜನ ಪಡೆದು, ಕಡಿಮೆ ಶಕ್ತಿಯನ್ನು ಬಳಸಿಕೊಂಡು ಹಾರಲು ಸಹಾಯವಾಗುತ್ತದೆ. ಹೀಗಾಗಿಯೇ, ‘V’ ಆಕಾರದಲ್ಲಿ ಹಾರುವ ಹಕ್ಕಿಗಳಿಗೆ ದೀರ್ಘ ಪ್ರಯಾಣದ ವೇಳೆ ಶಕ್ತಿಯನ್ನು ಉಳಿಸಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಅವುಗಳು ಈ ಆಕಾರದಲ್ಲಿ ಹಾರುವ ಮೂಲಕ ದೂರದ ಊರುಗಳಿಗೆ ವಲಸೆ ಹೋಗುತ್ತವೆ.

ಮುಂದಿರುವ ಹಕ್ಕಿ ಹಿಂದಕ್ಕೆ!

ಈ ಹಾರಾಟದಲ್ಲಿ ಮುಂದಿರುವ ಹಕ್ಕಿಗೆ ಹೆಚ್ಚಿನ ಶ್ರಮದ ಅಗತ್ಯವಿರುತ್ತದೆ. ಕಾರಣ, ಅದು ಎದುರಿನಿಂದ ಬೀಸುವ ಗಾಳಿಯನ್ನು ಭೇದಿಸಿ ಹಾರಬೇಕಾಗುತ್ತದೆ. ಹೀಗಾಗಿ, ಮೊದಲಿಗಿರುವ ಪಕ್ಷಿ ಹೆಚ್ಚು ಶಕ್ತಿಯನ್ನು ವ್ಯಯಿಸುತ್ತದೆ. ಆದರೆ, ಅದೇ ಹಕ್ಕಿ ತಮ್ಮ ಸ್ಥಳವನ್ನು ತಲುಪುವವರೆಗೂ ಒಂದೇ ಜವಾಬ್ದಾರಿ ವಹಿಸುವುದಿಲ್ಲ. ಸ್ವಲ್ಪ ಸಮಯದ ಬಳಿಕ ಮತ್ತೊಂದು ಹಕ್ಕಿಗೆ ಆ ಜವಾಬ್ದಾರಿಯನ್ನು ವರ್ಗಾಯಿಸುತ್ತದೆ. ಈ ಮೂಲಕ ಹಿಂಡಿನಲ್ಲಿರುವ ಹಕ್ಕಿಗಳು ಶ್ರಮವನ್ನು ಹಂಚಿಕೊಳ್ಳುತ್ತವೆ ಎಂಬುದು ನಿಜಕ್ಕೂ ಹುಬ್ಬೇರಿಸುವ ಸಂಗತಿ.

Also Read
ತುಟಿ ದೊಡ್ಡದಾದಷ್ಟೂ ವರದಕ್ಷಿಣೆ ಹೆಚ್ಚು! ಈ ಬುಡಕಟ್ಟಿನ ಸಂಪ್ರದಾಯದ ಹಿಂದಿರುವ ವಿಚಿತ್ರ ಕಥೆ ಕೇಳಿದ್ರೆ ನಿಮ್ಮ ಹುಬ್ಬೇರುತ್ತೆ | Lip Plate Tradition
Birds Fly

ಮನುಷ್ಯ ಇನ್ನೂ ಕಲಿಯುವುದಿದೆ...

ಪಕ್ಷಿಗಳು ಈ ಹಾರಾಟದ ಕ್ರಮ ಮನುಷ್ಯರಿಗೂ ಒಂದು ಉತ್ತಮ ಪಾಠವನ್ನು ಹೇಳುತ್ತದೆ ಎಂಬುದರಲ್ಲಿ ಅನುಮಾನವೇ ಬೇಡ. ನಿಜವಾದ ನಾಯಕತ್ವ ಎಂದರೆ ಎಲ್ಲ ಜವಾಬ್ದಾರಿಯನ್ನೂ ತನ್ನ ಕೈಯಲ್ಲಿಟ್ಟುಕೊಳ್ಳುವುದಲ್ಲ. ಅಗತ್ಯವಿದ್ದಾಗ ಮುಂದೆ ನಿಂತು ತಂಡವನ್ನು ಮುನ್ನಡೆಸುವುದು, ಇತರರಿಗೂ ಅವಕಾಶ ನೀಡುವುದು ಮತ್ತು ಜವಾಬ್ದಾರಿಯನ್ನು ಹಂಚುವುದಾಗಿದೆ. ಮನುಷ್ಯನಿಗೆ ಪ್ರಕೃತಿಯ ಪುಟ್ಟ ಪುಟ್ಟ ಜೀವಿಗಳಿಂದಲೂ ಸಹಕಾರ, ನಾಯಕತ್ವ, ಒಗ್ಗಟ್ಟು ಸೇರಿದಂತೆ ಸಾಕಷ್ಟು ದೊಡ್ಡ ಪಾಠಗಳು ಕಲಿಯಲು ಇವೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ,(ಏಜೆನ್ಸೀಸ್).